Advertisement

ಘಾಗ್ರಾ ಮತ್ತು ಚೋಲಿ

09:33 PM Aug 01, 2019 | mahesh |

ಘಾಗ್ರಾ ಮತ್ತು ಚೋಲಿ ರಾಜಸ್ಥಾನೀ ಮಹಿಳೆಯರ ಸಾಂಪ್ರದಾಯಿಕ ಉಡುಗೆ.
ಹೆಚ್ಚಿನ ಉತ್ತರಭಾರತದ ಮಹಿಳೆಯರ, ಅರ್ಥಾತ್‌ ವಿವಿಧ ರಾಜ್ಯ, ಪ್ರದೇಶ ಹಾಗೂ ಬುಡಕಟ್ಟು ಜನಾಂಗದ ಮಹಿಳೆಯರ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಪರೀಕ್ಷಿಸಿದರೆ “ಘಾಗ್ರಾ ಹಾಗೂ ಚೋಲಿ’ ಸಾಂಪ್ರದಾಯಿಕ ಉಡುಗೆಯಾಗಿ ಹೆಚ್ಚಿನೆಡೆ ಕಂಡುಬರುತ್ತದೆ.

Advertisement

ಆದರೆ, ವೈಶಿಷ್ಟ್ಯವೆಂದರೆ ಬೇರೆ ಬೇರೆ ರಾಜ್ಯಗಳ ಮಹಿಳೆಯರ ಸಾಂಪ್ರದಾಯಿಕ “ಘಾಗ್ರಾ, ಚೋಲಿ’ ಉಡುಗೆಯಲ್ಲಿ ಆಯಾ ಪ್ರದೇಶದ ವೈವಿಧ್ಯ, ವೈಶಿಷ್ಟ್ಯ, ಮೆರುಗು ಜೊತೆಗೂಡಿರುತ್ತದೆ! ಹೌದು, ಇದೇ ಭಾರತೀಯತೆ! ಭಾರತದ ಸಾಂಪ್ರದಾಯಿಕ ಸೊಗಡು!

ರಾಜಸ್ಥಾನದ ಮರುಳುಗಾಡಿನ ಮಣ್ಣಿನ ಮಹಿಳೆಯರ ಉಡುಗೆ-ತೊಡುಗೆಯಲ್ಲಿನ ರಂಗುರಂಗಿನ ವಿನ್ಯಾಸ, ಬಣ್ಣಗಳ ಓಕುಳಿಯ ಚಿತ್ತಾರ ನಿಜವಾಗಿಯೂ ಚಿತ್ತಾಪಹಾರಿ !
ಘಾಗ್ರಾ ಉಡುಗೆಯು ಪಾದಗಳವರೆಗೆ ಉದ್ದವಾಗಿ ಅಲಂಕೃತ ವಿನ್ಯಾಸಗಳ ಸ್ಕರ್ಟ್‌ನಂತಹ ತೊಡುಗೆಯಾಗಿದೆ. ಸೊಂಟದ ಭಾಗದಲ್ಲಿ ಸಣ್ಣದಾಗಿದ್ದು, ನಂತರ ನೆರಿಗೆಗಳಿಂದ ಕೂಡಿ ಪಾದಗಳವರೆಗೆ ಅಗಲವಾಗಿ ಹರಡಿರುತ್ತದೆ. ಸಾಮಾನ್ಯವಾಗಿ ಘಾಗ್ರಾವನ್ನು ಹತ್ತಿಯ ಬಟ್ಟೆಯಿಂದ ತಯಾರಿಸುತ್ತಾರೆ. “ಲಹರಿಯಾ’ ಬಣ್ಣ ಹಾಗೂ ವಿನ್ಯಾಸಗಳಿಂದ ಅಲಂಕರಿಸುತ್ತಾರೆ.

