ಗದಗ: ಶಿಕ್ಷಕರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದ ಬಳಿ ಜಮಾಯಿಸಿದ ಶಿಕ್ಷಕರು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಶಿಕ್ಷಕರ ವರ್ಗಾವಣೆ ಕಾಯ್ದೆ 2017ರ ಅನ್ವಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪ್ರತಿವರ್ಷ ಮಾರ್ಚ್ -ಏಪ್ರಿಲ್‌ನಲ್ಲಿ ನಡೆಯಬೇಕು. ಆದರೆ ಕಳೆದ ಮೂರು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆಯದೇ ಶಿಕ್ಷಕ ಸಮುದಾಯ ತೊಂದರೆಗೆ ಸಿಲುಕಿದೆ ಎಂದು ದೂರಿದರು.
ನವೆಂಬರ್‌ನಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಫೆಬ್ರುವರಿಯಲ್ಲೇ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಶೇಕಡವಾರು ಮಿತಿಯನ್ನು ಪರಿಗಣಿಸಿ ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆಯನ್ನು ಜೂನ್ ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಸೇವಾನಿರತ ಪದವೀಧರ ಶಿಕ್ಷಕರಿಗೆ ಬಡ್ತಿ ನೀಡುವುದು ಅಗತ್ಯವಾಗಿದೆ. ಈಗಾಗಲೇ ಎರಡು ಬಾರಿ ನೇರ ನೇಮಕಾತಿಯ ಮೂಲಕ ಪದವೀಧರ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಸೇವಾನಿರತ ಶಿಕ್ಷಕರಿಗೆ ನಿರಂತರ ಅನ್ಯಾಯವಾಗುತ್ತಿದೆ. ಕಾರಣ ಬಡ್ತಿ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತವಾಗಿದ್ದು, ಎಲ್ಲದಕ್ಕೂ ‘ಪವಿತ್ರಾ ಪ್ರಕರಣ’ವನ್ನು ಮುಂದುಮಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.
ನೂತನ ಪಂಚಣಿ ಯೋಜನೆ(ಎನ್‌ಪಿಎಸ್)ಗೆ ಸಂಬಂಧಿಸಿದಂತೆ ಸಮಿತಿಯ ವರದಿಯನ್ನು ಪಡೆದು ತಕ್ಷಣ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಗ್ರಾಮೀಣ ಕೃಪಾಂಕ ಸೌಲಭ್ಯ ಪಡೆದುಕೊಂಡು ಸೇವೆಯಿಂದ ವಜಾಗೊಂಡಿರುವ ಶಿಕ್ಷಕರ ಪೂರ್ಣ ಸೇವೆ ಪರಿಗಣಿಸಿ ಎಲ್ಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ಎಸ್.ಎಚ್. ನೈನಾಪುರ, ಬಿ.ಎಸ್. ಹರ್ಲಾಪುರ, ಎಸ್.ಎಲ್. ಶಿವಪ್ಪಗೌಡ್ರ, ಕೋಶಾಧ್ಯಕ್ಷ ಆರ್.ಎಚ್. ಖಾನಾಪುರ, ಎಚ್.ಆರ್. ಕೋಣಿಮನಿ, ಎಸ್.ಎನ್.ಅತಡಕರ, ಎಸ್.ಎಂ. ಪಾಟೀಲ, ಕೆ.ಎಂ. ನರಗುಂದ, ಡಿ.ಎಸ್. ತಳವಾರ, ಬಿ.ಎನ್. ಕ್ಯಾತನಗೌಡ್ರ, ಎಸ್.ಎಚ್. ಇಮ್ರಾಪುರ, ವಿ.ಜಿ. ಖೋಡೆ, ವಿಶ್ವನಾಥ ಉಳ್ಳಾಗಡ್ಡಿ, ಬಿ.ಬಿ.ಹಡಪದ, ಎಂ.ಬಿ.ಬಾರಾಟಕ್ಕೆ, ಎಸ್.ಡಿ.ಮಾದರ, ಎಂ.ಎಫ್.ಕೋಲ್ಕಾರ, ಬಿ.ವಿ.ಚಕ್ರಸಾಲಿ, ಎಂ.ಎಸ್.ಪಿಳ್ಳಿ, ಎಸ್.ಕೆ.ಮಂಗಳಗುಡ್ಡ, ಆರ್.ಎಚ್.ಖಾನಾಪೂರ, ಎಚ್ .ಜಿ.ಕಾಂಬಳೇಕರ, ಎಸ್.ಡಿ.ಗುಂಜಳ ಪಾಲ್ಗೊಂಡಿದ್ದರು.