ಶಿರಸಿ: ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸ್ವ ಉದ್ಯೋಗ ಕಲ್ಪಿಸುವ ಮಹತ್ವದ ಆಕಾಂಕ್ಷೆಯೊಂದಿಗೆ ಎಂಇಎಸ್ ಶಿಕ್ಷಣ ಸಂಸ್ಥೆ ಖಾಸಗಿಯಾಗಿ ಆರಂಭಿಸಿದ ಐಟಿಐ ಕಾಲೇಜು ಹತ್ತು ವರ್ಷ ಪೂರೈಸಿ, ಹಲವು ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿದೆ ಎಂದು ಎಂಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಶ್ಲಾಘಿಸಿದರು.
2009ರಲ್ಲಿ ಒಂದು ಕೊಠಡಿಯಿಂದ ಆರಂಭವಾದ ಐಟಿಐ ಇದೀಗ 9 ಕೊಠಡಿ, ಮೂರು ಪ್ರಯೋಗಾಲಯ, ಒಂದು ಕಂಪ್ಯೂಟರ್ ಲ್ಯಾಬ್, ಮೂರು ಥೇರಿ ಕೊಠಡಿ ಹಾಗೂ ಒಂದು ಕಾರ್ಯಾಲಯ ಹೊಂದಿದೆ. ಮೂಲ ಸೌಕರ್ಯಗಳಿಗಾಗಿ 32.5 ಲಕ್ಷ ರೂ, ಕಂಪ್ಯೂಟರ್, ಗ್ರಂಥಾಲಯದ ಪುಸ್ತಕಕ್ಕಾಗಿ 15.5 ಲಕ್ಷ ರೂ. ವಿನಿಯೋಗಿಸಲಾಗಿದೆ. ಪ್ರಸಕ್ತವಾಗಿ ಕಾಲೇಜು 9 ಬೋಧಕ, ಬೋಧಕೇತರ ಸಿಬ್ಬಂದಿ ಹೊಂದಿದ್ದು ಇದೀಗ 110 ವಿದ್ಯಾರ್ಥಿಗಳು ವಿವಿಧ ವೃತ್ತಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ಶಿಕ್ಷಣ ಪಡೆದ 450ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಉದ್ಯೋಗಾವಕಾಶ ಲಭಿಸಿದೆ ಎಂದೂ ಹೇಳಿದರು.
ಕೆಲವರು ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದು ಕಾಲೇಜಿನ ಹೆಗ್ಗಳಿಕೆಯಾಗಿದೆ ಎಂದ ಮುಳಖಂಡ, ಇಲ್ಲಿ ಕಲಿತ ವಿದ್ಯಾರ್ಥಿಗಳೇ ಸಂಸ್ಥೆಯ ಅಂಗ ಸಂಸ್ಥೆಗಳಿಗೆ ಬೆಂಚು ಡೆಸ್ಕ್ ಮಾಡಿಕೊಡುತ್ತಿರುವುದು ಇಲ್ಲಿಯ ಮತ್ತೂಂದು ವಿಶೇಷವಾಗಿದೆ. ಕಳೆದ ವರ್ಷ ಇಲ್ಲಿ ನೂರಕ್ಕೆ ನೂರು ಫಲಿತಾಂಶ ಸಾಧಿಸಲಾಗಿದೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ 2018-19 ಸಾಲಿನಲ್ಲಿ ಪಠ್ಯಕ್ರಮದನುಸಾರ 3- ಡಿ ಟೆಕ್ನೋಲಜಿಯಲ್ಲಿ ಅಭಿವೃದ್ಧಿಪಡಿಸಿರುವ ಇ- ಲರ್ನಿಂಗ್ ಸಾಪ್ಟವೇರ್ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತರಬೇತಿ ನೀಡಲಾಗುತ್ತಿದೆ.
ಐಟಿಐ ಪಿಯುಸಿಗೆ ತತ್ಸಮಾನವಾಗಿದ್ದು ಐಟಿಐ ಪೂರ್ಣಗೊಳಿಸಿದ ಆಸಕ್ತ ಅಭ್ಯರ್ಥಿಗಳು ವಿವಿಧ ಪದವಿಗಳಿಗೆ ಅವಕಾಶ ಪಡೆಯಬಹುದು. ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ರೈಲ್ವೆ, ನೆವಿ, ಇಸ್ರೊ, ಮೆಟ್ರೊ, ಕೆಎಸ್‌ಆರ್ಟಿಸಿ ಹೀಗೆ ಅನೇಕ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೌಶಲ್ಯಾಭಿವೃದ್ಧಿಗಳಿಗೆ ಹೆಚ್ಚಿನ ಮಹತ್ವ ನೀಡುತಿದ್ದು ಮಂದಿನ ದಿನಗಳಲ್ಲಿ ಐಟಿಐಗೆ ಇನ್ನಷ್ಟು ಮಹತ್ವ ಬರಲಿದೆ ಎಂದರು. ಐಟಿಐ ಕಾಲೇಜಿನ ಉಪಸಮಿತಿ ಅಧ್ಯಕ್ಷ ಹರೀಶ ಪಂಡಿತ, ಗೌರವ ಕಾರ್ಯದರ್ಶಿ ಎಸ್.ಪಿ. ಶೆಟ್ಟಿ, ಪ್ರಮುಖರಾದ ಸುಧೀರ ಭಟ್, ಸುಬ್ರಾಯ ಹೆಗಡೆ, ಪ್ರಾಚಾರ್ಯ ಗಣೇಶ ಭಟ್ ಮುಂತಾದವರು ಇದ್ದರು.
Advertisement
ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ನಮ್ಮ ಸಂಸ್ಥೆ ಮುಂದಿನ ದಿನಗಳಲ್ಲಿ ಐಟಿಐನಲ್ಲಿ ಪ್ರತ್ಯೇಕ ಪ್ರೊಡಕ್ಷನ್ ಕಮ್ ಸರ್ವಿಸ್ ಸೆಂಟರನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಹೆಚ್ಚಿನ ನೈಪುಣ್ಯತೆ ಪಡೆಯಲು ಅವಕಾಶ ನೀಡುವುದರ ಜೊತೆಗೆ ಕಲಿಕೆಯ ಜೊತೆಗೆ ಗಳಿಕೆಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಲರ್ನ್ ಆ್ಯಂಡ್ ಅರ್ನ್ ಪ್ರೋಗ್ರಾಮ್ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
Related Articles
Advertisement