Advertisement
ಬಜೆಟ್ ಅಂದರೆ ಸರ್ಕಾರವು ಮುಂದಿನ ಆರ್ಥಿಕ ವರ್ಷದಲ್ಲಿ ಎಷ್ಟು ಹಣವನ್ನು ಆದಾಯವಾಗಿ ಸಂಗ್ರಹಿಸುತ್ತದೆ ಮತ್ತು ಹಾಗೆ ಸಂಗ್ರಹಿಸಿದ ಹಣವನ್ನು ಹೇಗೆ ಖರ್ಚು ಮಾಡುತ್ತದೆ ಎಂಬುದನ್ನು ಸಂಸತ್ತಿನ ಮುಂದೆ ಮಂಡಿಸುವ ಅಧಿಕೃತ ಹೇಳಿಕೆ. ಮುಖ್ಯವಾಗಿ ಹಣಕಾಸು ಸಚಿವರು ಮಂಡಿಸುವ ಬಜೆಟ್ ಭಾಷಣದಲ್ಲಿ ಸರ್ಕಾರದ ಆರ್ಥಿಕ ನೀತಿ, ನಿರ್ಧಾರದ ಅಂಶಗಳೂ ಅಡಕವಾಗಿರುತ್ತವೆ.
ಕೇಂದ್ರದ ಹಣಕಾಸು ಸಚಿವಾಲಯದ ಬಜೆಟ್ ವಿಭಾಗವು ಇತರೆ ಸಚಿವಾಲಯಗಳ ಮತ್ತು ಯೋಜನಾ ಆಯೋಗದ ಜೊತೆ ಸಮಾಲೋಚಿಸಿ ಬಜೆಟ್ ತಯಾರಿಸುತ್ತದೆ. ಬಜೆಟ್ ಇಲಾಖೆಯ ಅಧಿಕಾರಿಗಳು ಮತ್ತು ಆರ್ಥ ಸಚಿವರು, ಸರ್ಕಾರೇತರ ಸಂಸ್ಥೆಗಳು ಮತ್ತಿತರ ವರ್ಗಗಳೊಡನೆ ಬಜೆಟ್ ಪೂರ್ವ ಸಮಾಲೋಚನೆ ನಡೆಸಿ ಬಜೆಟ್ ಹೇಗಿರಬೇಕೆಂದು ಎಲ್ಲರ ಅಭಿಪ್ರಾಯ ಪಡೆಯುತ್ತದೆ. ಕೇಂದ್ರ ಅರ್ಥ ಸಚಿವಾಲಯವು ಇತರೆ ಇಲಾಖೆಗಳನ್ನು ಮುಂಬರುವ ಆರ್ಥಿಕ ವರ್ಷದಲ್ಲಿ ಪಂಚವಾರ್ಷಿಕ ಯೋಜನೆಗಳಡಿ ನಿಗದಿಗೊಳಿಸಿರುವ ಮೊತ್ತವನ್ನು ಹೊರತುಪಡಿಸಿ ಅವುಗಳು ಖರ್ಚು ಮಾಡಲು ಎಷ್ಟು ಹಣ ಬೇಕೆಂದು ಕೇಳುತ್ತದೆ. ಇದರೊಡನೆ ಅವುಗಳು ಪ್ರಸಕ್ತ ಸಾಲಿನ ನಿರೀಕ್ಷಿತ ವೆಚ್ಚದ ಅಂದಾಜನ್ನು ಕೊಡುವಂತೆಯೂ ಕೇಳಲಾಗುತ್ತದೆ.
Related Articles
ಬರುವ ಆರ್ಥಿಕ ವರ್ಷದಲ್ಲಿ ಯೋಜನಾ ಕಾರ್ಯಕ್ರಮಗಳಿಗೆ ಎಷ್ಟು ಹಣ ಲಭ್ಯವಾಗಬಹುದೆಂಬುದನ್ನು ಅರ್ಥ ಸಚಿವಾಲಯವು ಯೋಜನಾ ಆಯೋಗದ ಜೊತೆ ಸಮಾಲೋಚಿಸಿ ನಿರ್ಧರಿಸುತ್ತದೆ. ಪ್ರತಿ ಇಲಾಖೆಯು ಕಾರ್ಯಕ್ರಮಗಳಿಗೆ ಎಷ್ಟು ಹಣ ಬೇಕಾಗುತ್ತದೆಯೆಂಬುದನ್ನು ಯೋಜನಾ ಆಯೋಗವು ತರಿಸಿಕೊಂಡು ನಂತರ ಸಮಗ್ರ ವರದಿ ತಯಾರಿಸಿ ಒಟ್ಟು ಬಜೆಟ್ ಬೆಂಬಲ ಎಷ್ಟೆಂಬುದನ್ನು ನಿರ್ಧರಿಸುತ್ತದೆ. ಇದರ ಮೇಲೆ ಬರುವ ವರ್ಷದ ಯೋಜನೆ ಮತ್ತು ಯೋಜನೇತರ ವೆಚ್ಚದ ಮತ್ತು ರಿವೈಸ್ಡ್ ಅಂದಾಜಿನ ಅಂತಿಮ ವರದಿಯನ್ನು ಸಿದ್ಧಪಡಿಸಲಾಗುತ್ತದೆ.
