ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬೆಳೆದ ಹೆಸರು ಬೆಳೆಗೆ ಕೀಟಗಳ ಕಾಟ ಜೊತೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.
Advertisement
ಮುಂಗಾರು ಹಂಗಾಮಿನ ಮಳೆಗಳು ಆರಂಭದಲ್ಲಿ ಅಲ್ಪಸ್ವಲ್ಪ ಸುರಿದ ಪರಿಣಾಮ ಈ ಬಾರಿ ಬೆಳೆಗಳು ಉತ್ತಮವಾಗಿ ಫಸಲು ಬರುತ್ತದೆಂದು ಹಿಗ್ಗಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಆದರೆ ಬೆಳೆದು ನಿಂತಿರುವ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು ರೈತರ ಕನಸಿಗೆ ಹಿನ್ನಡೆಯಾದಂತಾಗಿದೆ.
Related Articles
Advertisement
ಕಳೆದ 10 ದಿನಗಳಿಂದ ನಿತ್ಯ ಚಿಟಿ, ಚಿಟಿಯಾಗಿ ಮಳೆ ಸುರಿಯುತ್ತಿರುವುದರಿಂದ ಹೆಸರು ಬೆಳೆ ಉತ್ತಮ ಸ್ಥಿತಿಯಲ್ಲಿದೆ. ಬೆಳೆಗೆ ಮಂಕು ರೋಗ ಆವರಿಸುತ್ತಿದೆ. ಅಲ್ಲದೇ ಕೀಡೆಯ ಕಾಟ ವಿಪರೀತವಾಗಿದೆ. ಬೆಳೆಯ ರಕ್ಷಣೆ ರೈತರಿಗೆ ಸವಾಲಾಗಿದೆ. ಹೀಗಾಗಿ ಅನ್ನದಾತರು ಬೆಳೆ ಉಳಿಸಿಕೊಳ್ಳಲು ಹಳದಿ ರೋಗವಿರುವ ಬೆಳೆಯನ್ನು ಕೀಳುವಲ್ಲಿ ತಲ್ಲೀನರಾಗಿದ್ದಾರೆ.
ಈ ಬಾರಿ ವರುಣ ದೇವ ಕೃಪೆ ತೋರಿದ್ದಾನೆ. ಬಿತ್ತಿದ ಬೆಳೆ ಕೈಗೆಟುಕತ್ತದೆ ಎನ್ನವಷ್ಟರಲ್ಲೇ ಹೆಸರು ಬೆಳೆಗೆ ತಗುಲಿದ ಹಳದಿ ರೋಗದಿಂದ ಬೆಳೆ ನಾಶಗೊಳ್ಳುತ್ತಿದೆ. ಇದರಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಬೆಳೆಯನ್ನೇ ನಂಬಿ ಕುಳಿತ ರೈತರನ್ನು ಒಂದಲ್ಲ ಒಂದು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ಈ ಸಲ ಮಳಿಯಪ್ಪ ಕೈ ಹಿಡಿದಾನ್ ಫಸಲ ಚೊಲೋ ಬಂದ್, ಏನೋ ಚಾರು, ಚೂರು ರೊಕ್ಕ ಮಾಡಕೊಂತಿವಿ ಅಂತ್ ಬಾಳ್ ಆಸೆ ಇಟ್ಕೊಂಡಿವ್ರಿ. ಆದ್ರ ಕೀಡಿ ಹುಳು, ಹಳದಿ ರೋಗ ಬೆಳಿ ಹಾಳ್ ಮಾಡಾಕತ್ಯಾವ್ರಿ. ರೈತರಿಗೆ ಒಂದಿಲ್ಲಾ ಒಂದು ಕಾಟ ತಪ್ಪಿದ್ದಲ್ರಿ.•ಪ್ರಭಯ್ಯ ಹಿರೇಮಠ,
ಕೊಡಗಾನೂರ ರೈತ ತಾಲೂಕಿನಾದ್ಯಂತ ಈ ಬಾರಿ ಬೆಳೆದ ಹೆಸರು ಫಸಲು ಉತ್ತಮ ಸ್ಥಿತಿಯಲ್ಲಿವೆ. ಆದರೆ ಹೆಸರು ಬೆಳೆಗೆ ತಗುಲಿದ ಕೀಡಿ ಹುಳುಗಳ ನಾಶಕ್ಕೆ ಲ್ಯಾಂಬಡಾ ಮತ್ತು ಪ್ರಪೊಫಸ್ ಕ್ರೀಮಿನಾಶಕ ಸಿಂಪರಣೆ ಮಾಡಬೇಕು. ಈ ಕ್ರಿಮಿನಾಶಕ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದು ಬೆಳೆ ರಕ್ಷಣೆಗೆ ಮುಂದಾಗಬೇಕು. ಜೊತೆಗೆ ಬೆಳೆಗೆ ತಗುಲಿದ ಹಳದಿ ರೋಗ ಕಾಣುವ ಹಳದಿ ಗಿಡಗಳನ್ನು ಕಿತ್ತೂಗೆಯಬೇಕು.
•ಸಿದ್ದೇಶ ಕೋಡಳ್ಳಿ,
ತಾಲೂಕು ಸಹಾಯಕ ಕೃಷಿ ನಿರ್ದೇಶಕ.