ಚೆನ್ನೈ : ಅತ್ಯಂತ ಪ್ರಬಲ ಹಾಗೂ ವಿನಾಶಕಾರಿ ಗಜ ಚಂಡಮಾರುತ ಇಂದು ಗುರುವಾರ ರಾತ್ರಿ ದಕ್ಷಿಣ ತಮಿಳು ನಾಡು ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆ ಇದೆ.
ಅಂತೆಯೇ ಈ ಚಂಡಮಾರುತದ ದಾಳಿಗೆ ಗುರಿಯಾಗುವ ಜಿಲ್ಲೆಗಳಲ್ಲಿ ಸರಕಾರಿ ಆಡಳಿತೆಯು ಕಟ್ಟೆಚ್ಚರ ಘೋಷಿಸಿದ್ದು ರಕ್ಷಣೆ ಮತ್ತು ಪರಿಹಾರ ವ್ಯವಸ್ಥೆಯನ್ನ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
ಪ್ರಕೃತ ಚಂಡಮಾರುತವು ಇಲ್ಲಿಂದ 258 ಕಿ.ಮೀ. ದೂರದ ನೈಋತ್ಯ ಕೊಲ್ಲಿಯಲ್ಲಿ ಇದೆ ಮತ್ತು ನೆರೆಯ ಪುದುಚೇರಿಯಿಂದ 225 ಕಿ.ಮೀ. ದೂರದ ಕಾರೈಕಲ್‌ನಲ್ಲಿ ಕ್ರಿಯಾಶೀಲವಾಗಿದೆ.
ಇದು ಕಡಲೂರು ಮತ್ತು ಪಾಂಬನ್ ನಡುವೆ, ನಾಗಪಟ್ಟಿಣಂ ಆಸುಪಾಸಿನಲ್ಲಿ ಗುರುವಾರ ರಾತ್ರಿ ಅಪ್ಪಳಿಸುವ ಸಾಧ್ಯತೆ ಇದೆ. ಅದಾದ ಬಳಿಕ ಅದು ದುರ್ಬಲಗೊಳ್ಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗಜ ಚಂಡಮಾರುತದ ತೀವ್ರತೆಯಲ್ಲಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಕರಾವಳಿಗೆ ಅಪ್ಪಳಿಸುವ ವೇಳೆ ಚಂಡಮಾರುತವು ಗಂಟೆಗೆ 80ರಿಂದ 90 ಕಿ.ಮೀ. ವೇಗವನ್ನು ಹೊಂದಿರುತ್ತದೆ; ಇದು 100 ಕಿ.ಮೀ. ಕೂಡ ದಾಟಬಹುದಾಗಿದೆ. ಇದರೊಂದಿಗೆ ಈ ಪ್ರಾಂತ್ಯದ ಉದ್ದಗಲದಲ್ಲಿ ಜಡಿ ಮಳೆ ಕೂಡ ಆಗಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.