Advertisement
ತೆರಿಗೆಯೇತರ ಕಂದಾಯದ ಅಂದಾಜುಮುಂದಿನ ಹಂತವೆಂದರೆ ಮುಂದಿನ ವರ್ಷದ ಖರ್ಚುಗಳನ್ನು ನಿಭಾಯಿಸಲು ಹಣ ಹೊಂದಿಸುವುದು ಹೇಗೆ ಎಂಬುದು. ಪ್ರತಿ ಇಲಾಖೆಯು ಮುಂದಿನ ವರ್ಷ ಎಷ್ಟು ಹಣವನ್ನು ಸಂಗ್ರಹಿಸಬಲ್ಲನೆಂಬುದನ್ನು ಹಣಕಾಸು ಇಲಾಖೆಗೆ ತಿಳಿಸುತ್ತದೆ.
ಕೇಂದ್ರ ಅರ್ಥ ಸಚಿವಾಲಯದ ಕಂದಾಯ ಇಲಾಖೆ ಕಳೆದ ವರ್ಷದ ತೆರಿಗೆಯನ್ನೇ ಹಾಕಿ ಎಷ್ಟು ಹಣವನ್ನು ಬರುವ ವರ್ಷ
ಕ್ರೂಢೀಕರಿಸಬಹುದೆಂದು ಅಂದಾಜಿಸುತ್ತದೆ. ಹೀಗೆ ಅಂದಾಜಿಸು ವಾಗ ಆದಾಯ, ಹಣದುಬ್ಬರ ಇತ್ಯಾದಿಗಳಲ್ಲಿ ಆಗಿರುವ ಬದಲಾ ವಣೆಗಳನ್ನು ಅದು ಗಮನಕ್ಕೆ ತೆಗೆದುಕೊಳ್ಳುತ್ತದೆ. ಇದಲ್ಲದೆ ಒಂದು ವೇಳೆ ತೆರಿಗೆ ಮೊತ್ತವನ್ನು ಬದಲಾಯಿಸಿದರೆ ಎಷ್ಟು ಆದಾಯ ಬರಬಹುದೆಂಬುದನ್ನೂ ಅದು ಅಂದಾಜಿಸುತ್ತದೆ. ಬಜೆಟ್ ರೂಪಿಸುವಾಗ ಅರ್ಥ ಸಚಿವರು ಕೈಗಾರಿಕೋದ್ಯಮಿಗಳು, ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು, ಅರ್ಥಶಾಸ್ತ್ರಜ್ಞರು ಮತ್ತಿತರೊಡನೆ ಮಾತನಾಡಿ ಅವರ ಅನಿಸಿಕೆ ಕೇಳುತ್ತಾರೆ. ಆದರೆ ಅವರಿಂದ ಬಜೆಟ್‌ನ ಅಂತಿಮ ರೂಪರೇಷೆ ಗಳನ್ನು ರಹಸ್ಯವಾಗಿ ಇಡಲಾಗುತ್ತದೆ. ಲೋಕಸಭೆಯಲ್ಲಿ ಬಜೆಟ್ ಮಂಡಿಸುವ ಮೊದಲು ಬಜೆಟ್ ಪ್ರಸ್ತಾಪವನ್ನು ಕೇಂದ್ರ ಕ್ಯಾಬಿನೆಟ್‌ನಲ್ಲಿ ಇಟ್ಟು ಒಪ್ಪಿಗೆ ತೆಗೆದುಕೊಳ್ಳುತ್ತದೆ. ಸಂಸತ್ತಿನ ಮುಂದೆ ಮಂಡಿಸಲಾಗುವ ಬಜೆಟ್‌ನಲ್ಲಿ ಎರಡು ರೀತಿ ಸರ್ಕಾರಿ ವೆಚ್ಚಗಳನ್ನು ವಿಂಗಡಿಸಲಾಗುತ್ತದೆ. ಅವುಗಳೆಂದರೆ, ಯೋಜನೆ ಮತ್ತು ಯೋಜನೇತರ ವೆಚ್ಚ ಹಾಗೂ ಬಂಡವಾಳ ಮತ್ತು ಕಂದಾಯ ವೆಚ್ಚ. ಸರ್ಕಾರದ ಹೊರೆಯನ್ನು ಕಡಿಮೆ ಮಾಡುವ ಹಾಗೂ ದೀರ್ಘಕಾಲ ಚಾಲ್ತಿಯಲ್ಲಿರುವ ಆಸ್ತಿಗಳನ್ನು ಸೃಷ್ಟಿಸುವ ಬಾಬ್ತುಗಳಿಗಾಗಿ ವಿನಿಯೋಗಿಸುವ ವೆಚ್ಚಗಳನ್ನು ಬಂಡವಾಳ ವೆಚ್ಚಗಳೆನ್ನಲಾಗುತ್ತದೆ. ಉದಾಹರಣೆಗೆ ಕೆರೆ, ರಸ್ತೆ, ವಿದ್ಯುತ್ ತಯಾರಿಕಾ ಯೋಜನೆ, ಅಣೆಕಟ್ಟು ಮೊದಲಾದವನ್ನು ಸೇರಿಸಬಹುದು. ಸರ್ಕಾರಿ ಸಿಬ್ಬಂದಿಯ ಸಂಬಳ ಮತ್ತಿತ್ತರ ಖರ್ಚುಗಳು ಸರ್ಕಾರದ ದೈನಂದಿನ ಖರ್ಚು ಖಾತೆಯ ವ್ಯವಹಾರವನ್ನು ನಿಭಾಯಿಸಲು ಬೇಕಾದ ಹಣವನ್ನು ಕಂದಾಯ ಖರ್ಚು ಎನ್ನಲಾಗುತ್ತದೆ. ಪಂಚವಾರ್ಷಿಕ ಯೋಜನೆಗಳಡಿ ಯಲ್ಲಿರುವ ಸ್ಕೀಮ್ ಮತ್ತು ಪ್ರಾಜೆಕ್ಟ್ಗಳ ವೆಚ್ಚಗಳನ್ನು ಯೋಜನಾ ವೆಚ್ಚ ಎಂದು ವರ್ಗೀಕರಿಸಬಹುದು. ಯೋಜನಾ ಆಯೋಗವು ಪ್ರತಿ ಇಲಾಖೆಯನ್ನು ಸಂಪರ್ಕಿಸಿ, ಚರ್ಚೆ ಮಾಡಿ ವೆಚ್ಚ ನಿರ್ಧರಿಸುತ್ತದೆ.
ಯೋಜನಾ ವೆಚ್ಚಗಳಲ್ಲಿ ಮತ್ತೆ ಕಂದಾಯ ವೆಚ್ಚ ಮತ್ತು ಬಂಡವಾಳ ವೆಚ್ಚಗಳೆಂಬ ಎರಡು ಬಾಬ್ತುಗಳಿರುತ್ತದೆ. ಉದಾಹರಣೆಗೆ ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ. ಇದರಲ್ಲಿ ರಸ್ತೆಗೆ ಬೀಳುವ ವಾಸ್ತವಿಕ ಖರ್ಚು ಬಂಡವಾಳ ವೆಚ್ಚ ವೆಂದೂ, ಅದೇ ಅದರ ನಿರ್ಮಾಣದಲ್ಲಿ ತೊಡಗಿಕೊಂಡ ಸಿಬ್ಬಂದಿಯ ಸಂಬಳ ಸವಲತ್ತು ಕಂದಾಯ ವೆಚ್ಚವೆಂದೂ ಪರಿಗಣಿತವಾಗುತ್ತದೆ. ವೆಚ್ಚ ಕಡಿಮೆ ಮಾಡಬೇಕು
ಬಜೆಟ್‌ನಲ್ಲಿ ಯೋಜನೇತರ ವೆಚ್ಚ ಕಡಿಮೆ ಮಾಡಿದಷ್ಟೂ ಅದರ ಪ್ರಭಾವ ಹೆಚ್ಚುತ್ತದೆ. ಒಂದು ರಾಜ್ಯದ ಮುಖ್ಯಮಂತ್ರಿಗಳು ವಿಶೇಷ ವಿಮಾನಕ್ಕೆ ಕೋಟಿ ಕೋಟಿ ಸುರಿಯುವುದೆಂದರೆ ಅದು ಸರ್ಕಾರದ ಯೋಜನೇತರ ವೆಚ್ಚವನ್ನು ಹೆಚ್ಚಿಸಿ, ಅಷ್ಟರಮಟ್ಟಿಗೆ ಬಜೆಟನ್ನು ಅಪಹಾಸ್ಯ ಮಾಡಿದಂತೆ! ಬಜೆಟ್‌ನ ವಾಸ್ತವ ಮಂಡನೆಗೆ ಆರ್ಥಿಕ ಸಮೀಕ್ಷೆಯು ಸಾಂದರ್ಭಿಕ ಚೌಕಟ್ಟನ್ನು ಒದಗಿಸಿಕೊಡುತ್ತದೆ. ಬಜೆಟ್ ಭಾಷಣವಾಗುವ ಕೆಲ ದಿನ ಮೊದಲು ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನ ಎದುರು ಮಂಡಿಸಲಾಗುತ್ತದೆ. ಇಂದಿನ ರಾಜಕಾರಣಿಗಳು ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಬಂಡವಾಳ ವೆಚ್ಚದಲ್ಲಿ ಕಡಿತಗೊಳಿಸಿದರೆ ಕೈಗೆ ಸಿಗುವ ಹಣದಲ್ಲಿ ರಾಜಾರೋಷವಾಗಿ ಜನಾಕರ್ಷಣೆಯ ಗಿಮಿಕ್ ಮಾಡಬಹುದು. ಸರ್ಕಾರಕ್ಕೆ ಎರಡೇ ಮಾದರಿಯಲ್ಲಿ ಆದಾಯ ಹುಟ್ಟುತ್ತದೆ. ಕಂದಾಯ ಮತ್ತು ಬಂಡವಾಳ ಮೂಲಗಳಿಂದ ಆದಾಯ ಬರುತ್ತದೆ ಎನ್ನುವುದಕ್ಕಿಂತ ತೆರಿಗೆಯಿಂದ ಬರುವ ಆದಾಯ, ಸರ್ಕಾರಿ ಒಡೆತನದ ಕಂಪನಿಗಳು ಕೊಡುವ ಡಿವಿಡೆಂಡ್ ಬಂದ ಆದಾಯ ಮತ್ತು ಸಾರ್ವಜನಿಕ ಸೇವೆಗಳ ಮೇಲೆ ಹಾಕುವ ಶುಲ್ಕದಿಂದ ಬರುವ ಆದಾಯಗಳು ಕಂದಾಯ ಮೂಲದ ಆದಾಯ. ಸರ್ಕಾರವು ದೇಶೀ ಮತ್ತು ವಿದೇಶಿ ಮೂಲಗಳಿಂದ ಎತ್ತುವ ನಿಧಿಗಳು, ರಾಜ್ಯ ಸರ್ಕಾರಗಳು ಕೇಂದ್ರದಿಂದ ಪಡೆದ ಸಾಲವನ್ನು ಮರುಪಾವತಿಸಿದ ಹಣ ಮತ್ತು ಸರ್ಕಾರಿ ಕಂಪನಿಗಳ ಸ್ವತ್ತನ್ನು ಮಾರಿದ್ದರಿಂದ ಬರುವ ಹಣವನ್ನು ಕಂದಾಯ ಆದಾಯವೇ. ಸರ್ಕಾರದ ವಾರ್ಷಿಕ ಒಟ್ಟು ಆದಾಯಕ್ಕಿಂತ ಖರ್ಚು ಜಾಸ್ತಿಯಾದರೆ ಅದನ್ನು ವಿತ್ತೀಯ ಕೊರತೆ ಎನ್ನಲಾಗುತ್ತದೆ. ಇದನ್ನು ಸಾಲ ಎತ್ತುವ ಮೂಲಕ ಸರಿದೂಗಿಸಲಾಗುತ್ತದೆ. ಕಂದಾಯ ಮೂಲದ ಆದಾಯಕ್ಕೂ ಮೀರಿ ಕಂದಾಯ ವೆಚ್ಚವಾದರೆ ಅದನ್ನು ಕಂದಾಯ ಕೊರತೆ ಎನ್ನುತ್ತಾರೆ. ವಿತ್ತೀಯ ಕೊರತೆ ಎನ್ನುವುದು ಆರ್ಥಿಕ ನಿರ್ವಹಣೆಯ ಮೇಲಿನ ನಕಾರಾತ್ಮಕ ಸರ್ಟಿಫಿಕೇಟ್ ಎನ್ನುವುದು ನೆನಪಿನಲ್ಲಿರಲಿ. ಸಂಸತ್ತಿನ ಬಜೆಟ್ ಅಧಿವೇಶನವು ಪ್ರತಿ ವರ್ಷದ ಫೆಬ್ರವರಿ ಅಖೈರಿನಿಂದ ಮೇವರೆಗೆ ನಡೆಯುತ್ತದೆ. ಬಜೆಟ್ ಮಂಡಿಸಿದ ನಂತರ ಅದರ ಮೇಲೆ ಸ್ಥೂಲ ಚರ್ಚೆಗಳು ನಡೆಯುತ್ತವೆ. ಈ ಹಂತದಲ್ಲಿ ಬಜೆಟ್ ಮೇಲೆ ಮತದಾನವಾಗುವ ಪ್ರಮೇಯವಿರುವುದಿಲ್ಲ. ಇದಾದ ನಂತರ ಸಂಸತ್ತು ಮೂರು ವಾರಗಳ ಕಾಲ ಮುಂದೂಡಲ್ಪಡುತ್ತದೆ. ಈ ಅವಧಿಯಲ್ಲಿ ಪ್ರತಿ ಇಲಾಖೆಯ ವೆಚ್ಚದ ಸವಿವರ ಅಂದಾಜನ್ನು (ಇದಕ್ಕೆ ಅನುದಾನ-ಬೇಡಿಕೆ ಅಥವಾ ಡಿಮ್ಯಾಂಡ್ ಫಾರ್ ಗ್ರಾಂಟ್ಸ್ ಎನ್ನುತ್ತಾರೆ) ಸಂಸತ್ತಿನ ಸ್ಥಾಯಿ ಸಮಿತಿಯು ಪರಾಮರ್ಶಿಸುತ್ತದೆ. ಪ್ರತಿ ಇಲಾಖೆಯ ಡಿಮ್ಯಾಂಡ್ ಫಾರ್ ಗ್ರಾಂಟ್ಸ್ ಅನ್ನು ಸಂಸತ್ತಿನ ಸ್ಥಾಯಿ ಸಮಿತಿಯು ಪರಿಶೀಲಿಸುತ್ತದೆ. ಸಂಸತ್ತಿನಲ್ಲಿ ಅಂಥ 24 ಸ್ಥಾಯಿ ಸಮಿತಿಗಳಿವೆ. ಇದರಲ್ಲಿ ಕೈಗಾರಿಕೆ, ಗೃಹ, ರಕ್ಷಣೆ, ಹಣಕಾಸು ಮುಂತಾದ ಇಲಾಖೆಗಳದ್ದೂ ಸೇರಿವೆ. ಪರಿಶೀಲನೆ ನಡೆಸಿಯಾದ ಮೇಲೆ ಅವು ವರದಿಯನ್ನು ಲೋಕಸಭೆಗೆ ಸಲ್ಲಿಸುತ್ತವೆ. ವರದಿ ಸಲ್ಲಿಕೆಯಾದ ಮೇಲೆ ಸಂಸತ್ತಿನಲ್ಲಿ ಅವುಗಳ ಮೇಲೆ ವಿವರ ಚರ್ಚೆ ನಡೆಯುತ್ತದೆ. ಚರ್ಚೆಯಲ್ಲಿ ಸಂಸದರು ಕಟ್ ಮೋಶನ್‌ಗೆ ಒತ್ತಾಯಿಸಬಹುದು. ಕಟ್ ಮೋಶನ್ ಎಂದರೆ ಇಲಾಖೆ ಯೊಂದರ ವಾರ್ಷಿಕ ಹಣಕಾಸು ಬೇಡಿಕೆ ಯನ್ನು ಒಂದು ರೂಪಾಯಿಗೋ ಅಥವಾ ನೂರು ರೂಪಾಯಿಗೋ ಇಳಿಸುವಂತೆ ಆಗ್ರಹಿಸುವುದರ ಮೂಲಕ ತಾವು ಆ ಇಲಾಖೆಯ ಬೇಡಿಕೆಯನ್ನು ತಿರಸ್ಕರಿಸು ತ್ತಿದ್ದೇವೆ ಎಂಬುದನ್ನು ತೋರಿಸುವುದು. ಎಲ್ಲವೂ ಸರ್ಕಾರ ಅಧೀನವಾಗಿ ರುವುದರಿಂದ ತಿರಸ್ಕರಿಸುವ ಸಂಭವ ಇಲ್ಲಿಯವರೆಗೆ ನಡೆದೇ ಇಲ್ಲವೆನ್ನುವಷ್ಟು ಅಪರೂಪ. ಇದನ್ನು ಗಿಲಟನಿಂಗ್ ಎನ್ನಲಾಗುತ್ತದೆ. ಸ್ವಾರಸ್ಯವೆಂದರೆ 2-3 ಇಲಾಖೆ ಬಿಟ್ಟು ಉಳಿದವನ್ನು ಹೀಗೆಯೇ ಅಂಗೀಕರಿಸಲಾಗುತ್ತದೆ. ಹಣಕಾಸು ಬೇಡಿಕೆಗಳನ್ನು ಅಂಗೀಕರಿಸಿದ ಮೇಲೆ ಅನುಮೋದನಾ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಮತ ಪಡೆಯಲಾಗುತ್ತದೆ. ಇದು ಪಾಸಾದರೆ ಸರ್ಕಾರಕ್ಕೆ ಕನ್ಸಾಲಿಡೇಟೆಡ್ ಫಂಡ್‌ನಿಂದ ಖರ್ಚು ಮಾಡಲು ಹಣ ಸಿಗುತ್ತದೆ. ಕನ್ಸಾಲಿಡೇಟೆಡ್ ಫಂಡ್ ಎಂದರೆ ಸರ್ಕಾರದ ಎಲ್ಲಾ ಕಂದಾಯ ಸ್ವೀಕೃತಿಗಳು, ಬಡ್ಡಿಯಿಂದ ಬಂದ ಹಣ ಮತ್ತು ಸಾಲ ಎತ್ತುವುದರಿಂದ ಬಂದ ಹಣಗಳಿರುವ ನಿಧಿ. ಇದಾದ ನಂತರ ಹಣಕಾಸು ವಿಧೇಯಕವನ್ನು ಕೈಗೆತ್ತಿಕೊಂಡು ಸಂಸತ್ತಿನ ಮಂಜೂರಾತಿ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಸರ್ಕಾರವು ಸಂಸತ್ತಿನ ಒಪ್ಪಿಗೆ ಪಡೆಯದ ಯಾವುದಾದರೂ ಬಾಬಿ¤ನಲ್ಲಿ ಹಣ ವಿನಿಯೋಗಿಸಬೇಕಾಗಿ ಬಂದಲ್ಲಿ ಅದಕ್ಕಾಗಿ ಪೂರಕ ಹಣಕಾಸು ಬೇಡಿಕೆಯನ್ನು ಸಂಸತ್ತಿನ ಎದುರು ಮಂಡಿಸಲಾಗುತ್ತದೆ. ಯಾವುದಾದರೂ ನಿರ್ದಿಷ್ಟ ವಿಷಯದಲ್ಲಿನ ಖರ್ಚು ಮೊದಲು ಸಂಸತ್ತಿನ ಅಂಗೀಕಾರ ಪಡೆದದ್ದಕ್ಕಿಂತ ಜಾಸ್ತಿ ಯಾದರೆ ಈ ಪ್ರಸಂಗ ಏರ್ಪಡುತ್ತದೆ. ಬಜೆಟ್‌ಗೆ ಮಂಜೂರಾತಿ ಕೊಡಲು ಲೋಕಸಭೆಗೆ ಮಾತ್ರ ಅಧಿಕಾರವಿದೆ. ರಾಜ್ಯಸಭೆಯು ಬಜೆಟ್‌ಗೆ ತಿದ್ದುಪಡಿಗಳನ್ನು ಮಾತ್ರ ಸೂಚಿಸಬಹುದು. ಇವನ್ನು ಒಪ್ಪುವುದು/ಬಿಡುವುದು ಲೋಕಸಭೆಗೆ ಬಿಟ್ಟ ವಿಚಾರ. – ಮಾವೆಂಸ