Advertisement

Mysuru: ಮರಳಿ ಕಾಡಿನತ್ತ ಪ್ರಯಾಣ ಬೆಳೆಸಿದ ಗಜಪಡೆ

12:14 AM Oct 15, 2024 | Team Udayavani |

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕಾಗಿ ಎರಡು ತಿಂಗಳ ಹಿಂದೆ ಕಾಡಿನಿಂದ ಆಗಮಿಸಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಶನಿವಾರ ನಡೆದ ಆನೆಗಳು ಜಂಬೂ ಸವಾರಿಯನ್ನು ಯಶಸ್ವಿಯಾಗಿ ಪೂರೈಸಿ ತಮ್ಮ ಶಿಬಿರದತ್ತ ಪ್ರಯಾಣ ಬೆಳೆಸಿದವು.

Advertisement

ಅರಮನೆ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಅಭಿಮನ್ಯು ನೇತೃತ್ವದಲ್ಲಿ ಎಲ್ಲ ಆನೆಗಳಿಗೂ ವಿಶೇಷ ಪೂಜೆ ಸಲ್ಲಿಸಿ, ಬೆಲ್ಲ, ಕಬ್ಬು, ತೆಂಗು, ಬಾಳೆ ಹಣ್ಣು ನೀಡಿ ಬೀಳ್ಕೊಡುಗೆ ನೀಡಲಾಯಿತು.

ಕಳೆದೆರೆಡು ತಿಂಗಳಿಂದ ನಾನಾ ಹಂತದ ತಾಲೀಮಿನಲ್ಲಿ ಭಾಗವಹಿಸಿ, ನಗರದ ವಾತಾವರಣಕ್ಕೆ ಒಗ್ಗಿದ್ದ ಆನೆಗಳು, ಒಲ್ಲದ ಮನಸ್ಸಿನಲ್ಲೇ ಮರಳಿ ತಮ್ಮ ಶಿಬಿರದತ್ತ ಹೊರಟವು. ಈ ವೇಳೆ ಅರಮನೆ ಅಂಗಳದಲ್ಲಿ ಭಾವನಾತ್ಮಕ ಸನ್ನಿವೇಶ ನಿರ್ಮಾಣವಾಗಿತ್ತು. ನಮ್ಮೊಳಗೊಬ್ಬರಾಗಿದ್ದ ಗಜಪಡೆಯನ್ನು ಭಾರವಾದ ಮನಸ್ಸಿನಿಂದಲೇ ಹೋಗಿ ಬನ್ನಿ ಎಂದು ಕಳುಹಿಸಿಕೊಡಲಾಯಿತು. ಹೊಸ ವಾತಾವರಣಕ್ಕೆ ಬಂದು ಕುಣಿದು ಕುಪ್ಪಳಿಸುತ್ತಿದ್ದ ಮಾವುತರು, ಕಾವಾಡಿಗಳ ಮಕ್ಕಳು ಸಹ ಬೇಸರದಿಂದಲೇ ಬ್ಯಾಗುಗಳನ್ನು ಎತ್ತಿಕೊಂಡು ತಮ್ಮ ಊರಿನತ್ತ ಹೆಜ್ಜೆ ಹಾಕಿದರು. ಪ್ರತಿನಿತ್ಯ ಆನೆಗಳನ್ನು ನೋಡಿ ಖುಷಿ ಪಡುತ್ತಿದ್ದ ಮೈಸೂರಿನ ಜನತೆ ಸಪ್ಪೆ ಮೋರೆಯಲ್ಲಿಯೇ ಗಜಪಡೆಯನ್ನು ಬೀಳ್ಕೊಟ್ಟರು.

ಸಾಂಪ್ರದಾಯಿಕ ಪೂಜೆ:
ಆನೆಗಳಿಗೆ ಪುರೋಹಿತ ಪ್ರಹ್ಲಾದರಾವ್‌ ನೇತೃತ್ವದಲ್ಲಿ ಅರಮನೆ ಮಂಡಳಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನಂತರ ಬೂದುಗುಂಬಳ ಒಡೆದು ದೃಷ್ಟಿ ತೆಗೆದು ಆನೆಗಳಿಗೆ ವಿವಿಧ ಹಣ್ಣು ಹಂಪಲು ಹಾಗೂ ಬೆಲ್ಲ ನೀಡಲಾಯಿತು. ಪೂಜೆ ಬಳಿಕ ಮಾವುತರು ಹಾಗೂ ಕಾವಾಡಿಗರ ಕುಟುಂಬ ವರ್ಗದವರಿಗೆ ಉಪಹಾರ ನೀಡಿ ಆನೆಗಳೊಂದಿಗೆ ಅವರನ್ನು ಬೀಳ್ಕೊಡಲಾಯಿತು. ಆನೆ ಶಿಬಿರದತ್ತ ಮರಳಿದ ಮಾವುತರು, ಕಾವಾಡಿಗಳಿಗೆ ಗೌರವಧನದ ಜತೆಗೆ ದಿನಸಿ ನೀಡಲಾಯಿತು. ನಂತರ ಎಲ್ಲಾ ಆನೆಗಳನ್ನು ಲಾರಿ ಹತ್ತಿಸಿ ಆಯಾ ಆನೆಗಳ ಶಿಬಿರಗಳಿಗೆ ಕಳುಹಿಸಲಾಯಿತು. ಅರಮನೆ ಆವರಣದಿಂದ ಹೊರಟ ಆನೆಗಳಿಗೆ ಮೈಸೂರಿನ ಜನತೆ ಭಾವನಾತ್ಮಕ ವಿದಾಯ ಹೇಳಿದರು. ರಸ್ತೆಯಲ್ಲಿದ್ದವರು ಕೈಬೀಸಿ ಆನೆಗಳಿಗೆ ಅಭಿನಂದನೆ ಸಲ್ಲಿಸಿ ಬೀಳ್ಕೊಟ್ಟರು.

