ಗದಗ: ಸಂಗೀತ, ಸಾಹಿತ್ಯಕ್ಕೆ ಹೆಸರಾಗಿರುವ, ಉತ್ತರ ಕರ್ನಾಟಕ ಸಹ್ಯಾದ್ರಿ ಕಪ್ಪತಗುಡ್ಡವನ್ನು ಹೊಂದಿರುವ ಗದಗ ಜಿಲ್ಲೆ ರಾಜ್ಯ ರಾಜಕಾರಣದಲ್ಲೂ ಗಮನ ಸೆಳೆದಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯು 2008ರ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳನ್ನೂ ಬಿಜೆಪಿ ತನ್ನ ವಶಕ್ಕೆ ಪಡೆಯಿತು. ಅನಂತರ 2013ರ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ಪಾಲಾದವು. ಪ್ರಸ್ತುತ ಬಿಜೆಪಿ ಹಿಡಿತ ಸಾಧಿ ಸಿದೆ. ಗದಗ, ನರಗುಂದ, ರೋಣ ಸಾಮಾನ್ಯ ಕ್ಷೇತ್ರವಾಗಿದ್ದು, ಶಿರಹಟ್ಟಿ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ರೋಣ, ಶಿರಹಟ್ಟಿ ಹಾಗೂ ನರಗುಂದ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೆ.ಎಚ್.ಪಾಟೀಲ್ ರಾಜ್ಯ ಹಾಗೂ ಜಿಲ್ಲೆಯ ಕೇಂದ್ರಬಿಂದು ರಾಜಕಾರಣಿ. ಮೂರು ಬಾರಿ ಮೂರು ಪಕ್ಷಗಳಿಂದ ವಿಧಾನಸಭೆಗೆ ಪ್ರವೇಶಿಸಿದ್ದ ಮುಂಡರಗಿ ಕ್ಷೇತ್ರದ ಎಸ್.ಎಸ್. ಪಾಟೀಲ್ ಅಖಂಡ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸಮಯದಲ್ಲಿ ಗದಗ ಜಿಲ್ಲೆಯಾಗಲು ಪ್ರಮುಖ ಪಾತ್ರ ವಹಿಸಿದ್ದರು. 2008ರ ಹಿಂದಿನಿಂದಲೂ ಗದಗ, ಮುಂಡರಗಿ, ಶಿರಹಟ್ಟಿ, ನರಗುಂದ ಹಾಗೂ ರೋಣ ಸಹಿತ ಐದು ಕ್ಷೇತ್ರಗಳನ್ನು ಹೊಂದಿತ್ತು. 2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಸಮಯದಲ್ಲಿ ಮುಂಡರಗಿ ಕ್ಷೇತ್ರವನ್ನು ತೆಗೆದುಹಾಕಲಾಯಿತು. ಮುಂಡರಗಿ ಹೋಬಳಿಯನ್ನು ಶಿರಹಟ್ಟಿ ಕ್ಷೇತ್ರಕ್ಕೆ, ಡಂಬಳ ಹೋಬಳಿಯನ್ನು ರೋಣ ಕ್ಷೇತ್ರಕ್ಕೆ ಸೇರ್ಪಡೆಗೊಳಿಸಲಾಯಿತು.
