Advertisement

ಉ.ಕ. ಅಭಿವೃದ್ಧಿಗಾಗಿ ಪ್ರತ್ಯೇಕ ರಾಜಕೀಯ ಪಕ್ಷ: ನಾಗೇಶ

09:56 AM Feb 08, 2019 | Team Udayavani |

ಗದಗ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯಕ್ಕಾಗಿ ಹೊಸ ಪರಿಕಲ್ಪನೆಯೊಂದಿಗೆ ‘ಉತ್ತರ ಕರ್ನಾಟಕ ಪಕ್ಷ’ ಸ್ಥಾಪನೆಗೆ ಚಿಂತನೆ ನಡೆಸಿದ್ದು, ಈ ಭಾಗದ 13 ಜಿಲ್ಲೆಗಳಲ್ಲಿ ಫೆ.2ರಿಂದ 28ರವರೆಗೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಳಶೆಟ್ಟಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 6 ದಶಕಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕವನ್ನು ಕಡೆಗಣಿಸಿವೆ. ಈ ಭಾಗದವರೇ ಮುಖ್ಯಮಂತ್ರಿ, ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ರಾಜ್ಯಾಧ್ಯಕ್ಷರಾದರೂ ಈ ಭಾಗಕ್ಕೆ ನ್ಯಾಯ ಒದಗಿಸಲಾಗಿಲ್ಲ. ದಕ್ಷಿಣ ಮತ್ತು ಮೈಸೂರು ಪ್ರದೇಶದ ರಾಜಕಾರಣಿಗಳ ಪ್ರಾಬಲ್ಯದಿಂದಾಗಿ ಉತ್ತರ ಕರ್ನಾಟಕಕ್ಕೆ ಆದ್ಯತೆ ಸಿಕ್ಕಿಲ್ಲ ಎಂದರು.

ಈ ಭಾಗದ ಗದಗ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಉತ್ತರ ಕನ್ನಡ, ಹಾವೇರಿ ಸೇರಿದಂತೆ 13 ಜಿಲ್ಲೆಗಳು ಅಭಿವೃದ್ಧಿಯನ್ನೇ ಕಂಡಿಲ್ಲ. ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಕಲೆ, ಸಾಹಿತ್ಯ, ಸಂಸ್ಕೃತಿ, ರಸ್ತೆ, ಸಾರಿಗೆ, ರೈಲು, ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಯುವಜನ ಮತ್ತು ಮಹಿಳಾ ಸಬಲೀಕರಣ, ಜೈವಿಕ ತಂತ್ರಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನ, ರಾಜಕಾರಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಈ ಭಾಗದ ಜನರು ಹಿಂದುಳಿದಿದ್ದಾರೆ. ಅದಕ್ಕೆ ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯೇ ಪ್ರಮುಖ ಕಾರಣ. ಉತ್ತರ ಕರ್ನಾಕಟದಿಂದ 96 ಶಾಸಕರು, 12 ಸಂಸದರು, 22 ವಿಧಾನ ಪರಿಷತ್‌ ಸದಸ್ಯರು ಹಾಗೂ ಇಬ್ಬರು ರಾಜ್ಯಸಭಾ ಸದಸ್ಯರಿದ್ದಾರೆ. ಅಭಿವೃದ್ಧಿಯಿಂದ ವಂಚಿತವಾಗಿರುವ ಉತ್ತರ ಕರ್ನಾಟಕದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತಬೇಕು ಎಂಬ ಒತ್ತಾಯಕ್ಕೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದರು.

ಉ.ಕ ಪಕ್ಷಕ್ಕೆ ಜನ ಬೆಂಬಲ: ಉತ್ತರ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಆರಂಭಿಸಿರುವ ‘ಉತ್ತರ ಕರ್ನಾಟಕ ಪಕ್ಷ’ ಸ್ಥಾಪನೆಗೆ ಫೆ.2ರಿಂದ ವಿವಿಧ ಜಿಲ್ಲೆಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆ ಆರಂಭಗೊಂಡಿದೆ. ಇದರಲ್ಲಿ 76 ಲಕ್ಷ ಜನರು ಪಾಲ್ಗೊಂಡಿದ್ದು, ಶೇ.85ರಷ್ಟು ಜನರು ಉತ್ತರ ಕರ್ನಾಟಕ ಪಕ್ಷ ಸ್ಥಾಪನೆಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಯುಕೆಪಿ ಅಭ್ಯರ್ಥಿಯಾಗುವವರಿಗೆ ಗ್ರಾಪಂನಿಂದ ಲೋಕಸಭೆವರೆಗಿನ ಎಲ್ಲ ಹಂತದ ಚುನಾವಣೆಗಳಿಗೆ ಎಸ್‌ಎಸ್‌ಎಲ್‌ಸಿಯಿಂದ ಪದವಿವರೆಗೆ ಶೈಕ್ಷಣಿಕ ಅರ್ಹತೆ ನಿಗದಿಗೊಳಿಸಲಾಗಿದೆ. ಲಿಖೀತ, ಮೌಖೀಕ ಪರೀಕ್ಷೆ ನಡೆಸಿ ಚುನಾವಣೆಯಲ್ಲಿ ಮತದಾರರಿಂದಲೇ ಧನ ಸಹಾಯ ಪಡೆಯಬೇಕೆಂಬ ಷರತ್ತಿನೊಂದಿಗೆ ಚುನಾವಣಾ ಟಿಕೆಟ್ ವಿತರಣೆಗೆ ನಿಯಮ ರೂಪಿಸಲಾಗಿದೆ ಎಂದರು. ಎಸ್‌.ಎಸ್‌.ರೆಡ್ಡೇರ್‌, ಬಸವರಾಜ ಸ್ವಾಮಿ, ಸಂದೀಪ್‌ ಉಪ್ಪಿ, ಪವನ್‌ ವಾಲಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next