Advertisement

ಬೇಸಿಗೆ ನೀಗಿಸಲು ಜಿಲ್ಲಾಡಳಿತ ಸನ್ನದ್ಧ

03:52 PM Apr 07, 2021 | Team Udayavani |

ಗದಗ: ಬೇಸಿಗೆ ಶುರುವಾಗುತ್ತಿದ್ದಂತೆ ಬಯಲು ಸೀಮೆ ಗದಗ ಜಿಲ್ಲೆಯಲ್ಲಿ ಕುಡಿಯುವ ನೀರುಪೂರೈಕೆಯೇ ಜಿಲ್ಲಾಡಳಿತಕ್ಕೆ ಸವಾಲಾಗುತ್ತಿತ್ತು. ಆದರೆ, ಡಿಬಿಒಟಿ ಯೋಜನೆಯಿಂದ ಗ್ರಾಮೀಣಭಾಗದಲ್ಲಿ ತಕ್ಕಮಟ್ಟಿಗೆ ನೀರಿನ ಸಮಸ್ಯೆ ಬಗೆಹರಿದಿದೆ.

Advertisement

ಆದರೆ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಆಗಾಗನೀರಿನ ಸಮಸ್ಯೆ ತಲೆದೋರುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಗುರುತಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡುವ ಮೂಲಕ ಬೇಸಿಗೆ ನಿಭಾಯಿಸಲು ಜಿಲ್ಲಾಡಳಿತ ಸನ್ನದ್ಧವಾಗುತ್ತಿದೆ.

ಬೇಸಿಗೆಯಲ್ಲಿ ದಿನ ಬೆಳಗಾಗುತ್ತಿದ್ದಂತೆ ಜಿಲ್ಲೆಯನಗರ ಮತ್ತು ಗ್ರಾಮೀಣ ಜನರು ಸೈಕಲ್‌, ಬೈಕ್‌ ಹಾಗೂತಳ್ಳುವ ಗಾಡಿಗಳಲ್ಲಿ ಖಾಲಿ ಕೊಡಗಳನ್ನಿಟ್ಟುಕೊಂಡುಕೊಳವೆ ಬಾವಿ, ಹಳ್ಳ-ಕೊಳ್ಳಗಳಿಗೆ ಅಲೆದಾಡುವುದು ಸಾಮಾನ್ಯವಾಗಿತ್ತು. ಕೆಲ ಗ್ರಾಮಗಳು ನದಿ ಪಾತ್ರದಲ್ಲಿದ್ದರೂ ಬೊಗಸೆಯಲ್ಲಿ ನೀರು ತುಂಬಿಕೊಳ್ಳುವ ಅನಿರ್ವಾಯತೆ ಇತ್ತು. ಆದರೆಜಿಲ್ಲೆಯಲ್ಲಿ ಡಿಬಿಒಟಿ ಯೋಜನೆ, ಶುದ್ಧ ನೀರಿನಘಟಕಗಳ ಅನುಷ್ಠಾನದಿಂದ ನೀರಿನ ಸಮಸ್ಯೆ ಬಹುತೇಕ ಸುಧಾರಿಸಿದೆ.

ಏನಿದು ಡಿಬಿಒಟಿ ಯೋಜನೆ?: ಜಿಲ್ಲೆಯ ಅಂಚಿನಲ್ಲಿ ಹರಿಯುವ ತುಂಗಭದ್ರಾ ಹಾಗೂ ಮಲಪ್ರಭಾ ನದಿನೀರನ್ನು ಜಿಲ್ಲೆಯ ಎಲ್ಲ ಜನವಸತಿ ಪ್ರದೇಶಗಳಿಗೆಸರಬರಾಜು ಮಾಡುವ ಉದ್ದೇಶದೊಂದಿಗೆ1,050 ಕೋಟಿ ರೂ. ಮೊತ್ತದಲ್ಲಿ ಡಿಬಿಒಟಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. 2018ರಿಂದ ಕಾರ್ಯರೂಪಕ್ಕೆ ಬಂದಿದ್ದು, ಪ್ಯಾಕೇಜ್‌-1ರಲ್ಲಿ ಮಲಪ್ರಭಾ ನದಿಯಿಂದ ನರಗುಂದ-ರೋಣತಾಲೂಕಿನ 131 ಹಾಗೂ ಪ್ಯಾಕೇಜ್‌-2ರಲ್ಲಿತುಂಗಭದ್ರಾ ನದಿಯಿಂದ ಮುಂಡರಗಿ, ಗದಗ,ಶಿರಹಟ್ಟಿ ಸೇರಿದಂತೆ 212 ಸೇರಿದಂತೆ 343 ಜನವಸತಿ ಪ್ರದೇಶಗಳಿಗೆ ನದಿ ನೀರು ಪೂರೈಸಲಾಗುತ್ತಿದೆ.