ಶಿರಹಟ್ಟಿ :
1957ರಿಂದಲೂ ಸಾಮಾನ್ಯ ಕ್ಷೇತ್ರವಾಗಿದ್ದ ಶಿರಹಟ್ಟಿ ವಿಧಾನಸಭಾ ಕ್ಷೇತ್ರ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಅನಂತರ ಎಸ್‌ಸಿ ಮೀಸಲು ಕ್ಷೇತ್ರವಾಗಿ ಬದಲಾಯಿತು. 1957ರಿಂದಲೂ ಕಾಂಗ್ರೆಸ್, ಜನತಾದಳದಿಂದ ಸ್ಪಧಿ ìಸಿದ್ದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ 2008ರಲ್ಲಿ ಮೊದಲ ಬಾರಿ ಬಿಜೆಪಿ ತನ್ನ ಖಾತೆ ತೆರೆಯಿತು. 1957ರಲ್ಲಿ ಕಾಂಗ್ರೆಸ್‌ನ ಲೀಲಾವತಿ ವೆಂಕಟೇಶ ಮಾಗಡಿ, 1962ರಲ್ಲಿ ಸ್ವತಂತ್ರ ಪಕ್ಷದ ಕೆ.ಎಸ್.ವೀರಯ್ಯ, 1967ರಲ್ಲಿ ಸ್ವತಂತ್ರ ಪಕ್ಷದ ಎಸ್. ವಿ.ಕಾಶೀಮಠ, 1972ರಲ್ಲಿ ಕಾಂಗ್ರೆಸ್‌ನ ವಿ.ವಿ.ವಾಯಿ, 1978, 1983ರಲ್ಲಿ ಕಾಂಗೈ ಹಾಗೂ ಪಕ್ಷೇತರರಾಗಿ ಕೆ.ಎಫ್. ಉಪನಾಳ, 1985ರಲ್ಲಿ ಜನತಾ ಪಕ್ಷದ ಟಿ.ಬಿ. ಬಾಳಿಕಾಯಿ, 1989ರಲ್ಲಿ ಕಾಂಗ್ರೆಸ್‌ನ ಎಸ್.ಎನ್. ಪಾಟೀಲ್, 1994ರಲ್ಲಿ ಜನತಾದಳದಿಂದ ಜಿ.ಎಂ. ಮಹಾಂತಶೆಟ್ಟರ, 1999. 2004ರಲ್ಲಿ ಕಾಂಗ್ರೆಸ್‌ನಿಂದ ಜಿ.ಎಸ್. ಗಡ್ಡದೇವರಮಠ, 2008ರಲ್ಲಿ ಮೀಸಲು ಕ್ಷೇತ್ರವಾದ ಅನಂತರ 2008ರಲ್ಲಿ ಬಿಜೆಪಿಯಿಂದ ರಾಮಣ್ಣ ಲಮಾಣಿ, 2013ರಲ್ಲಿ ಕಾಂಗ್ರೆಸ್‌ನ ರಾಮಕೃಷ್ಣ ದೊಡ್ಡಮನಿ, 2018ರಲ್ಲಿ ಬಿಜೆಪಿಯ ರಾಮಣ್ಣ ಲಮಾಣಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರೋಣ :
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ರೋಣ ಕ್ಷೇತ್ರ ಅಚ್ಚರಿ ಹಾಗೂ ರೋಚಕತೆಗೆ ಸಾಕ್ಷಿಯಾಗಿದೆ. ಇಲ್ಲಿ ಯಾವ ಪಕ್ಷದ ಅಭ್ಯರ್ಥಿ ಶಾಸಕನಾಗಿ ಆಯ್ಕೆಯಾಗುತ್ತಾರೋ ಆ ಪಕ್ಷವು ರಾಜ್ಯದಲ್ಲಿ ಅಧಿ ಕಾರ ನಡೆಸುತ್ತದೆ ಎಂಬುದು ಜಿಲ್ಲೆಯ ಜನರ ನಂಬಿಕೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಎ.ಕೆ.ದೊಡ್ಡಮೇಟಿ 1957, 1962, 1967ರಲ್ಲಿ ಕಾಂಗ್ರೆಸ್‌ನಿಂದ ಸ್ಪಧಿ ìಸಿ ಹ್ಯಾಟ್ರಿಕ್ ಜಯ ಗಳಿಸಿ ಶಾಸಕರಾಗಿ ಆಡಳಿತ ನಡೆಸಿದರು. 1972ರಲ್ಲಿ ಕಾಂಗ್ರೆಸ್‌ನ ಎ.ವಿ.ಪಾಟೀಲ್, 1978ರಲ್ಲಿ ಕಾಂಗ್ರೆಸ್‌ನಿಂದ ವಿ.ಎ.ಮತ್ತಿಕಟ್ಟಿ, 1983ರಲ್ಲಿ ಜೆಎನ್‌ಪಿ, 1985ರಲ್ಲಿ ಜನತಾ ಪಕ್ಷದಿಂದ ಜಿ.ಎಸ್.ದೊಡ್ಡಮೇಟಿ, 1995ರಲ್ಲಿ ಜನತಾದಳದಿಂದ ಶ್ರೀಶೈಲಪ್ಪ ಬಿದರೂರ ಶಾಸಕರಾಗಿ ಆಯ್ಕೆಯಾದರು. 1989, 1999, 2013ರಲ್ಲಿ ಕಾಂಗ್ರೆಸ್‌ನ ಜಿ.ಎಸ್. ಪಾಟೀಲ್, 2004, 2008 ಮತ್ತು 2018ರಲ್ಲಿ ಬಿಜೆಪಿಯಿಂದ ಕಳಕಪ್ಪ ಬಂಡಿ ತಲಾ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಗದಗ :
1957ರ ಚುನಾವಣೆಯಿಂದ 2004ರ ವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗದಗ ವಿಧಾನಸಸಭಾ ಕ್ಷೇತ್ರದಲ್ಲಿ ಮೊದಲ ಎರಡು ಅವ ಧಿ ಯಲ್ಲಿ ಕೆ.ಪಿ.ಗದಗ ಅವರು ಶಾಸಕರಾಗಿ ಆಡಳಿತ ನಡೆಸಿದರು. ಅನಂತರ ಹುಲಕೋಟಿಯ ಹುಲಿ ಎಂದೇ ಪ್ರಸಿದ್ಧರಾಗಿದ್ದ ಕೆ.ಎಚ್. ಪಾಟೀಲ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು. ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು ಸಹಕಾರಿ ರಂಗದ ಭೀಷ್ಮ ಎಂದೇ ಪ್ರಖ್ಯಾತಿ ಹೊಂದಿದ್ದಾರೆ. ಅನಂತರ ಡಿ.ಆರ್.ಪಾಟೀಲ ಕೂಡ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಮೊದಲ ಬಾರಿ ಬಿಜೆಪಿಯಿಂದ ಶ್ರೀಶೈಲಪ್ಪ ಬಿದರೂರ ಶಾಸಕರಾಗಿ ಆಡಳಿತ ನಡೆಸಿದರು. 2013, 2018ರಲ್ಲಿ ಕೆ.ಎಚ್. ಪಾಟೀಲ್ ಪುತ್ರ ಎಚ್.ಕೆ.ಪಾಟೀಲ್ ಕಾಂಗ್ರೆಸ್‌ನಿಂದ ಶಾಸಕರಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ 1978ರಲ್ಲಿ ಕೆ.ಎಚ್.ಪಾಟೀಲ್ ವಿರುದ್ಧ ಸಿ.ಎಸ್.ಮುತ್ತಿನಪೆಂಡಿಮಠ ಹಾಗೂ 2008ರಲ್ಲಿ ಎಚ್.ಕೆ. ಪಾಟೀಲ್ ವಿರುದ್ಧ ಶ್ರೀಶೈಲಪ್ಪ ಬಿದರೂರ ಅವರು ಜಯಗಳಿಸುವ ಮೂಲಕ ಪಾಟೀಲ್ ಮನೆತನದ ವಿರುದ್ಧ ಜಯಗಳಿಸಿದ್ದರು.
