ಗಜೇಂದ್ರಗಡ: ಕೋವಿಡ್-19 ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಗುರುತಿಸಿದ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ ಅತ್ಯಂತ ದುಬಾರಿಯಾಗಿದ್ದು, ಕೋವಿಡ್ ರೋಗಿಗಳನ್ನು ದೋಚಲು ಅನುವು ಮಾಡಿಕೊಟ್ಟಂತಾಗಿದೆ. ರಾಜ್ಯ ಸಚಿವ ಸಂಪುಟ ಅದಕ್ಕೆ ಅನುಮೋದನೆ ನೀಡಬಾರದೆಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಬಾಲು ರಾಠೊಡ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದರ ನಿಗದಿಯು ಸರ್ಕಾರದಲ್ಲಿನ ಸಾರ್ವಜನಿಕ ಹಣವನ್ನು ಕಾನೂನು ರೀತಿಯಲ್ಲಿ ಖಾಸಗಿ ಆಸ್ಪತ್ರೆಗಳ ಲಾಬಿಯ ತಿಮಿಂಗಿಲಗಳಿಗೆ ವರ್ಗಾಯಿಸಲಿದೆ ಎಂದು ಆರೋಪಿಸಿದರು.
ಕೋವಿಡ್ ಸಾಂಕ್ರಾಮಿಕಕ್ಕೆ ತುತ್ತಾಗಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವುದು ಸರ್ಕಾರಗಳ ಜವಾಬ್ದಾರಿ. ಅಂತಹ ಜವಾಬ್ದಾರಿಯನ್ನು ಖಾಸಗಿ ಆಸ್ಪತ್ರೆಗಳಿಗೆ ಸೋಂಕಿತರ ಸಂಖ್ಯೆ ಹೆಚ್ಚಳ ನೆಪಮಾಡಿ ವರ್ಗಾಯಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವು ಖಾಸಗಿ ಆಸ್ಪತ್ರೆಗಳ ವಾಣಿಜ್ಯೀಕರಣದ ಲಾಬಿಗೆ ಮಣೆ ಹಾಕಿದಂತಾಗಿದೆ. ಸರ್ಕಾರಗಳು ನಿರಂತರವಾಗಿ ಆರೋಗ್ಯ ಸೇವೆ ಖಾಸಗೀಕರಣಗೊಳಿಸುತ್ತಾ ಸಾರ್ವಜನಿಕ ಹೂಡಿಕೆಯನ್ನು ಕಡಿಮೆ ಮಾಡುತ್ತಾ ಬಂದ ನೀತಿಗಳ ಪರಿಣಾಮವಾಗಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒಟ್ಟಾರೆ ಜಿಡಿಪಿ ಶೇ. 3ರಷ್ಟು ಖರ್ಚು ಮಾಡಬೇಕೆಂಬ ಬೇಡಿಕೆ ಕಡೆಗಣಿಸಿದ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಕಾರಣಕ್ಕೂ ಕಾರ್ಯಪಡೆ ಶಿಫಾರಸು ಮಾಡಿರುವ ಈ ದುಬಾರಿ ಶುಲ್ಕಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಬಾರದು ಎಂದು ಮನವಿ ಮಾಡಿದ್ದಾರೆ.