ಗಜೇಂದ್ರಗಡ: ಭಾರತೀಯ ಸಂಸ್ಕೃತಿ ಧಾರ್ಮಿಕ ನೆಲಗಟ್ಟಿನ ಮೇಲೆ ನಿಂತಿದೆ. ದಯೆ, ಧರ್ಮ, ನ್ಯಾಯ, ನೀತಿ ಮತ್ತು ಅಹಿಂಸಾ ತತ್ವಾದರ್ಶಗಳನ್ನು ಸಾರುವ ದೇಶ ನಮ್ಮದಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಗೋಗೇರಿ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸಮೀಪದ ಗೋಗೇರಿ ಗ್ರಾಮದ ಶ್ರೀ ಹೊನ್ನಕೇರಿ ಮಲ್ಲಯ್ಯ ಜಾತ್ರಾ ಮಹೋತ್ಸವ ಹಾಗೂ ಪುರಾಣ ಮಹಾ ಮಂಗಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ, ರಾಷ್ಟ್ರಪ್ರೇಮ ಮತ್ತು ಕ್ರಿಯಾಶೀಲತೆ ಬೆಳೆಯಲು ಮಾರ್ಗದರ್ಶನ ಮಾಡುವ ಅವಶ್ಯಕತೆ ಇದೆ.
ಧರ್ಮದ ಸಾತ್ವಿಕ ಆಚರಣೆಗಳ ಮೂಲಕ ಸಮಾಜದಲ್ಲಿ ಶಾಂತಿ, ಸಾಮರಸ್ಯ ಮೂಡಿಸುವ ಕಾರ್ಯ ಸರ್ವರಿಂದಲೂ ಆಗಬೇಕಿದೆ. ಸರ್ವ ಸಮುದಾಯಗಳ ಜನರ ಭಾವನೆಗಳನ್ನು ಒಂದುಗೂಡಿಸುವ ಕೆಲಸದಲ್ಲಿ ಧರ್ಮಪೀಠಗಳ ಪಾತ್ರ ಮಹತ್ವದ್ದಾಗಿದೆ. ದೇವರು ಮನುಷ್ಯನಿಗೆ ನೆಮ್ಮದಿ ನೀಡುವ ಒಂದು ಶಕ್ತಿ. ದೇವಾಲಯಗಳು ಶ್ರದ್ಧೆಯ ತಾಣಗಳಾಗಿವೆ. ಮಾನವನ ದೇಹವನ್ನು ದುಡಿಮೆಗೆ, ಮನಸ್ಸು ಭಗವಂತನಿಗೆ ಅರ್ಪಿಸಿ ಜೀವನದಲ್ಲಿ ಶ್ರೇಯಸ್ಸು ಕಾಣಬೇಕಾಗಿದೆ. ಅಂದಾಗ ಮಾತ್ರ ಧಾರ್ಮಿಕ ಚಿಂತನೆಗೆ ಅರ್ಥ ಬರುತ್ತದೆ ಎಂದರು.
ಯಲಬುರ್ಗಾದ ಶ್ರೀಧರ ಮುರುಡಿ ಹಿರೇಮಠದ ಶ್ರೀ ಬಸವಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ದಿನನಿತ್ಯದ ಜೀವನದ ಜಂಜಾಟಗಳ ನಡುವೆ ಒಂದಿಷ್ಟು ಸಮಯವನ್ನು ದೇವರ ಕಾರ್ಯಗಳಿಗೆ ಮೀಸಲಿಡಬೇಕು. ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದಾಗ ಮನಸ್ಸು ಹಗುರವಾಗುತ್ತದೆ. ನಾವು ಕೂಡಿಟ್ಟ ಗಂಟು ನಮ್ಮ ಹಿಂದೆ ಬರುವುದಿಲ್ಲ. ನಾಲ್ಕು ಜನರಿಗೆ ಸಹಾಯವಾಗುವಂತಹ ಕೆಲಸ ಮಾಡಿದರೆ ಅದು ನಮ್ಮ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುತ್ತದೆ ಎಂದರು.
ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಹನುಮಪ್ಪ ಹೊರಪೇಟಿ, ಮಲ್ಲಿಕಾರ್ಜುನ್ ಗಾರಗಿ, ವಿ.ಬಿ. ಸೋಮನಕಟ್ಟಿಮಠ, ಯುಸೂಫ್ ಇಟಗಿ, ಐ.ಎಚ್. ಬಾಗವಾನ, ಕೆ.ಎಸ್. ಕೊಡತಗೇರಿ, ಶೇಖರಪ್ಪ ಯಗರಿ, ಸದಾಶಿವನಗೌಡ ಪಾಟೀಲ, ಸಂಬಾಜಿ ಗಾರಗಿ, ಕಳಕಪ್ಪ ಗಾರಗಿ, ಇಮಾಮಸಾಬ ಬಾಗವಾನ, ಮಲ್ಲಪ್ಪ ಭೋಸಲೆ, ಕಂಠೆಪ್ಪ ಮಾದರ, ರಾಜು ವಾಲಿಕಾರ, ರಾಜಕುಮಾರ ಛೋಪಡೆ, ಶಂಕ್ರಪ್ಪ ಗುರಿಕಾರ ಇದ್ದರು.