ನರಗುಂದ :
ಕಳಸಾ-ಬಂಡೂರಿ ಹಾಗೂ ಮಹಾದಾಯಿ ಹೋರಾಟದ ಮೂಲಕ ದೇಶ ಹಾಗೂ ರಾಜ್ಯದ ಗಮನ ಸೆಳೆದಿರುವ ನರಗುಂದ ವಿಧಾನಸಭಾ ಕ್ಷೇತ್ರವು ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟದ ಹಿನ್ನೆಲೆ ಹೊಂದಿದೆ. ಈ ಭಾಗದಲ್ಲಿ ವಕೀಲಸಾಬ್ ಎಂದೇ ಪ್ರಖ್ಯಾತರಾಗಿರುವ ಬಿ.ಆರ್. ಯಾವಗಲ್ ಮಹಾದಾಯಿ, ಕಳಸಾ-ಬಂಡೂರಿ ಹೋರಾಟದ ಮೂಲಕವೇ 5 ಬಾರಿ ಶಾಸಕರಾಗಿ ಆಳ್ವಿಕೆ ನಡೆಸಿದ್ದಾರೆ. ಅನಂತರ ಅದೇ ಹೋರಾಟಕ್ಕೆ ಧುಮುಕಿದ್ದ ಸಿ.ಸಿ.ಪಾಟೀಲ್ 2004, 2008 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾದರು. 1983, 1985ರಲ್ಲಿ ಜೆಎನ್‌ಪಿ, 1994ರಲ್ಲಿ ಜನತಾದಳ, 1999, 2013ರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಬಿ.ಆರ್. ಯಾವಗಲ್ 2008ರಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದ ರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸೋಲುಂಡಿದ್ದರು. 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಸಿ.ಪಾಟೀಲ್, ಬಿಎಸ್‌ವೈ ನೇತೃತ್ವದ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2013ರಲ್ಲಿ ಮೆಣಸಗಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಸಿ.ಸಿ. ಪಾಟೀಲ್ ತಮ್ಮ ಆಪ್ತರಕ್ಷಕನ ಅಚಾತುರ್ಯದಿಂದ ಗುಂಡೇಟು ತಗಲಿ ಆಸ್ಪತ್ರೆ ಸೇರಿದ್ದರು. ಅದೇ ವರ್ಷ ನಡೆದ ಚುನಾವಣೆಯಲ್ಲಿ ಸ್ಪ ರ್ಧಿಸಿ ಸೋತಿದ್ದರು. 2018ರಲ್ಲಿ ಗೆಲುವು ಸಾ ಧಿಸಿದ ಸಿ.ಸಿ.ಪಾಟೀಲ್ ಪ್ರಸ್ತುತ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
– ಅರುಣಕುಮಾರ ಹಿರೇಮಠ
ಖರ್ಗೆ ಕೋಟೆ ಭೇದಿಸಿದ್ದೇ ರೋಚಕ :
ಯಾದಗಿರಿ: ಅವಿಭಜಿತ ಕಲಬುರಗಿಯೊಂದಿಗೆ ಇದ್ದಾಗ ಯಾದಗಿರಿ ಜಿಲ್ಲೆಯಾಗದಿದ್ದರೂ ರಾಜಕೀಯವಾಗಿ ಹೆಸರು ಮಾಡಿತ್ತು. ಏಕೆಂದರೆ ಯಾದಗಿರಿಗೆ ಹೊಂದಿಕೊಂಡಿರುವ ಗುರುಮಠಕಲ್ ಮೀಸಲು ವಿಧಾನಸಭಾ ಕ್ಷೇತ್ರದಿಂದ ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸತತವಾಗಿ ಎಂಟು ಸಲ ಗೆಲ್ಲುತ್ತ ಬಂದಿರುವುದು ಜತೆಗೆ ಹಿರಿಯ ಮುತ್ಸದ್ಧಿಗಳಾದ ವಿಶ್ವನಾಥ ರೆಡ್ಡಿ ಮುದ್ನಾಳ, ಬಾಪುಗೌಡ ದರ್ಶನಾಪುರ ಹಾಗೂ ಡಾ| ಎ.ಬಿ. ಮಲಕ ರೆಡ್ಡಿ ಕಲ್ಪತರು ನಾಡು ಯಾದಗಿರಿಯೊಂದಿಗೆ ಗುರುತಿಸಿಕೊಂಡಿದ್ದರಿಂದ ರಾಜಕೀಯದಲ್ಲಿ ಯಾದಗಿರಿ ತಮ್ಮದೇಯಾದ ಛಾಪು ಮೂಡಿಸಿದೆ.