ಜನಸಂಖ್ಯೆ ಆಧರಿಸಿ ಸದ್ಯ ಪ್ಯಾಕೇಜ್‌-1ರಡಿ 26 ಎಂಎಲ್‌ಡಿ ಹಾಗೂ ಪ್ಯಾಕೇಜ್‌-2ರಡಿ48 ಎಂಎಲ್‌ಡಿ ಪೂರೈಸಲಾಗುತ್ತದೆ. ಹೀಗಾಗಿ ಕಳೆದೆರಡು ವರ್ಷಗಳಿಂದ ಯಾವ ಗ್ರಾಮದಲ್ಲೂ ಟ್ಯಾಂಕರ್‌ ಮೂಲಕ ನೀರು ಪೂರೈಕೆಯಾಗಿಲ್ಲ.ಈ ಬಾರಿಯೂ ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್‌ ಮತ್ತು ನವಿಲುತೀರ್ಥ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಹಾಗಾಗಿ ಈ ಸಲವೂ ಸಮಸ್ಯೆಯಾಗದು ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು.

Advertisement

ಪಟ್ಟಣಗಳಲ್ಲೇ ಸಮಸ್ಯೆ: ಜಿಲ್ಲೆಯಲ್ಲಿ ಗ್ರಾಮೀಣಕ್ಕಿಂತ ಗದಗ ನಗರ, ಗಜೇಂದ್ರಗಡ, ಶಿರಹಟ್ಟಿ ಹಾಗೂನರೇಗಲ್‌ ಪಟ್ಟಣಗಳಲ್ಲಿ ಆಗಾಗ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದಿರುವುದುಇತರೆ ಪಟ್ಟಣಗಳಲ್ಲೂ ನೀರಿನ ಪೂರೈಕೆಸಮರ್ಪಕವಾಗಿರದ ಕಾರಣ ಬೇಸಿಗೆಯಲ್ಲಿ ಇದು ಸ್ವಲ್ಪ ಹೆಚ್ಚಾಗುತ್ತಿದೆ. ಜನರು ಖಾಲಿ ಕೊಡಗಳೊಂದಿಗೆ ಬೀದಿಗಿಳಿಯುವಂತಾಗುತ್ತದೆ.

ಜಾನುವಾರುಗಳ ಮೇವಿಗಿಲ್ಲ ಬರ: ಕಳೆದ ಮುಂಗಾರು-ಹಿಂಗಾರಿನಲ್ಲಿ ಅತಿವೃಷ್ಟಿ ಆವರಿಸಿ, ಆಹಾರ ಉತ್ಪನ್ನಕ್ಕೆ ಹಿನ್ನಡೆಯಾಗಿದ್ದರೂ, ಮೇವು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದೆ. ಈ ಪೈಕಿ ಜೋಳ,ಗೋವಿನ ಜೋಳ, ಶೇಂಗಾ ಹೊಟ್ಟು ಯಥೇತ್ಛವಾಗಿಬೆಳೆದಿದೆ. ರೈತರು ಅನ್ಯ ಜಿಲ್ಲೆಯವರಿಗೆ ಮೇವುಮಾರಾಟ ಮಾಡದಿದ್ದರೆ 29 ವಾರಗಳಿಗೆ ಪೂರೈಕೆಮಾಡಬಹುದು. ಮಾರಾಟ ಮಾಡಿದರೂ 9ರಿಂದ 10 ವಾರ ನಿಭಾಯಿಸಬಹುದು. ಈ ವೇಳೆಗೆಬೇಸಿಗೆಯೂ ಪೂರ್ಣಗೊಂಡು, ಮಳೆಗಾಲಆರಂಭವಾಗುತ್ತದೆ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ|ಜಿ.ಪಿ.ಮನಗುಳಿ.

