ಮೈಸೂರು: ಸಮಾಜದಿಂದ ಗಳಿಸಿದ ಜ್ಞಾನ, ಅನುಭವಗಳನ್ನು ಸಮಾಜಕ್ಕೆ ಹಿಂತಿರುಗಿಸಿದಾಗ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಪಂ ಸಿಇಒ ಡಾ.ಎಂ.ಆರ್.ರವಿ ಹೇಳಿದರು. ನಗರದಲ್ಲಿ ಭಾನುವಾರ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ವತಿಯಿಂದ ಏರ್ಪಡಿಸಿದ್ದ ವಿಜ್ಞಾನ ಸಾಹಿತಿ ಎಸ್. ರಾಮಪ್ರಸಾದ್‌ರ 76ನೇ ಹುಟ್ಟುಹಬ್ಬ ಸಂಭ್ರಮ ಮತ್ತು ಮನೋಮಂಥನ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಜ್ಞಾನ, ಅನುಭವ ಅವನೊಂದಿಗೆ ಸಾಯಬಾರದು, ಅದನ್ನು ಸಮಾಜದಿಂದ ಪಡೆದಿದ್ದೇವೆ, ಸಮಾಜಕ್ಕೆ ಹಿಂತಿರುಗಿಸಿದರೆ ಜೀವನ ಸಾರ್ಥಕ ವಾಗುತ್ತದೆ. ಸಂಪ್ರದಾಯದ ಕುಟುಂಬದಲ್ಲಿ ಜನಿಸಿ, ಆಚರಣೆಗಳನ್ನು ಪಾಲಿಸಿಕೊಂಡು ಬಂದು, ಬದುಕಿನಲ್ಲಿ ವೈಚಾರಿಕ ಚಿಂತನೆಗಳನ್ನು ಅಳವಡಿಸಿಕೊಂಡು ವಿಚಾರವಂತನಾಗಬಹುದು ಎಂಬುದನ್ನು ಎಸ್.ರಾಮಪ್ರಸಾದ್ ತೋರಿಸಿಕೊಟ್ಟಿದ್ದಾರೆ.ಅವರ ಕಾಯಕ ಮನೋಬಾವ ಸ್ಫೂರ್ತಿ ದಾಯಕವಾದುದು ಎಂದರು.
ಮಹಾನ್ ಪುರುಷರು, ಸಮಾಜದಲ್ಲಿ ಗೌರವ ಮತ್ತು ಯುವ ಪೀಳಿಗೆಗೆ ಮಾರ್ಗದರ್ಶಕರಂತೆ ಜೀವನ ನಡೆಸುತ್ತಿರುವವರು ತಮ್ಮ ಸಾವಿನ ನಂತರ ಸದ್ವಿಚಾರ ಮತ್ತು ಸದ್ಭಾವನೆ ಬಿಟ್ಟು ಹೋಗುತ್ತಾರೆ. ಆದರೆ ಇಂದು ಅವುಗಳನ್ನು ರೂಢಿಸಿಕೊಂಡು ಬದುಕುವುದು ಕಷ್ಟ. ಸದ್ವಿಚಾರ ಮತ್ತು ಸದ್ಭಾವನೆಗಳನ್ನು ಅಳವಡಿಸಿಕೊಂಡು ಬದುಕಿದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು.
ಇಂದಿನ ಸಾಮಾಜಿಕ ವ್ಯವಸ್ಥೆಯ ಶಿಕ್ಷಣ ಸೇರಿದಂತೆ ಇನ್ನಿತರೇ ಸ್ಥಿತಿಗತಿಗಳ ಬಗ್ಗೆ ಆಳವಾದ ಚಿಂತನೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ಬಹಳ ಅಚ್ಚುಕಟ್ಟಾಗಿ ತಮ್ಮ ಬರವಣಿಗೆಗಳಲ್ಲಿ ರೂಪಿಸಿದ್ದ ರಾಮಪ್ರಸಾದ್ ಒಂದು ಶಕ್ತಿ, ಅವರ ನಿರೂಪಣೆಯು ಸಾಮಾಜಿಕ ಅಂಕು-ಡೊಂಕುಗಳನ್ನು ಎತ್ತಿ ಹಿಡಿಯುವುದಲ್ಲದೇ, ಬದುಕನ್ನು ಒಳ್ಳೆಯತನದಲ್ಲಿ ರೂಪಿಸಿಕೊಳ್ಳಲು ನೆರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಪ್ರಸ್ತುತ ಜ್ಞಾನ, ವಿಜ್ಞಾನ ಇದೆ. ಆದರೆ ವೈಜ್ಞಾನಿಕ ಮನೋಭಾವ ಎಷ್ಟರ ಮಟ್ಟಿಗೆ ಇದೆ ಎಂದು ಪ್ರಶ್ನಿಸಿಕೊಳ್ಳಬೇಕು. ಅದೇ ರೀತಿ ಚರಿತ್ರೆ ಇದೆ. ಆದರೆ ಚಾರಿತ್ರ ಕಡಿಮೆಯಾಗಿದೆ ಇಂತಹ ಸಂದರ್ಭದಲ್ಲಿ ರಾಮಪ್ರಸಾದ್ ಅವರ ಆಲೋಚನೆಗಳು ಹೆಚ್ಚು ಅರ್ಥಪೂರ್ಣವಾಗಿವೆ ಎಂದರು.
ಮಹಾರಾಣಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪೊ›.ಬಿ.ವಿ.ವಸಂತಕುಮಾರ್ ಮನೋಮಂಥನ ಕೃತಿ ಲೋಕಾರ್ಪಣೆ ಮಾಡಿದರು. ಶ್ರೀ ರಾಮಕೃಷ್ಣ ಆಶ್ರಮದ ವಿವೇಕಪ್ರಭ ಸಂಪಾದಕ ಸ್ವಾಮಿ ಜ್ಞಾನಯೋಗಾನಂದ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಾಶಕ ಟಿ.ಎಸ್.ಛಾಯಾಪತಿ, ಪ್ರತಿಭಾ ಮುರಳಿ, ಕೃತಿಕಾರ ಎಸ್. ರಾಮಪ್ರಸಾದ್ ಹಾಜರಿದ್ದರು.