ಕೇವಲ ನಾಲ್ಕು ವಿಧಾನಸಭಾ ಕ್ಷೇತ್ರ ಹೊಂದಿರುವ ಜಿಲ್ಲೆಯಲ್ಲಿ ಎಲ್ಲ ಪಕ್ಷಗಳಿಗೂ ಮಣೆ ಹಾಕಿರುವುದನ್ನು ಹಿಂದಿನ ಚುನಾವಣ ಫಲಿತಾಂಶ ಅವಲೋಕಿಸಿದಾಗ ಸ್ಪಷ್ಟ ಅರಿವಿಗೆ ಬರುತ್ತದೆ. ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಲ್ಲದೇ ಲೋಕ ಸೇವಕ, ಕನ್ನಡ ನಾಡು, ಕೆಜೆಪಿ, ಕೆಸಿಪಿ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿರುವುದೇ ಇದಕ್ಕೆ ಸಾಕ್ಷಿ. ಕನ್ನಡ ನಾಡು ಪಕ್ಷ ರಾಜ್ಯದಲ್ಲಿ ಒಂದೇ ಸ್ಥಾನ ಗೆದ್ದಿತ್ತು. ಅದೂ ಜಿಲ್ಲೆಯ ಸುರಪುರದಲ್ಲಿ ಮಾತ್ರ ಖಾತೆ ತೆರೆದಿತ್ತು. ಸ್ವಾತಂತ್ರ್ಯ ಅನಂತರದ ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕ್ರಮೇಣ ಎಲ್ಲ ಪಕ್ಷಗಳು ಜಯ ಸಾಧಿಸಿದ್ದು, ಎಲ್ಲರಿಗೂ ಮಣೆ ಹಾಕಲಾಗಿದೆ.
ಯಾದಗಿರಿ :
1957ರಲ್ಲೇ ಪ್ರಥಮ ಬಾರಿಗೆ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಬಸವಂತರಾಯ ಜಯ ಸಾಧಿಸಿದ್ದರೆ, 1962ರಲ್ಲಿ ಲೋಕ ಸೇವಕದಿಂದ ಬೋಜರಾಜ ಆಯ್ಕೆಯಾದರೆ, 1967 ಹಾಗೂ 1972ರಲ್ಲಿ ವಿಶ್ವನಾಥ ರೆಡ್ಡಿ ಮುದ್ನಾಳ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತಗೊಂಡು ಗಮನ ಸೆಳೆದರು. ಆದರೆ 1978ರಲ್ಲಿ ನಡೆದ ಚುನಾವಣೆಯಲ್ಲಿ ಶರಣಪ್ಪ ಕಲಬುರಗಿ ಆಯ್ಕೆಯಾದರೆ 1983 ಮತ್ತು 1985ರಲ್ಲಿ ವಿಶ್ವನಾಥ ರೆಡ್ಡಿ ಮುದ್ನಾಳ ಜನತಾ ಪಕ್ಷದಿಂದ ಆಯೆ¾ಯಾದರು. ಈ ಸಂದರ್ಭದಲ್ಲೇ ಹೆಗಡೆ ಸಂಪುಟದಲ್ಲಿ ವಿಶ್ವನಾಥ ರೆಡ್ಡಿ ಮುದ್ನಾಳ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಇದಾದ ಅನಂತರ 1989, 1994, 1999 ಸತತ ಮೂರು ಸಲ ಹಾಗೂ 2008 ಮತ್ತು 2013ರಲ್ಲಿ ಒಟ್ಟಾರೆ ಐದು ಬಾರಿ ಡಾ|ಎ.ಬಿ.