2 ತಂಡದಲ್ಲಿ ಆಗಮಿಸಿದ್ದವು:
ಮೊದಲ ತಂಡದಲ್ಲಿ ಮತ್ತಿಗೋಡು ಆನೆ ಶಿಬಿರದ ಕ್ಯಾಪ್ಟನ್‌ ಅಭಿಮನ್ಯು, ಭೀಮ, ಏಕಲವ್ಯ, ರಾಂಪುರ ಆನೆ ಶಿಬಿರದ ರೋಹಿತ್‌, ದೊಡ್ಡಹರವೆ ಆನೆ ಶಿಬಿರದ ಲಕ್ಷ್ಮೀ, ವರಲಕ್ಷ್ಮೀ, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಧನಂಜಯ, ಗೋಪಿ, ಕಂಜನ್‌ ಅರಮನೆಗೆ ಬಂದಿದ್ದವು. ಎರಡನೇ ತಂಡದಲ್ಲಿ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಿಂದ ಗಂಡಾನೆಗಳಾದ ಪ್ರಶಾಂತ, ಸುಗ್ರೀವ, ಮತ್ತಿಗೋಡು ಆನೆ ಶಿಬಿರದ ಮಹೇಂದ್ರ, ರಾಮಪುರ ಆನೆ ಶಿಬಿರದ ಹೆಣ್ಣಾನೆ ಹಿರಣ್ಯಾ, ಲಕ್ಷ್ಮೀ ಆನೆ ಆಗಮಿಸಿದ್ದವು.

Advertisement

ಆನೆಗಳನ್ನು ನೋಡಲು ಮುಗಿಬಿದ್ದರು
ಬೀಳ್ಕೊಡುಗೆ ದಿನವೂ ಗಜಪಡೆ ವೀಕ್ಷಿಸಲು ಪ್ರವಾಸಿಗರ ತಂಡ ಆನೆಗಳ ಬಳಿ ಸೇರಿತ್ತು. ಸೋಮವಾರ ಬೆಳಗ್ಗೆಯಿಂದಲೇ ಅಭಿಮನ್ಯು ಸೇರಿದಂತೆ ದಸರಾ ಆನೆಗಳನ್ನು ವೀಕ್ಷಿಸಲು ಸಾಕಷ್ಟು ಜನರು ಆಗಮಿಸಿದ್ದರು. ಕೆಲವರು ಆನೆಯ ಬಳಿ ನಿಂತು ಫೋಟೋ ತೆಗೆಸಿಕೊಂಡರು. ಬಳಿಕ ಆನೆಗಳ ಮಜ್ಜನ ನೋಡಿ ಸಂಭ್ರಮಿಸಿದರು. ಹಿರಿಯರು-ಕಿರಿಯರು ಎನ್ನದೆ ಸಾವಿರಾರು ಜನರು ಭೇಟಿ ನೀಡಿದ್ದರು. ಆನೆಗಳನ್ನು ಹತ್ತಿರದಿಂದ ನೋಡಿ ಖುಷಿಪಟ್ಟರು. ಕೆಲವರು ತಾವು ತಂದಿದ್ದ ಬಾಳೆಹಣ್ಣು, ಸಿಹಿ ತಿಂಡಿಗಳನ್ನು ಮಾವುತರ ಮೂಲಕ ಆನೆಗಳಿಗೆ ತಿನ್ನಿಸಿ ಸಂತಸಪಟ್ಟರು. ಕ್ಯಾಪ್ಟನ್‌ ಅಭಿಮನ್ಯು, ಹೆಚ್ಚು ಕ್ರೇಜ್‌ ಹೊಂದಿರುವ ಭೀಮನ ಬಳಿ ಹೆಚ್ಚು ಜನ ಸೇರಿದ್ದರು.

ಈ ಬಾರಿಯ ದಸರಾ ಮಹೋತ್ಸವ ತುಂಬಾ ಚೆನ್ನಾಗಿ ಆಗಿದೆ. ಡಿಸಿಎಫ್ ಸೇರಿದಂತೆ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅಭಿಮನ್ಯು ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ಸುಗೊಳಿಸಿದ್ದು, ಎಲ್ಲ ಆನೆಗಳೂ ಅತ್ಯುತ್ತಮವಾಗಿ ಸ್ಪಂದಿಸಿವೆ. ಅರ್ಜುನನ ಅನುಪಸ್ಥಿತಿ ಕಾಡದಂತೆ ಧನಂಜಯ ತನ್ನ ಕಾರ್ಯ ನಿಭಾಯಿಸಿದ್ದಾನೆ. ಧನಂಜಯ, ಮಹೇಂದ್ರನನ್ನು ಅಂಬಾರಿ ಆನೆಯಾಗಿ ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
– ಮಾಲತಿಪ್ರಿಯ, ಅರಣ್ಯ ಸಂರಕ್ಷಣಾಧಿಕಾರಿ

*ಈ ಬಾರಿಯ ಜಂಬೂ ಸವಾರಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲಾ ಆನೆಗಳು, ಮಾವುತರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ¨ªಾರೆ. ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಶಿಬಿರಗಳಿಗೆ ಬೀಳ್ಕೊಡಲಾಗಿದೆ.
– ಡಾ| ಐ.ಬಿ. ಪ್ರಭುಗೌಡ, ಡಿಸಿಎಫ್

Advertisement

Udayavani is now on Telegram. Click here to join our channel and stay updated with the latest news.

Next