Advertisement

ಕಳ್ಳಭಟ್ಟಿಗೆ ಮೊರೆ ಹೋದ ಮದ್ಯಪ್ರಿಯರು

01:57 PM Apr 11, 2020 | Naveen |

ಗಜೇಂದ್ರಗಡ: ಲಾಕ್‌ಡೌನ್‌ ವೇಳೆ ಮದ್ಯ ಸಿಗದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಳ್ಳಭಟ್ಟಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಅಕ್ರಮ ದಂಧೆ ಅಲ್ಲಲ್ಲಿ ತಲೆ ಎತ್ತಿದೆ. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ 15 ದಿನಗಳಿಂದ ಕಳ್ಳಭಟ್ಟಿ ಮಾರಾಟ ನಡೆದಿದೆ. ಲಾಕ್‌ಡೌನ್‌ ಪ್ರಾರಂಭದ ದಿನಗಳಲ್ಲಿ ಕೆಲ ವೈನ್‌ಶಾಪ್‌ನವರು ಒಂದಿಷ್ಟು ಮದ್ಯದ ಬಾಟಲ್‌ಗ‌ಳನ್ನು ತೆಗೆದಿಟ್ಟುಕೊಂಡು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದರು. ಅವೆಲ್ಲ ಖಾಲಿಯಾದ ನಂತರ ಮದ್ಯ ಪ್ರಿಯರು ಕಳ್ಳಭಟ್ಟಿ ಮೊರೆ ಹೋಗಿದ್ದಾರೆ. ಆದರೆ ಇದು ಎಲ್ಲರಿಗೂ ಸಿಗುವುದಿಲ್ಲ, ದಂಧೆಕೋರರು ಕೋಡ್‌ವರ್ಡ್‌ ಹೇಳುವವರಿಗೆ ಮಾತ್ರ ನೀಡುತ್ತಾರೆ.

Advertisement

ಮೂರು ಪಟ್ಟು ಬೆಲೆ: ಒಂದು ಲೀಟರ್‌ ಕಳ್ಳಭಟ್ಟಿಗೆ 50 ರೂ. ಇದ್ದ ಬೆಲೆ ಇದೀಗ 200ರಿಂದ 250ಕ್ಕೆ ಮಾರಾಟ ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮದ್ಯ ಸಿಗದಿರುವ ಹಿನ್ನೆಲೆಯಲ್ಲಿ ಕೆಲವರು ಹೊರವಲಯ, ಹಳ್ಳಿಗಳಿಗೆ ಹೋಗಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟವರಿಗೆ ಹೆಚ್ಚು ಬೆಲೆ ಕೊಟ್ಟು ಕುಡಿದು ಬರುತ್ತಿದ್ದಾರೆ. ತಾಲೂಕಿನಲ್ಲಿ ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಮತ್ತು ತಯಾರಿಸುವಿಕೆಗೆ ಅಬಕಾರಿ ಇಲಾಖೆ ಬಹುತೇಕ ಕಡಿವಾಣ ಹಾಕಿತ್ತು. ಆದರೀಗ ಮತ್ತೆ ತಲೆ ಎತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಈಗಾಗಲೇ ತಾಲೂಕಿನ ಬಹುತೇಕ ಕಡೆ ದಾಳಿ ನಡೆಸಿ ಕಳ್ಳಭಟ್ಟಿ ವಶಕ್ಕೆ ಪಡೆದಿದ್ದಾರೆ. ಇನ್ನಷ್ಟು ಪರಿಣಾಮಕಾರಿ ದಾಳಿ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ .

ಲಾಕ್‌ಡೌನ್‌ ವೇಳೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಿಲ್ಲ. ನಮ್ಮ ಕಷ್ಟ ಹೇಳತೀರದಾಗಿದೆ. ನಿತ್ಯ ಸ್ವಲ್ಪವಾದರೂ ಮದ್ಯ ಸೇವನೆ ಮಾಡದಿದ್ದರೆ, ನಮ್ಮ ದೇಹ ಚಲನವಾಗುವುದಿಲ್ಲ. ಹೀಗಾಗಿ ಎಷ್ಟೇ ಬೆಲೆಯಾದರೂ ಜರ್ಮನ್‌ ಸ್ಕಾಚ್‌ (ಕಳ್ಳಭಟ್ಟಿ ಸಾರಾಯಿ) ಕುಡಿಯುತ್ತಿದ್ದೆವೆ.
ಹೆಸರು ಹೇಳಲಿಚ್ಛಿಸದ, ಮದ್ಯ ವ್ಯಸನಿ

ಕಳ್ಳಭಟ್ಟಿ ಮಾರಾಟ ಮತ್ತು ತಯಾರಿಸುವವರ ವಿರುದ್ಧ ಇಲಾಖೆ ಸಮರ ಸಾರಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ 6 ದಿನಗಳಲ್ಲಿ 15 ಪ್ರಕರಣಗಳನ್ನು ದಾಖಲಿಸಲಾಗಿದೆ. 12 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದೇವೆ. 48 ಲೀಟರ್‌ ಕಳ್ಳಭಟ್ಟಿ, 8.50 ಲೀಟರ್‌ ಲಿಕ್ಕರ್‌ ವಶಪಡಿಸಿಕೊಂಡಿದ್ದೇವೆ.
ಶ್ರೀಶೈಲ ಅಕ್ಕಿ,
ರೋಣ ವಲಯ ಅಬಕಾರಿ ನಿರೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next