ಮಾಲಕರೆಡ್ಡಿ ಚುನಾಯಿತರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿರುವುದು ವಿಶೇಷ. ಆದರೆ 2004ರಲ್ಲೂ ಡಾ| ವೀರಬಸವಂತರೆಡ್ಡಿ ಮುದ್ನಾಳ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಗಮನ ಸೆಳೆದರು. ಪ್ರಸ್ತುತ 2018ರ ಚುನಾವಣೆಯಲ್ಲಿ ವಿಶ್ವನಾಥರೆಡ್ಡಿ ಮುದ್ನಾಳ ಪುತ್ರ ವೆಂಕಟರೆಡ್ಡಿ ಮುದ್ನಾಳ ಬಿಜೆಪಿಯಿಂದ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಒಟ್ಟಾರೆ 14 ಚುನಾವಣೆಗಳನ್ನು ಕಂಡ ಯಾದಗಿರಿ ಕ್ಷೇತ್ರದಲ್ಲಿ 6 ಸಲ ಕಾಂಗ್ರೆಸ್, ಜನತಾ ಪಕ್ಷ ಎರಡು ಸಲ, ಲೋಕ ಸೇವಕ ಹಾಗೂ ಬಿಜೆಪಿ ತಲಾ ಒಂದು ಸಲ ಗೆದ್ದರೆ, ನಾಲ್ಕು ಸಲ ಪಕ್ಷೇತರರು ಗೆದ್ದಿದ್ದಾರೆ.
ಶಹಾಪುರ :
1957ರಲ್ಲಿ ಕಾಂಗ್ರೆಸ್‌ನ ವಿರೂಪಾಕ್ಷಪ್ಪ ಅವಿರೋಧವಾಗಿ ಆಯ್ಕೆಯಾದರೆ, 1962ರಲ್ಲಿ ಮಹಾಂತಸ್ವಾಮಿ ವಿರೂಪಾಕ್ಷಯ್ಯ ಸ್ವತಂತ್ರ ಅಭ್ಯರ್ಥಿಯಾಗಿ ವಿರೂಪಾಕ್ಷಪ್ಪ ವಿರುದ್ಧ ಜಯ ಸಾಧಿಸಿದರು. ತದನಂತರ ನಡೆದ 1967ರ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಗಮನ ಸೆಳೆದರು. ಆದರೆ ಅದೇ ವರ್ಷ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 1967ರಲ್ಲೇ ನಡೆದ ಉಪ ಚುನಾವಣೆಯಲ್ಲಿ ಬಾಪುಗೌಡ ರಾಯಪ್ಪಗೌಡ ದರ್ಶನಾಪುರ ಕಾಂಗ್ರೆಸ್‌ನಿಂದ ಚುನಾಯಿತರಾದರು. ಅದೇ ರೀತಿ 1972ರಲ್ಲೂ ಬಾಪುಗೌಡ ದರ್ಶನಾಪುರ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. 1978ರಲ್ಲಿ ಶಿವಣ್ಣ ಸಾಹೂರ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. ಆದರೆ 1983ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಬಾಪುಗೌಡ ದರ್ಶನಾಪುರ ಸ್ಪರ್ಧಿಸಿ ಗೆಲುವು ಸಾಧಿಸಿ ಗಮನ ಸೆಳೆದರು. ತದನಂತರ 1985 ಹಾಗೂ 1989ರಲ್ಲಿ ಕಾಂಗ್ರೆಸ್‌ನಿಂದ ಶಿವಶೇಖರಪ್ಪಗೌಡ ಶಿರವಾಳ ಸತತ ಗೆಲುವು ಸಾಧಿಸಿದರು. 