ಬಾಗಲಕೋಟೆ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಆತ್ಮ ನಿರ್ಭಯ ಯೋಜನೆಯಡಿ 3 ಲಕ್ಷ ಕೋಟಿ ರೂ.ಗಳ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡುವ ಸಾಲ ಸೌಲಭ್ಯದ ಸದುಪಯೋಗಕ್ಕೆ ಸಂಸದ ಪಿ.ಸಿ. ಗದ್ದಿಗೌಡರ ಕರೆ ನೀಡಿದರು.
ಜಿಪಂ ಸಭಾಭವನದಲ್ಲಿ ಸೋಮವಾರ ನಡೆದ ಆತ್ಮ ನಿರ್ಭಯ ಯೋಜನೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್-19 ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದು, ಅದರಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ಮೀಸಲಿರಿಸಿದೆ. ಜಿಲ್ಲೆಯ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೋವಿಡ್ ಬಿಕ್ಕಟ್ಟಿನಿಂದ ತೊಂದರೆಗೆ ಒಳಗಾಗಿದ್ದು, ಅವುಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಈ ಯೋಜನೆ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ಮಾತ್ರ ಅನ್ವಯವಾಗಲಿದ್ದು, ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದವರಿಗೆ ಅನ್ವಯವಾಗುವುದಿಲ್ಲ. ಜಿಲ್ಲೆಯ ಬ್ಯಾಂಕರ್ ಗಳು ಅರ್ಹ ಉದ್ಯಮಗಳಿಂದ ತುರ್ತಾಗಿ ಅರ್ಜಿ ಪಡೆದು ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಸರ್ಕಾರದ ಯೋಜನೆಗಳ ಲಾಭ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬ ನೋವಿದೆ. ವಿವಿಧ ಇಲಾಖೆಯವರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರವೇ ಬ್ಯಾಂಕ್‌ಗಳಿಗೆ ಸಾಲ ಸೌಲಭ್ಯಕ್ಕಾಗಿ ಆಯ್ಕೆ ಪಟ್ಟಿ ಕಳುಹಿಸಲಾಗಿರುತ್ತದೆ. ಆಯ್ಕೆ ಪಟ್ಟಿಯಲ್ಲಿರುವ ಫಲಾನುಭವಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸೆಕ್ಯೂರಿಟಿ ಕೊಟ್ಟವರಿಗೆ ಮಾತ್ರ ಸಾಲ ನೀಡುವ ಬಗ್ಗೆ ದೂರುಗಳು ಬರುತ್ತಿವೆ. ಇಂತಹ ದೂರುಗಳು ಕಡಿಮೆಯಾಗಿ ನಿಜವಾದ ಫಲಾನುಭವಿಗಳಿಗೆ ಸಾಲ ನೀಡುವಂತೆ ಬ್ಯಾಂಕರ್ ಗಳಿಗೆ ತಿಳಿಸಿದರು.
ಜಿಲ್ಲಾ ಅಗ್ರಣಿ ಬ್ಯಾಂಕ್‌ನ ವ್ಯವಸ್ಥಾಪಕ ಪಿ.ಗೋಪಾಲರೆಡ್ಡಿ ಮಾತನಾಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಲ ಪಡೆದು ಫೆ.29ಕ್ಕೆ 25 ಕೋಟಿಗಿಂತ ಕಡಿಮೆ ಬಾಕಿ ಇರುವವರು ಆತ್ಮ ನಿರ್ಭರ್ ಯೋಜನೆ ಲಾಭ ಪಡೆಯಬಹುದು. ಅಲ್ಲದೇ ವಾರ್ಷಿಕ 100 ಕೋಟಿ ವ್ಯವಹಾರ ನಡೆದಿರಬೇಕು. ಸಾಲದ 2 ಕಂತು ಬಾಕಿ ಉಳಿದವರು ಸಹ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಸಾಲ ಪಡೆದು ಬಾಕಿ ಉಳಿದ ಮೊತ್ತದ ಶೇ.20 ಸಾಲ ನೀಡಲಾಗುತ್ತಿದೆ. ಈ ಸಾಲ ಯೋಜನೆ 3 ವರ್ಷದ ಅವಧಿಯದಾಗಿದ್ದು, ಮೊದಲ ವರ್ಷ ಕೇವಲ ಬಡ್ಡಿಯ ಹಣ ಕಟ್ಟಬಹುದು. ಎರಡನೇ ವರ್ಷದಿಂದ ಅಸಲು ಕಟ್ಟಬಹುದಾಗಿರುತ್ತದೆ. ಶೇ.9.95ಕ್ಕಿಂತ ಹೆಚ್ಚಿನ ಬಡ್ಡಿ ತೆಗೆದುಕೊಳ್ಳುವಂತಿಲ್ಲ. ಕೆನರಾ ಬ್ಯಾಂಕಿನಿಂದ ಶೇ.7.50 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ನಬಾರ್ಡ್ ಡಿಡಿಎಂ ಯಮುನಾ ಪೈ, ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ದೇಸಾಯಿ, ಕೆನರಾ ಬ್ಯಾಂಕಿನ ರಿಜನಲ್ ಮ್ಯಾನೇಜರ್ ವೈ. ಸತೀಶಬಾಬು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ರಿಜಿನಲ್ ಮ್ಯಾನೇಜರ್ ಶ್ರೀಧರ. ಎನ್ ಇದ್ದರು.
ಆತ್ಮ ನಿರ್ಭರ್ ಯೋಜನೆ ಅ.31ರ ವರೆಗೆ ಇದ್ದು, ಈ ಅವಧಿಯೊಳಗೆ 3 ಲಕ್ಷ ಕೋಟಿ ರೂ. ಖಾಲಿಯಾದರೆ ಈ ಯೋಜನೆ ಮುಕ್ತಾಯಗೊಳ್ಳುತ್ತದೆ. ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ತುರ್ತಾಗಿ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿಈಗಾಗಲೇ 2193 ಕೈಗಾರಿಕೆಗಳು ಒಟ್ಟು 25 ಕೋಟಿ ರೂ. ಸಾಲ ಪಡೆದುಕೊಂಡಿವೆ.
-ಪಿ.ಸಿ. ಗದ್ದಿಗೌಡರ, ಸಂಸದ