Advertisement

ಬೇಡಿಕೆ ಈಡೇರಿಕೆಗಾಗಿ ಗಜಪಯಣದ ದಿನ ಪ್ರತಿಭಟನೆ

12:01 PM Aug 09, 2017 | Team Udayavani |

ಮೈಸೂರು: ನಾಗಾಪುರ ಪುನರ್‌ವಸತಿ ಕೇಂದ್ರದ 280 ಕುಟುಂಬಗಳಿಗೆ ನೀಡಲಾಗಿರುವ 731 ಹೆಕ್ಟೇರ್‌ ಪ್ರದೇಶವನ್ನು ಒಂದೇ ಗ್ರಾಪಂ ವ್ಯಾಪ್ತಿಗೆ ಸೇರಿಸಿ, ಒಂದೇ ಸರ್ವೆ ನಂಬರ್‌ ನೀಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಆ.12ರಂದು ನಡೆಯುವ ದಸರಾ ಗಜಪಯಣದ ವೇಳೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಆದಿವಾಸಿ ಹೋರಾಟಗಾರ ಎಂ.ಬಿ.ಪ್ರಭು ಎಚ್ಚರಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಲಿ ಯೋಜನೆ ಜಾರಿ ಹಿನ್ನೆಲೆಯಲ್ಲಿ 1999ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ 280 ಗಿರಿಜನ ಕುಟುಂಬಗಳ ಪುನರ್ವಸತಿಗಾಗಿ 731 ಹೆಕ್ಟೇರ್‌ ಪ್ರದೇಶವನ್ನು ಹುಣಸೂರು ತಾಲೂಕಿನ ನಾಗಾಪುರದಲ್ಲಿ ಮಂಜೂರು ಮಾಡಲಾಗಿತ್ತು. ಅದರಂತೆ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಜಮೀನು ಹಾಗೂ 3 ಎಕರೆ ಸೌದೆ ಸಂಗ್ರಹವನ, 100 ಎಕರೆ ಹುಲ್ಲುಗಾವಲನ್ನು ಸಾಮೂಹಿಕ ಒಡೆತನದಲ್ಲಿ ನೀಡಲಾಗಿತ್ತು.

ಆದರೆ ಮಂಜೂರಾದ ಭೂಮಿಯನ್ನು ಸಂರಕ್ಷಿಸಿ, ಸರ್ವೆ ನಡೆಸಿ ಫ‌ಲಾನುಭವಿಗಳಿಗೆ ನೀಡುವ ಬಗ್ಗೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇದರ ಪರಿಣಾಮ 200 ಹೆಕ್ಟೇರ್‌ ಭೂಮಿಯನ್ನು ಸ್ಥಳೀಯ ಪ್ರಭಾವಿಗಳು ಹಾಗೂ ಟಿಬೆಟಿಯನ್ನರು ಅತಿಕ್ರಮಿಸಿಕೊಂಡಿದ್ದು, ಇದರಿಂದಾಗಿ ಪುನರ್ವಸತಿಗೊಂಡ ಆದಿವಾಸಿಗಳಿಗೆ ಮಂಜೂರಾಗಿರುವ ಭೂಮಿ ಪೂರ್ಣ ಪ್ರಮಾಣದಲ್ಲಿ ಲಭಿಸದೆ ತೊಂದರೆ ಅನುಭವಿಸುವಂತಾಗಿದೆ. ಈ ಪೈಕಿ ವೀರನಹೊಸಹಳ್ಳಿ ಮತ್ತು ನಾಗಾಪುರ ಹಾಡಿಯಲ್ಲಿ 19 ಕುಟುಂಬಗಳು ಭೂಮಿ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಪುನರ್ವಸತಿಗೊಂಡ ಆದಿವಾಸಿಗಳು ತಮ್ಮ ನ್ಯಾಯಯುತ ಸವಲತ್ತುಗಳನ್ನು ಪಡೆಯಲು 17 ವರ್ಷದಿಂದ ಸಾಕಷ್ಟು ಹೋರಾಟ ನಡೆಸುತ್ತಿದ್ದರು, ಯಾವುದೇ ಪ್ರಯೋಜನವಾಗಿಲ್ಲ, ಇತ್ತೀಚೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಕಂದಾಯ ಅದಾಲತ್‌ನಲ್ಲಿ ಆದಿವಾಸಿಗಳ ಬೇಡಿಕೆಗಳನ್ನು ಮುಂದಿಡಲಾಗಿತ್ತಾದರೂ ಸಭೆಯಲ್ಲಿ ಯಾವುದೇ ಪರಿಹಾರ ದೊರೆತಿಲ್ಲ. ಹೀಗಾಗಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.

ಆದ್ದರಿಂದ ಸರ್ಕಾರ ಇತ್ತ ಗಮನವಹಿಸಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 731 ಎಕ್ಟೇರ್‌ ಭೂಮಿಯನ್ನು ಅಳೆದು, ಪೂರ್ಣ ಪ್ರಮಾಣದಲ್ಲಿ ವಿತರಿಸಬೇಕು, ಪ್ರಭಾವಿಗಳು ಹಾಗೂ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿರುವ ಭೂಮಿಯನ್ನು ಆದಿವಾಸಿಗಳಿಗೆ ನೀಡಬೇಕು, ಗಿರಿಜನರಿಗೆ ಪ್ರತ್ಯೇಕ ಉಪ ಬಜೆಟ್‌ ಮಂಡಿಸಬೇಕೆಂಬ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತಿದೆ. ಇದಕ್ಕಾಗಿ ಆ.12ರಂದು ಭೂಮಿ ವಂಚಿತ 19 ಕುಟುಂಬದ ಸದಸ್ಯರು ದಸರಾ ಮಹೋತ್ಸವದ ಖ್ಯಾತಿಗೆ ಧಕ್ಕೆ ಉಂಟಾಗದ ರೀತಿಯಲ್ಲಿ ದಸರಾ ಗಜಪಯಣದ ವೇಳೆ ನಾಗಾಪುರಹಾಡಿ ಬಳಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

Advertisement

ನಾಗಾಪುರ ಹಾಡಿಯ ಗಿರಿಜನ ಹೋರಾಟಗಾರರ ಜೆ.ಕೆ.ತಿಮ್ಮಯ್ಯ, ನಾಗಾಪುರ ಗಿರಿಜನ ವ್ಯವಸಾಯ ಆಂದೋಲನದ ಜೆ.ಎ.ಹರೀಶ್‌, ಶಂಕರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next