1994ರಲ್ಲಿ ಬಾಪುಗೌಡ ದರ್ಶನಾಪುರ ಪುತ್ರ ಶರಣಬಸಪ್ಪಗೌಡ ದರ್ಶನಾಪುರ ಜನತಾ ದಳದಿಂದ ಗೆಲುವು ಸಾಧಿಸಿದರು. ಆದರೆ 1999ರಲ್ಲಿ ಶಿವಶೇಖರಪ್ಪಗೌಡ ಶಿರವಾಳ ಮತ್ತೆ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿ ಆಯ್ಕೆಯಾದರು. 2004ರಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಜೆಡಿಎಸ್‌ನಿಂದ ಮತ್ತೆ ಚುನಾಯಿತರಾದರು. 2008ರಲ್ಲೂ ಶರಣಬಸಪ್ಪಗೌಡ ದರ್ಶನಾಪುರ ಕಾಂಗ್ರೆಸ್‌ನಿಂದ ಚುನಾಯಿತರಾದರು. 2013 ರಲ್ಲಿ ಶಿವಶೇಖರಪ್ಪಗೌಡ ಶಿರವಾಳ ಪುತ್ರ ಗುರು ಪಾಟೀಲ್ ಶಿರವಾಳ ಕೆಜೆಪಿಯಿಂದ ಗೆದ್ದು ಗಮನ ಸೆಳೆದರು. 2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶರಣಬಸಪ್ಪಗೌಡ ದರ್ಶನಾಪುರ ಗೆಲುವು ಸಾಧಿಸಿ ಕ್ಷೇತ್ರ ಮುನ್ನಡೆಸುತ್ತಿದ್ದಾರೆ. ಒಟ್ಟಾರೆ ಹಲವು ದಶಕಗಳಿಂದ ಶಿರವಾಳ ಮತ್ತು ದರ್ಶನಾಪುರ ಈ ಎರಡು ಮನೆತನದವರೇ ಪ್ರತಿನಿಧಿಸುತ್ತ ಬರುತ್ತಿದ್ದಾರೆ. ಒಟ್ಟಾರೆ 15 ಚುನಾವಣೆ ಕಂಡ ಶಹಾಪುರ ಕ್ಷೇತ್ರದಲ್ಲಿ 9 ಸಲ ಕಾಂಗ್ರೆಸ್ ಗೆದ್ದರೆ ತಲಾ ಒಂದು ಸಲ ಜನತಾ ಪಕ್ಷ, ಜನತಾ ದಳ, ಜಾತ್ಯತೀತ ಜನತಾದಳ ಹಾಗೂ ಕೆಜೆಪಿ ಗೆದ್ದರೆ ಎರಡು ಸಲ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಗುರುಮಠಕಲ್ :
1962ರಲ್ಲಿ ನಡೆದ ಗುರುಮಠಕಲ್ ಕ್ಷೇತ್ರದಲ್ಲಿ ವಿದ್ಯಾಧರ ಗುರೂಜಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರೆ 1967ರಲ್ಲಿ ಮೀಸಲು ಕ್ಷೇತ್ರವಾದ ನಂತರ ಎನ್. ಶಂಕ್ರಪ್ಪ ಕಾಂಗ್ರೆಸ್‌ನಿಂದ ಚುನಾಯಿತರಾದರು. ತದನಂತರ 1972ರಿಂದ 2004ರ ವರೆಗೆ ಕಾಂಗ್ರೆಸ್‌ನ ಡಾ| ಮಲ್ಲಿಕಾರ್ಜುನ ಖರ್ಗೆ ಸತತವಾಗಿ ಎಂಟು ಸಲ ಗೆದ್ದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾಮಾನ್ಯ ಕ್ಷೇತ್ರವಾದ ಅನಂತರವೂ ಕಾಂಗ್ರೆಸ್‌ನಿಂದ 2008 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಬಾಬುರಾವ್ ಚಿಂಚನಸೂರ ಗೆಲುವು ಸಾಧಿಸಿದರೆ, 