ಅಂತರ್ಜಲ ಗಣನೀಯ ಹೆಚ್ಚಳ: ಕಳೆದ ಎರಡು ವರ್ಷಗಳಿಂದ ಜಿಲ್ಲೆಯನ್ನು ಸತತ ಪ್ರವಾಹ ಹಾಗೂಅತಿವೃಷ್ಟಿ ಆವರಿಸಿದ್ದರಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿದೆ. 2009ರಲ್ಲಿಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹದ ಸಂದರ್ಭದಲ್ಲಿ 3 ರಿಂದ 13 ಮೀಟರ್‌ಗೆ ಬಂದಿತ್ತು. 2010ರಿಂದಈಚೆಗೆ ಮತ್ತೆ ಬರ ಆವರಿಸಿದ್ದರಿಂದ ಅಂತರ್ಜಲಕೆಳಮುಖವಾಗಿತ್ತು. 2013ರಿಂದ 2017ರ ವರೆಗೆಜಿಲ್ಲೆಯಲ್ಲಿ ಸರಾಸರಿ 16 ಮೀಟರ್‌ಗೆ ಇಳಿದಿತ್ತು.ಇದೀಗ ಸತತ ಮಳೆಯಿಂದ ಜಿಲ್ಲೆಯ ಯಾವುದೇ ಭಾಗದಲ್ಲಿ ಕೊರೆದರೂ 6.15 ಮೀಟರ್‌ಗೆನೀರು ದೊರೆಯುತ್ತದೆ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದ ಅಧಿಕಾರಿಗಳು.

ಬೇಸಿಗೆ ನಿರ್ವಹಣೆಗೆ ಜಿಲ್ಲಾಡಳಿತ ಸಿದ್ಧತೆ: ಬೇಸಿಗೆ ನಿರ್ವಹಣೆ ಸಂಬಂಧ ಕಳೆದ ಫೆಬ್ರವರಿಯಿಂದಲೇಪ್ರತಿ ಶುಕ್ರವಾರ ಜಿಲ್ಲಾಮಟ್ಟದ ಅಧಿ ಕಾರಿಗಳಸಭೆ ನಡೆಸುತ್ತಿದೆ. ಸದ್ಯದಅಂದಾಜಿನಂತೆ ಬೇಸಿಗೆ ಪೂರ್ತಿ ಕುಡಿಯುವ ನೀರು ಹಾಗೂ ಮೇವಿನ ಲಭ್ಯತೆ ಇದ್ದರೂ, ಬೇಸಿಗೆಯಲ್ಲಿ ಯಾವುದೇರೀತಿಯ ಸಮಸ್ಯೆಯಾಗದಂತೆ ನಿಭಾಯಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಕಳೆದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಎಚ್‌.ಕೆ.ಪಾಟೀಲ, ಅಂದಿನ ಶಾಸಕರಾದ ಜಿ.ಎಸ್‌.ಪಾಟೀಲ, ಬಿ.ಆರ್‌.ಯಾವಗಲ್‌ ಹಾಗೂ ರಾಮಕೃಷ್ಣ ದೊಡ್ಡಮನಿ ಅವರ ಆಸಕ್ತಿಯಿಂದ ಜಿಲ್ಲೆಯಲ್ಲಿ ಡಿಬಿಒಟಿ ಅನುಷ್ಠಾನಕ್ಕೆ ಬಂದಿದೆ. ಅದರ ಫಲವಾಗಿ ಇದೀಗ ಬೇಸಿಗೆ ಆರಂಭ ಗೊಂಡು ತಿಂಗಳು ಕಳೆದರೂ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೂ, ಡ್ಯಾಂನಲ್ಲಿ ನೀರಿನ ಮಟ್ಟ ಆಧರಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. –ಈರಪ್ಪ ಈಶ್ವರಪ್ಪ ನಾಡಗೌಡ್ರ, ಜಿಪಂ ಅಧ್ಯಕ್ಷ

ಜಿಲ್ಲೆಯಲ್ಲಿ ಸದ್ಯಕ್ಕೆ ಎಲ್ಲೂ ನೀರಿನ ಸಮಸ್ಯೆಗಳು ಕಂಡು ಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದರೆ ಟ್ಯಾಂಕರ್‌ ಮತ್ತು ಕೊಳವೆ ಬಾವಿಗಳನ್ನು ಬಾಡಿಗೆ ಪಡೆಯುವಂತೆ ಗ್ರಾಪಂ ಪಿಡಿಒ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಅಗತ್ಯವೆನಿಸಿದರೆ ಮೇವು ದಾಸ್ತಾನಿಗೂ ಟೆಂಡರ್‌ಗೆ ಸಿದ್ಧತೆ ಮಾಡಿಕೊಳ್ಳುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಈವರೆಗೂ ಈ ಕುರಿತು ಯಾವುದೇ ಪ್ರಸ್ತಾವನೆ ಬಂದಿಲ್ಲ. ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ನಿಧಿಯಡಿ ಸಾಕಷ್ಟು ಅನುದಾನ ಲಭ್ಯವಿದೆ. ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ

 

ವೀರೇಂದ್ರ ನಾಗಲದಿನ್ನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next