ಕಾಠ್ಮಂಡು: ದಕ್ಷಿಣ ನೇಪಾಳದ “ಬಾರ” ಜಿಲ್ಲೆಯಲ್ಲಿ ಮಂಗಳವಾರದಿಂದ ಜಗತ್ತಿನ ಅತೀ ದೊಡ್ಡ ಗಾಧಿಮಾಯಿ ಪ್ರಾಣಿ ಬಲಿ ಹಬ್ಬಕ್ಕೆ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಇದು ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಹಬ್ಬವಾಗಿದೆ. ಪ್ರಾಣಿದಯಾ ಸಂಘದ ವಿರೋಧದ ನಡುವೆಯೂ ಗಾಧಿಮಾಯಿ ಪ್ರಾಣಿ ಬಲಿ ಹಬ್ಬ ನಡೆಯುತ್ತಿದೆ. ಸಾವಿರಾರು ಕೋಣ, ಸಾವಿರಾರು ಕುರಿ, ಕೋಳಿ..ಹೀಗೆ ಒಂದೇ ಸ್ಥಳದಲ್ಲಿ ಲಕ್ಷಾಂತರ ಪ್ರಾಣಿಗಳ ಬಲಿ ಇಲ್ಲಿ ನಡೆಯುತ್ತದೆ.
ಲಕ್ಷ, ಲಕ್ಷ ಸಂಖ್ಯೆಯಲ್ಲಿ ಹಿಂದೂ ಭಕ್ತರು ನೇಪಾಳದ ಗಾಧಿಮಾಯಿ ಪ್ರಾಣಿ ಬಲಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಅರ್ಚಕ ಕುರಿ, ಇಲಿ, ಕೋಳಿ , ಹಂದಿ ಹಾಗೂ ಪಾರಿವಾಳವನ್ನು ಕೊಲ್ಲುವ ಮೂಲಕ ಹಬ್ಬ ಆರಂಭವಾಗಿತ್ತು.
ಏನಿದು ಗಾಧಿಮಾಹಿ ಎಂಬ ಸಾಮೂಹಿಕ ಪ್ರಾಣಿ ಬಲಿ ಹಬ್ಬ?
ನೇಪಾಳದಲ್ಲಿ ವಾಸಿಸುವ ಮಾದೇಶಿ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ನಂಬಿಕೊಂಡಿರುವ ದೇವತೆಯ ಹೆಸರು ಗಾಧಿಮಾಯಿ. 5 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಪ್ರಾಣಿಗಳ ಮಾರಣಹೋಮವೇ ನಡೆಯುತ್ತದೆ. ಸುಮಾರು ಐದು ಲಕ್ಷ ಜನ ಸೇರುವ ಬೃಹತ್ ಜಾತ್ರೆಯಲ್ಲಿ ಶೇ.50ರಷ್ಟು ಭಕ್ತರು ಭಾರತದವರೇ ಆಗಿದ್ದಾರೆ.
ಇದು ಪ್ರಪಂಚದಲ್ಲಿಯೇ 2ನೇ ಅತೀ ದೊಡ್ಡ ಪ್ರಾಣಿ ಬಲಿಯ ಜಾತ್ರೆಯಾಗಿದೆ. ಇಲ್ಲಿ ಸುಮಾರು 5 ಲಕ್ಷ ವಿವಿಧ ಜಾತಿಗಳ ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಮೊದಲ ಸಾಲಿನಲ್ಲಿ ಮುಸ್ಲಿಮರ ಹಜ್, ಇಲ್ಲಿ ಕೂಡಾ ಪ್ರತಿವರ್ಷ ಲಕ್ಷಾಂತರ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಗಾಧಿಮಾಯಿ ಜಾತ್ರೆಯಲ್ಲಿ ಎಮ್ಮೆ, ಕೋಣ, ಪಾರಿವಾಳ, ಕುರಿ, ಆಡು, ಇಲಿ ಇತ್ಯಾದಿಗಳನ್ನು ಬಲಿ ಕೊಡಲಾಗುತ್ತದೆ. ಈ ಜಾತ್ರೆಗೆ ಭಾರತದಿಂದ ನೇಪಾಳಕ್ಕೆ ಎಮ್ಮೆಗಳನ್ನು ರಫ್ತು ಮಾಡಲಾಗುತ್ತಿತ್ತು. ಆದರೆ ಸುಪ್ರೀಂಕೋರ್ಟ್ ಆದೇಶದಿಂದ ಗಾಧಿಮಾಯಿ ಜಾತ್ರೆಗೆ ಎಮ್ಮೆ-ಕೋಣ ರಫ್ತು ನಿಂತಿದೆ.
2009ರಲ್ಲಿ ಆಡು, ಕುರಿ, ಕೋಣ, ಪಾರಿವಾಳ ಸೇರಿ ಅಂದಾಜು 5 ಲಕ್ಷ ಪ್ರಾಣಿಗಳನ್ನು ಬಲಿ ನೀಡಲಾಗಿತ್ತು. 2014ರಲ್ಲಿ ಈ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವುದಾಗಿ ಎಚ್ ಎಸ್ ಐ(ಹ್ಯೂಮನ್ ಸೊಸೈಟಿ ಇಂಟರ್ ನ್ಯಾಷನಲ್) ತಿಳಿಸಿದೆ. ಪ್ರಾಣಿಗಳ ಮಾರಣಹೋಮ, ರಕ್ತದೋಕುಳಿ ಹರಿಸುವ ಈ ಜಾತ್ರೆಯನ್ನು ನಿಲ್ಲಿಸಬೇಕೆಂದು ಪ್ರಾಣಿದಯಾ ಸಂಘಟನೆಗಳು, ಕಾರ್ಯಕರ್ತರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ 250ಕ್ಕೂ ಹೆಚ್ಚು ವರ್ಷಗಳ ಕಾಲದಿಂದ ಆಚರಿಸಿಕೊಂಡು ಬಂದ ಹಿಂದೂ ಸಂಪ್ರದಾಯವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ನೇಪಾಳ ಸರ್ಕಾರ ಕೈಚೆಲ್ಲಿತ್ತು.
2015ರಲ್ಲಿ ಇನ್ನು ಮುಂದಿನ ಜಾತ್ರೆಯಲ್ಲಿ ಹೆಚ್ಚಿನ ಪ್ರಾಣಿ ಬಲಿಯನ್ನು ಕೊಡುವುದಿಲ್ಲ ಎಂದು ಗಾಧಿಮಾಯಿ ಟೆಂಪಲ್ ಟ್ರಸ್ಟ್ ಘೋಷಿಸಿತ್ತು. ಆದರೆ ಈ ಬಾರಿಯೂ ಲಕ್ಷಾಂತರ ಪ್ರಾಣಿಗಳನ್ನು ಬಲಿಕೊಡಲಾಗಿದೆ.