2018ರಲ್ಲಿ ಜೆಡಿಎಸ್‌ನಿಂದ ನಾಗನಗೌಡ ಕಂದಕೂರ ಚುನಾಯಿತರಾಗಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಒಟ್ಟಾರೆ 13 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಒಂದು ಸಲ ಪಕ್ಷೇತರ ಹಾಗೂ ಒಂದು ಸಲ ಜೆಡಿಎಸ್ ಬಿಟ್ಟರೆ ಉಳಿದ 11 ಸಲ ಕಾಂಗ್ರೆಸ್ ಗೆದ್ದಿದೆ. ಗುರುಮಠಕಲ್ ಕಾಂಗ್ರೆಸ್ ಭದ್ರಕೋಟೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸುರಪುರ :
ಈ ಕ್ಷೇತ್ರವು ಎಸ್ಟಿ ಮೀಸಲು ಕ್ಷೇತ್ರವಾಗಿರುವುದರಿಂದ ಇಲ್ಲಿ ನಾಯಕ ಜನಾಂಗದವರೇ ಆಯ್ಕೆಯಾಗುತ್ತಿರುವುದು ವಿಶೇಷ. 1957ರಲ್ಲಿ ಕುಮಾರ ನಾಯಕ ವೆಂಕಪ್ಪ ನಾಯಕ ಕಾಂಗ್ರೆಸ್‌ನಿಂದ ಚುನಾಯಿತರಾದರೆ, 1962ರಲ್ಲಿ ರಾಜಾಪಿಡ್ ನಾಯಕ ರಾಜಾ ಕೃಷ್ಣಪ್ಪ ನಾಯಕ ಸ್ವತಂತ್ರ ಅಭ್ಯರ್ಥಿಯಾಗಿ ಹಾಗೂ 1967ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ 1972ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಗಮನ ಸೆಳೆದರು. 1978ರಲ್ಲಿ ರಾಜಕುಮಾರ ನಾಯಕ ಕಾಂಗ್ರೆಸ್‌ನಿಂದ ಚುನಾಯಿತರಾದರೆ, 1983, 1985 ಹಾಗೂ 1989ರಲ್ಲಿ ಮದನಗೋಪಾಲ ಕಾಂಗ್ರೆಸ್‌ನಿಂದ ಸತತವಾಗಿ ಮೂರು ಸಲ ಗೆಲುವು ಸಾಧಿಸಿದರು. 1994ರಲ್ಲಿ ರಾಜಾ ವೆಂಕಟಪ್ಪ ನಾಯಕ ಕೆಸಿಪಿಯಿಂದ ಗೆದ್ದರೆ 1999 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದಾರೆ. 2008ರಲ್ಲಿ ಕನ್ನಡ ನಾಡು ಪಕ್ಷದಿಂದ ಗೆಲುವು ಸಾಧಿಸಿರುವ ರಾಜುಗೌಡ, 2018ರಲ್ಲಿ ಬಿಜೆಪಿಯಿಂದ ಗೆದ್ದು ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಒಟ್ಟಾರೆ 14 ಚುನಾವಣೆ ಕಂಡಿರುವ ಸುರಪುರ ಕ್ಷೇತ್ರವು 8 ಸಲ ಕಾಂಗ್ರೆಸ್ ಗೆದ್ದರೆ ಕೆಸಿಪಿ, ಕನ್ನಡ ನಾಡು ತಲಾ ಒಂದು ಸಲ ಗೆದ್ದರೆ ಪಕ್ಷೇತರ ಹಾಗೂ ಬಿಜೆಪಿ ಎರಡು ಸಲ ಬಿಜೆಪಿ ಗೆದ್ದಿದೆ.
-ಮಹೇಶ ಕಲಾಲ