Advertisement
ಬಳ್ಳೆ ಆನೆ ಶಿಬಿರದಿಂದ ಅರ್ಜುನ, ಮತ್ತಿಗೋಡು ಆನೆಶಿಬಿರದಿಂದ ವರಲಕ್ಷ್ಮೀ, ದುಬಾರೆ ಆನೆ ಶಿಬಿರದಿಂದ ಗೋಪಿ, ವಿಕ್ರಮ, ಧನಂಜಯ ಆನೆಗಳನ್ನು ನಾಗರಹೊಳೆಗೆ ಕರೆತಂದ ಮಾವುತ ಮತ್ತು ಕವಾಡಿಗಳು, ಭಾನುವಾರ ಮುಂಜಾನೆಯೇ ನಾಗರಹೊಳೆ ಅರಣ್ಯ ಪ್ರದೇಶದ ಮೂರ್ಕಲ್ ಕೆರೆಯಲ್ಲಿ ಆನೆಗಳ ಮೈತೊಳೆದು ಶುಚಿಗೊಳಿಸಿ, ಸಿಂಗರಿಸಿದ ನಂತರ ತಾವೂ ಪೋಷಾಕು ಧರಿಸಿದ ಮಾವುತ-ಕವಾಡಿಗರು ವಾಡಿಕೆಯಂತೆ ಅಲ್ಲಿನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವೀರನಹೊಸಹಳ್ಳಿ ಬಳಿಯ ಹೆಬ್ಟಾಗಿಲಿಗೆ ಕರೆತಂದರು.
Related Articles
Advertisement
ಪೂಜೆ ಸಲ್ಲಿಸಿದ ನಂತರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಾಪುರ, ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ರವಿಶಂಕರ್ ಮೊದಲಾದವರು ಅರ್ಜುನ ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಆನೆಗಳಿಗೆ ಪುಷ್ಪವೃಷ್ಟಿಗರೆಯುವುದರೊಂದಿಗೆ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಪೂರ್ಣಕುಂಭ ಸ್ವಾಗತ: ಹೆಬ್ಟಾಗಿಲಿನಿಂದ ಹೊರಟ ಆನೆಗಳಿಗೆ ಪೂರ್ಣಕುಂಭ ಸ್ವಾಗತ, ಡೊಳ್ಳುಕುಣಿತ, ಕಂಸಾಳೆ ತಂಡದಿಂದ ವೈಭವಯುತ ಸ್ವಾಗತದೊರೆಯಿತು. ಅಲ್ಲಿಂದ ಮತ್ತೆ ನಾಗರಹೊಳೆ ಅರಣ್ಯದೊಳಗೆ ಆನೆಗಳನ್ನು ಕರೆದೊಯ್ದು ಲಾರಿಗಳಿಗೆ ಹತ್ತಿಸಿ ಮೈಸೂರಿಗೆ ಕಳುಹಿಸಿಕೊಡಲಾಯಿತು.
ಹಬ್ಬದ ವಾತಾವರಣ: ಮೈಸೂರು ರಾಜರ ಆಳ್ವಿಕೆಯ ಕಾಲದಲ್ಲಿ ಸ್ವತಃ ಮಹಾರಾಜರೇ ನಾಗರಹೊಳೆ ಅರಣ್ಯಕ್ಕೆ ಬಂದು ದಸರಾ ಮಹೋತ್ಸವಕ್ಕೆ ಆನೆಗಳನ್ನು ಕರೆತರುವಂತೆ ಮಾವುತರು, ಕವಾಡಿಗಳಿಗೆ ಫಲ ತಾಂಬೂಲ ನೀಡಿ ಆಹ್ವಾನ ಕೊಟ್ಟು ಹೋಗುತ್ತಿದ್ದರು. ಆದರೆ, ಪ್ರಜಾ ಸರ್ಕಾರದಲ್ಲಿ ದಸರಾ ನಾಡಹಬ್ಬವಾದ ನಂತರ ಈ ಸಂಪ್ರದಾಯವನ್ನು ಕೈಬಿಡಲಾಗಿತ್ತು. 2004ರಲ್ಲಿ ಎಚ್.ವಿಶ್ವನಾಥ್ ಅವರು ಅರಣ್ಯ ಖಾತೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದಾಗ ಸಂಪ್ರದಾಯ ಆಚರಣೆ ಸಲುವಾಗಿ ಗಜಪಯಣವನ್ನು ಆರಂಭಿಸಿದ್ದರು.
ಮೊದಲ ವರ್ಷ ಕಾಲ್ನಡಿಗೆಯಲ್ಲೇ ಆನೆಗಳನ್ನು ಮೈಸೂರಿಗೆ ಕರೆತರಲಾಗಿತ್ತು. ಆದರೆ, ಡಾಂಬರು ರಸ್ತೆಯಲ್ಲಿ ಭಾರೀ ದೂರ ನಡೆದಿದ್ದು, ಹಾಗೂ ಮಾರ್ಗ ಮಧ್ಯ ಹಳ್ಳಿಗರು ನೀಡಿದ ತಿಂಡಿಗಳನ್ನು ತಿಂದು ಆನೆಗಳ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಗಜಪಯಣದ ನಂತರ ಲಾರಿಗಳಲ್ಲಿ ಮೈಸೂರಿಗೆ ಕರೆತರುವ ಪದ್ಧತಿ ರೂಢಿಗೆ ಬಂತು.
ನಂತರದ ವರ್ಷಗಳಲ್ಲಿ ನಾಗರಹೊಳೆ ಹೆಬ್ಟಾಗಿಲ ಬದಲಿಗೆ ನಾಗಾಪುರ ಗಿರಿಜನ ಆಶ್ರಮ ಶಾಲೆ ಬಳಿಯಿಂದ ಗಜಪಯಣ ಏರ್ಪಡಿಸಲಾಗುತ್ತಿತ್ತು. ಈ ಬಾರಿ ಎಚ್.ವಿಶ್ವನಾಥ್ ಅವರೇ ಹುಣಸೂರು ಶಾಸಕರಾಗಿರುವುದರಿಂದ ಆಸಕ್ತಿವಹಿಸಿ ಮತ್ತೆ ವೀರನಹೊಸಹಳ್ಳಿ ಬಳಿಯ ನಾಗರಹೊಳೆ ಬಳಿಯ ಹೆಬ್ಟಾಗಿಲಿನಿಂದಲೇ ಗಜಪಯಣಕ್ಕೆ ಏರ್ಪಾಡು ಮಾಡಿಸಿದ್ದರು. ಇದು ಸುತ್ತಮುತ್ತಲಿನ ಹಳ್ಳಿಗರಲ್ಲಿ ಹಬ್ಬದ ವಾತಾವರಣ ಮೂಡಿಸಿತ್ತು. ಸಿಂಗಾರಗೊಂಡು ಮೈಸೂರಿಗೆ ಹೊರಟು ನಿಂತ ಗಜಪಡೆಯ ಜೊತೆಗೆ ನಿಂತು ಫೋಟೋ-ಸೆಲ್ಫಿ ತೆಗೆದು ಕೊಂಡು ಜನತೆ ಸಂಭ್ರಮಿಸಿದರು.