ಚೋಲಿ ಎಂದರೆ ರವಿಕೆಯಂತಹ ತೊಡುಗೆ. ಕೆಲವು ರಾಜಸ್ಥಾನೀ ಮಹಿಳೆಯರು ಘಾಗ್ರಾ, ಚೋಲಿ ಹಾಗೂ ಓಢನೀ (ಹೊದಿಕೆಯಂತಹ ವಸ್ತ್ರ) ಧರಿಸುತ್ತಾರೆ. ಹಲವೆಡೆ ಘಾಗ್ರಾ ಹಾಗೂ ಉದ್ದದ “ಕುರ್ತಿ’ಯಂತಹ ಚೋಲಿಯನ್ನೂ ಧರಿಸುತ್ತಾರೆ. ಓಢನೀ ವಸ್ತ್ರದ ಒಂದು ಭಾಗವನ್ನು ಘಾಗ್ರಾದ ಸೊಂಟದ ಭಾಗದಲ್ಲಿ ಸಿಕ್ಕಿಸಿ, ಇನ್ನೊಂದು ತುದಿಯನ್ನು ಹೆಗಲ ಮೇಲೆ ಅಥವಾ ಹೆಗಲಿನಿಂದ, ತಲೆಯವರೆಗೆ ವಿಶೇಷ ರೀತಿಯಲ್ಲಿ ಹೊದ್ದುಕೊಳ್ಳುತ್ತಾರೆ.

ರಾಜಸ್ಥಾನದ ಹಿಂದೂ ಹಾಗೂ ಮುಸ್ಲಿಂ ಮಹಿಳೆಯರು ಇದೇ ವಸ್ತ್ರವಿನ್ಯಾಸವನ್ನು ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ಬಳಸುತ್ತಾರೆ. ಘಾಗ್ರಾ ಹಾಗೂ ಚೋಲಿಯ ಉದ್ದ ಹಾಗೂ ವೈವಿಧ್ಯಮಯ ಬಣ್ಣಗಳು ಬೇರೆ ಬೇರೆ ಪಂಗಡಗಳಲ್ಲಿ ವಿವಿಧತೆಯನ್ನು ಹೊಂದಿರುವುದು ರಾಜಸ್ಥಾನದ ವಿಶೇಷತೆ.

Advertisement

ರಾಜಸ್ಥಾನದ ಚರಿತ್ರೆಯನ್ನು ಪರಿವೀಕ್ಷಿಸಿದರೆ ರಾಜಮನೆತನದಲ್ಲಿ ವೈಭವದ ಉಡುಗೆ- ತೊಡುಗೆಯನ್ನು ತೊಡುವ ಸಂಪ್ರದಾಯ ಕಂಡುಬರುತ್ತದೆ. ರಾಜಮನೆತನ ಕ್ಕಾಗಿಯೇ ಜತನದಿಂದ ವಿನ್ಯಾಸ ಮಾಡಿ ಸಿರಿವಂತ ಉಡುಗೆಯನ್ನು ತಯಾರಿಸಲಾಗುತ್ತಿತ್ತು. ರಾಜಸ್ಥಾನದ ರಾಜಮನೆತನದ ವಸ್ತ್ರವಿನ್ಯಾಸಕ್ಕಾಗಿಯೇ ಪ್ರಾಚೀನ ಕಾಲದಲ್ಲಿ ಎರಡು ವಿಶೇಷ ವಿನ್ಯಾಸಕಾರರ ವರ್ಗವೇ ಇತ್ತು. ಅವರಿಗೆ “ಕಪ್ಪಡ್‌ವದ್ರಾ’ ಹಾಗೂ “ತೋಷಾಖನಂದ್‌’ ಎಂದು ಕರೆಯಲಾಗುತ್ತಿತ್ತು. ರಜಪೂತ ಮನೆತನದ ವಿಶಿಷ್ಟ ವಸ್ತ್ರವಿನ್ಯಾಸವನ್ನು ತಯಾರಿಸಲು ವಿಶೇಷ ವಸ್ತ್ರಗಳನ್ನು ಗುಜರಾತ್‌ ಹಾಗೂ ವಾರಣಾಸಿಯಿಂದ ಆರಿಸಿ ತರಿಸಲಾಗುತ್ತಿತ್ತು. ಅದರೊಂದಿಗೆ ಕಾಶ್ಮೀರಿ ಶಾಲ್‌ನ ಕಸೂತಿಯಿಂದ ಕೂಡಿದ ವೈಭವೋಪೇತ ಉಡುಗೆಯನ್ನು ರಾಜಸ್ಥಾನೀ ರಾಜಮನೆತನದ ಮಹಿಳೆಯರು (ರಾಣಿ ಹಾಗೂ ರಾಜಕುಮಾರಿಯರು) ಧರಿಸುತ್ತಿದ್ದರು.

