Advertisement

Gadaga: 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

06:07 PM Oct 31, 2023 | Team Udayavani |

ಗದಗ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ  ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ವತಿಯಿಂದ ನಗರದ ಹೊರ ವಲಯದ
ಅಸುಂಡಿ ಕ್ರಾಸ್‌ ಬಳಿ ಸೋಮವಾರ ರಸ್ತೆಯಲ್ಲೇ ಇಷ್ಟಲಿಂಗ ಪೂಜೆ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

Advertisement

ರಸ್ತೆಯಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಮ್ಮ ಹೋರಾಟ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಸರ್ಕಾರ, ಶಾಸಕರು, ಸಚಿವರು ಆರಾಮವಾಗಿ ಇರದಿರಿ. ಯಾವುದೇ ಸರ್ಕಾರ ಬಂದರೂ ನಮ್ಮ ಹೋರಾಟ ಮೀಸಲಾತಿ ಅನುಷ್ಠಾನಗೊಳ್ಳುವವರೆಗೆ ನಿಲ್ಲುವುದಿಲ್ಲ. ಸಮಾಜದ ಒಳಿತಿಗಾಗಿ ಬಲಿದಾನಕ್ಕೂ ಸಿದ್ಧ ಎಂದು
ಗುಡುಗಿದರು.

ಪಂಚಮಸಾಲಿ ಸಮಾಜಕ್ಕೆ ರಾಜ್ಯದಲ್ಲಿ 2ಎ ಮೀಸಲಾತಿ ಹಾಗೂ ಲಿಂಗಾಯತ ಸಮುದಾಯದ ಎಲ್ಲ ಜಾತಿಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 2ಡಿ ಮೀಸಲಾತಿ ಘೋಷಿಸಿದರು. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಪಂಚಮಸಾಲಿ ಸಮಾಜ ಈಗ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿ ಅಧಿ ಕಾರಕ್ಕೆ ತಂದಿದೆ. ಈಗಿನ ಸರ್ಕಾರ ಕಾನೂನು ಅಡೆತಡೆಗಳನ್ನು ನಿವಾರಿಸಿ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ದೊರಕಿಸಿಕೊಡುವ ಭರವಸೆ ಇದೆ ಎಂದರು.

ಪಂಚಮಸಾಲಿ ಸಮಾಜದಲ್ಲಿದ್ದುಕೊಂಡೇ ಹೋರಾಟಕ್ಕೆ ಅನ್ಯಾಯ ಮಾಡಿದವರಿಗೆ ಕಳೆದ ಚುನಾವಣೆಯಲ್ಲಿ ಜನ ಪಾಠ ಕಲಿಸಿದ್ದಾರೆ. ಅನ್ನ ಉಣ್ಣುವವರಿಗೆ ಮೀಸಲಾತಿ ಇದೆ. ಆದರೆ, ಅನ್ನ ಕೊಡುವ ರೈತರ ಮಕ್ಕಳಿಗೆ ಮೀಸಲಾತಿ ಇಲ್ಲವಾಗಿದೆ. ನಮ್ಮ ಸಮಾಜದ ಬಡವರು, ರೈತರ ಮಕ್ಕಳಿಗಾಗಿ ಹೋರಾಟ ನಡೆಸುತ್ತಿದ್ದು, ಮೀಸಲಾತಿ ದೊರಕಿಸಿಕೊಡದಿದ್ದಲ್ಲಿ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಇಷ್ಟಲಿಂಗ ಪೂಜೆ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಕೆ. ಪಾಟೀಲ ಅವರು, 2ಎ ಮೀಸಲಾತಿಗೆ
ಆಗ್ರಹಿಸಿ ಪಂಚಮಸಾಲಿ ಸಮಾಜ ನಡೆಸುತ್ತಿರುವ ಹೋರಾಟದ ಧ್ವನಿ ಸರ್ಕಾರವನ್ನು ಮುಟ್ಟಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ಹಿಂದೆ ಮುಖ್ಯಮಂತ್ರಿಯನ್ನು ಭೇಟಿ ಆಗಿ ಮನವಿ ಮಾಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಜ್ಞರ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದ್ದರು. ಮುಖ್ಯಮಂತ್ರಿಗೆ ಆ ಪ್ರಸ್ತಾಪವನ್ನು ಮತ್ತೇ ನೆನಪಿಸಿ, ಸಭೆ ಕರೆಯಲು ಮನವಿ
ಮಾಡುವೆ ಎಂದು ಭರವಸೆ ನೀಡಿದರು.

Advertisement

ಬೆವರು ಸುರಿಸಿ ದುಡಿಯುವ ರೈತರು, ಬಡ ವರ್ಗಕ್ಕೆ ವಿಶೇಷ ಅವಕಾಶಗಳು ಸೃಷ್ಟಿ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳನ್ನು ಜಾಗೃತಿ ಮಾಡುವ ಕೆಲಸವನ್ನು ಶ್ರೀಗಳು ಹೋರಾಟದ ಮೂಲಕ ಮೂರು ವರ್ಷಗಳಿಂದ ಮಾಡುತ್ತಿದ್ದಾರೆ. ಗ್ರಾಮೀಣ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನಾವು ಸ್ವಾಮೀಜಿಗೆ ರಾಜಕೀಯ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರಿಂದ ಹುಬ್ಬಳ್ಳಿ- ಹೊಸಪೇಟೆ ಹೆದ್ದಾರಿ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹಿರಿಯರ ಘಟಕದ ಅಧ್ಯಕ್ಷರು ಅನಿಲಕುಮಾರ ಪಾಟೀಲ, ಯುವ ಘಟಕದ ಅಧ್ಯಕ್ಷರು ಅಯ್ಯಪ್ಪ ಮ. ಅಂಗಡಿ, ಗೌರವ ಅಧ್ಯಕ್ಷರು ಮಹಾಂತೇಶ ನಲವಡಿ, ಈರಣ್ಣ ಬಾಳಿಕಾಯಿ, ಶಿವರಾಜಗೌಡ
ಹಿರೇಮನಿಪಾಟೀಲ, ವಸಂತ ಪಡಗದ, ಬಸವರಾಜ ದೇಸಾಯಿ, ರಮೇಶ ರೋಣದ, ಮಂಜುನಾಥ ಗುಡದೂರ, ಚೇತನ್‌ ಅಬ್ಬಿಗೇರಿ, ರಾಜು ಜಕ್ಕನಗೌಡ್ರ, ಪ್ರಮೋದ ಮಾನೇದ, ಬಿ. ಬಿ. ಸೂರಪ್ಪಗೌಡರ, ಬಸವರಾಜ ಮನಗುಂಡಿ, ಸಂಗಮೇಶ ಹುಣಸೀಕಟ್ಟಿ, ಸಿದ್ದು ಪಾಟೀಲ, ಸ್ವಾತಿ ಅಕ್ಕಿ ಗದಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು, ಈರಮ್ಮ ತಾಳಿಕೋಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next