Advertisement

ಗಜೇಂದ್ರಗಡ ಎಪಿಎಂಸಿ ಕುಡಿಯುವ ನೀರಿನ ಘಟಕ ಬಂದ್‌

01:29 PM Jan 29, 2020 | Suhan S |

ಗಜೇಂದ್ರಗಡ: ದಣಿದವರ ದಾಹ ನೀಗಿಸುವ ಉದ್ದೇಶದಿಂದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಬಂದ್‌ ಆಗಿದ್ದು, ರೈತರು, ವರ್ತಕರು ಮತ್ತು ಶ್ರಮಿಕರು ಶುದ್ಧ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಾದ ಗಜೇಂದ್ರಗಡದಲ್ಲಿ 2015-16ನೇ ಸಾಲಿನ ಮುಖ್ಯಮಂತ್ರಿಗಳ ಆಯವ್ಯಯದಡಿ 3 ಲಕ್ಷ ರೂ. ಅನುದಾನದಲ್ಲಿ 2018ರಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಸೂಕ್ತ ನಿರ್ವಹಣೆ ಕೊರತೆಯಿಂದ ಬೀಗ ಜಡಿಯಲಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಶುದ್ಧ ನೀರಿನ ಘಟಕ ಬಂದ್‌ ಆಗಿರುವುದು ಮಾರುಕಟ್ಟೆಗೆ ಆಗಮಿಸುವ ರೈತರು ಮತ್ತು ಶ್ರಮಿಕರಿಗೆ ತೀವ್ರ ತೊಂದರೆಯಾದಂತಾಗಿದೆ.

Advertisement

ಎಪಿಎಂಸಿ ಆವರಣದಲ್ಲಿ 50ಕ್ಕೂ ಅಧಿಕ ವರ್ತಕರ ಅಂಗಡಿಗಳಿಗೆ. ನಿತ್ಯ ನೂರಾರು ಜನ ರೈತರು ಮಾರುಕಟ್ಟೆಗೆ ವಹಿವಾಟಿಗಾಗಿ ಆಗಮಿಸುತ್ತಾರೆ. ಅಲ್ಲದೇ ನೂರಾರು ಶ್ರಮಿಕರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ ಶುದ್ಧ ನೀರಿನ ಘಟಕ ಆಡಳಿತ ವ್ಯವಸ್ಥೆ ನಿರ್ಲಕ್ಷ ದಿಂದಾಗಿ ಬೀಗ ಜಡಿಯಲಾಗಿದೆ. ಅವ್ಯವಸ್ಥೆಯ ಆಗರವಾಗಿರುವ ಎಪಿಎಂಸಿಯಲ್ಲಿ ರೈತರಿಗೆ ಕನಿಷ್ಠ ಕುಡಿಯುವ ನೀರಿನ ಘಟಕವೂ ಇಲ್ಲದಂತಾಗಿ, ರೈತರು ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.

ಕೆಲ ತಿಂಗಳಿಗೆ ಸೀಮಿತವಾದ ಘಟಕ: 2018ರಲ್ಲಿ ಪ್ರಾರಂಭವಾದ ಶುದ್ಧ ಕುಡಿಯುವ ನೀರಿನ ಘಟಕ ಆರಂಭದಲ್ಲಿ ಕೆಲ ತಿಂಗಳು ಕಾರ್ಯ ನಿರ್ವಹಿಸಿರುವುದು ಬಿಟ್ಟರೆ ಈವರೆಗೂ ಘಟಕ ಬಂದಾಗಿದೆ. ದಣಿದವರಿಗೆ ನೀರೊದಗಿಸಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಎಪಿಎಂಸಿ ಆಡಳಿತ ಹಿನ್ನಡೆ ಅನುಭವಿಸಿದ ಪರಿಣಾಮ ಕುಡಿಯುವ ನೀರಿನ ಸೌಲಭ್ಯ ದೊರೆಯದಂತಾಗಿದೆ ಎನ್ನವುದು ಅನ್ನದಾತರ ಅಳಲಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಲಕ್ಷಾಂತರ ಅನುದಾನ ಬಿಡುಗಡೆಗೊಳಿಸಿ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ಆದರೆ ಸರ್ಕಾರದ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಕೂಡಲೇ ಶುದ್ಧ ನೀರಿನ ಘಟಕ ಪುನಾರಂಭಕ್ಕೆ ಆಡಳಿತ ಮಂಡಳಿ ಸೂಕ್ತ ಕ್ರಮ ಜರುಗಿಸಬೇಕೆನ್ನುವುದು ರೈತರ ಆಗ್ರಹವಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಈ ಮೊದಲು ಕೊರೆಯಿಸಲಾದ ಬೋರವೆಲ್‌ನಲ್ಲಿ ಅಂತರ್ಜಲ ಕಡಿಮೆಯಾಗಿತ್ತು. ಮತ್ತೂಂದು ಬೋರವೆಲ್‌ಕೊರೆಯಿಸಿದರೂ ನಿರಿಕ್ಷಿಸಿದಷ್ಟು ನೀರು ದೊರೆತಿಲ್ಲ. ಹೀಗಾಗಿ ಘಟಕ ಬಂದ್‌ ಆಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಶುದ್ಧ ನೀರಿನ ಘಟಕ ಆರಂಭಕ್ಕೆ ಕ್ರಮ ಜರುಗಿಸಲಾಗುವುದು. – ಪರಶುರಾಮ ಅಳಗವಾಡಿ, ಎಪಿಎಂಸಿ ಅಧ್ಯಕ್ಷ

Advertisement

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next