ಇಂದಿಗೂ ರಾಜಸ್ಥಾನೀ ಮಹಿಳೆಯ ಉಡುಗೆಯಲ್ಲಿ ಬಹಳಷ್ಟು ಪ್ರಾಮುಖ್ಯತೆ ಹಾಗೂ ವೈವಿಧ್ಯಮಯ ವಿನ್ಯಾಸ, ಅಲಂಕಾರಗಳಿಂದ ಕೂಡಿದ ವಸ್ತ್ರವೆಂದರೆ ಓಢನಿ! ಓಢನೀ ವಸ್ತ್ರದ ಉದ್ದ 10 ಅಡಿಗಳಷ್ಟು ಹಾಗೂ ಅಗಲ 5 ಅಡಿಗಳಷ್ಟಾಗಿದೆ! ಇದಕ್ಕೆ ಕನ್ನಡಿ, ಕಸೂತಿ, ಚಿತ್ತಾರ, ಮೋತಿ ಇತ್ಯಾದಿಗಳಿಂದ ವಿನ್ಯಾಸ ಮಾಡುತ್ತಾರೆ. ಹಳದಿ ಬಣ್ಣದ ಓಢನೀ ವಸ್ತ್ರಕ್ಕೆ ಕೆಂಪು ಮೋತಿ, ಕಸೂತಿ, ಕಮಲದ ವಿನ್ಯಾಸಗಳ ಆಕರ್ಷಕ ಚಿತ್ತಾರ ಮಾಡುವುದು ಜನಪ್ರಿಯ ಸಾಂಪ್ರದಾಯಿಕ ವಿನ್ಯಾಸ.

ಶ್ರೀಮಂತ ವಿನ್ಯಾಸದಿಂದ ಬೆಲೆಬಾಳುವ ಓಢನಿಯನ್ನು ರಾಜಸ್ಥಾನೀ ಮನೆತನಗಳಲ್ಲಿ ಗಂಡುಮಗು ಹುಟ್ಟಿದಾಗ ಮಗಳಿಗೆ ಉಡುಗೊರೆಯಾಗಿ ನೀಡುವ ಸಂಪ್ರದಾಯವಿದೆ! ಹೀಗೆ ಈ ಓಢನೀ ತಲೆತಲಾಂತರಗಳಿಂದ ಜತನದಿಂದ ಕಾಯ್ದುಕೊಂಡು ವಿಶೇಷ ಸಮಾರಂಭಗಳಲ್ಲಿ ತೊಡಲಾಗುತ್ತದೆ.

ರಾಜಸ್ಥಾನೀ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ಅಂದ ಹೆಚ್ಚಿಸುವುದು ಅವರ ವಿಶೇಷ ಆಭರಣಗಳು. ಹಿತ್ತಾಳೆಯ ಗಾಜಿನ ಹರಳುಗಳ ಹಾಗೂ ಬೆಳ್ಳಿಯ ಆಭರಣಗಳು ಮಹತ್ವಪೂರ್ಣವಾಗಿದೆ. ರಾಜಸ್ಥಾನದ ದಕ್ಷಿಣ ಭಾಗದಲ್ಲಿ ಮಹಿಳೆಯರು ತೆಂಗಿನ ಚಿಪ್ಪಿನಿಂದ ತಯಾರಿಸಿದ ಬಳೆಗಳನ್ನು ಧರಿಸುತ್ತಾರೆ. ಅಂತೆಯೇ ಜೂತೀಸ್‌ ಅಥವಾ ಮೊಜಾರಿಸ್‌ ಎಂಬ ಕುರಿಯ ಅಥವಾ ಒಂಟೆಯ ಚರ್ಮದಿಂದ ತಯಾರಿಸಿದ ಚಪ್ಪಲಿಗಳನ್ನು ಸಾಂಪ್ರದಾಯಿಕ ಉಡುಗೆ ಯೊಂದಿಗೆ ಧರಿಸುತ್ತಾರೆ.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next