Advertisement

ವಕಾರ ಸಾಲು ಮಾರಾಟ ಪ್ರಕ್ರಿಯೆಗೆ ಚಾಲನೆ! ನಗರಸಭೆ ಕೋಟ್ಯಂತರ ರೂ. ಆಸ್ತಿ ಕೈತಪುವ ಆತಂಕ

07:51 PM Jan 18, 2022 | Team Udayavani |

ಗದಗ: ನಗರದ ಹೃದಯ ಭಾಗದಲ್ಲಿರುವ ವಕಾರ ಸಾಲು ವಿವಾದ ಕುರಿತು ನ್ಯಾಯಾಲಯ ತೀರ್ಪು ಪ್ರಕಟಿಸುವ ಮುನ್ನವೇ ರಾಜ್ಯ ಸರಕಾರ ಭೂಬಾಡಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ
ಸರಕಾರ ಸದ್ದಿಲ್ಲದೇ ವಕಾರ ಸಾಲು ಮಾರಾಟಕ್ಕೆ ಚಾಲನೆ ನೀಡಿರುವುದು ಇದೀಗ ಬೆಳಕಿಗೆ ಬಂದಿದ್ದು, ನಗರಸಭೆಯ ಕೋಟ್ಯಂತರ ಮೌಲ್ಯದ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗುವ ಆತಂಕವೂ ಎದುರಾಗಿದೆ.

Advertisement

ಇಲ್ಲಿನ ಕಾಟನ್‌ ಮಾರ್ಕೆಟ್‌ನಲ್ಲಿರುವ ಜಾಗೆಯನ್ನು ಕಾಯಂ ಆಗಿ ಭೂಬಾಡಿಗೆದಾರರಿಗೆ ಮಂಜೂರು ಮಾಡಲು ನಿಯಮಾವಳಿಯನ್ನು ಪರಿಶೀಲಿಸಿ, ತಮ್ಮ ಹಂತದಲ್ಲೇ ಬಗೆಹರಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಕೋರ್ಟ್‌ ಅಂಗಳದಲ್ಲಿರುವ ವಿಚಾರವನ್ನು ಅಧಿ ಕಾರಿಗಳ ಹಂತದಲ್ಲೇ ಬಗೆಹರಿಸಿಕೊಳ್ಳಲು ಮುಂದಾಗಿರುವ ಸರಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಏನಿದು ವಕಾರ ಸಾಲು ವಿವಾದ?: ನಗರದ ಭೂಮರಡ್ಡಿ ವೃತ್ತದಿಂದ ಕೆ.ಎಚ್‌. ಪಾಟೀಲ ವೃತ್ತ ಸುತ್ತಲಿನ ಅಕ್ಕಪಕ್ಕದಲ್ಲಿರುವ ನಗರಸಭೆಯ 54 ವಕಾರ ಸಾಲುಗಳನ್ನು 99 ವರ್ಷದ ಅವಧಿಗೆ ಖಾಸಗಿ ವ್ಯಕ್ತಗಳಿಗೆ ಲೀಸ್‌ ನೀಡಲಾಗಿತ್ತು. ಈ ಹಿಂದೆಯೇ ವಕಾರ ಸಾಲುಗಳ ಲೀಸ್‌ ಅವಧಿ ಮುಗಿದಿದ್ದರೂ, ಅ ಧಿಕಾರಿಗಳ ಜಾಣಕುರುಡುತನ, ಪ್ರಭಾವಿಗಳ ಒತ್ತಡ ಹಾಗೂ ಲೀಸ್‌ದಾರರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ವಕಾರ ಸಾಲುಗಳ ತೆರವು ನನೆಗುದಿಗೆ ಬಿದ್ದಿತ್ತು. ಕೊನೆಗೆ 54 ವಕಾರ ಸಾಲುಗಳನ್ನು ನಗರಸಭೆ ಸ್ವಾಧೀನ ಪಡಿಸಿಕೊಳ್ಳುವಂತೆ 2014ರಲ್ಲಿ
ನ್ಯಾಯಾಲಯ ಅಂತಿಮ ತೀರ್ಪು ನೀಡಿತ್ತು.

ನಂತರವೂ ಅಧಿಕಾರಿಗಳು ನಿರುತ್ಸಾಹದಿಂದ ವಕಾರ ಸಾಲುಗಳ ತೆರವು ಕಾರ್ಯ ಮತ್ತೆ ನನೆಗುದಿಗೆ ಬಿದ್ದಿತ್ತು. ಕೊನೆಗೆ 13-7-2019ರಂದು ಜಿಲ್ಲಾಡಳಿತ ಹಾಗೂ ನಗರಸಭೆ ಅಧಿ ಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ವಕಾರ ಸಾಲುಗಳನ್ನು ತೆರವುಗೊಳಿಸಿದ್ದರು. ಸುಮಾರು ಮೂರು ದಿನಗಳ ಕಾಲ ನಡೆದ ತೆರವು ಕಾರ್ಯದಲ್ಲಿ 54 ವಕಾರ ಸಾಲುಗಳು ನೆಲಕ್ಕುರುಳಿದ್ದು
ಈಗ ಇತಿಹಾಸ. ಜಿಲ್ಲಾಡಳಿತ ಏಕಾಏಕಿ ತೆರವು ಕಾರ್ಯಾಚರಣೆ ಕೈಗೊಂಡಿದ್ದನ್ನು ಖಂಡಿಸಿ ಸೆಕ್ಷನ್‌ 144 ಮಧ್ಯೆಯೂ ವಕಾರ ಸಾಲುಗಳ ಭೂ ಬಾಡಿಗೆದಾರರು ಪ್ರತಿಭಟನೆಗೆ ಯತ್ನಿಸಿದ್ದರು. ಅದು ಫಲಿಸದಿದ್ದಾಗ ಹೈಕೋರ್ಟ್‌ ಮೊರೆ ಹೋಗಿದ್ದರು.

ದೊಡ್ಡ ಮಟ್ಟದಲ್ಲಿ ಲಾಬಿ?
ವಕಾರ ಸಾಲು ಜಾಗೆಯನ್ನು ಭೂಬಾಡಿಗೆದಾರರು, ಅನುಭೋಗದಾರರಿಗೆ ಮಂಜೂರು ಮಾಡುವಂತೆ ಕೋರಿ 26-9-2021ರಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರನ್ವಯ ಪರಿಶೀಲಿಸಿ ಮಂಜೂರು ಮಾಡುವಂತೆ ನಿರ್ದೇಶಿಸಿ ಕೇವಲ 72 ದಿನಗಳಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ದೊಡ್ಡಮಟ್ಟದ ಲಾಭಿ ನಡೆದಿರುವ ಬಗ್ಗೆ ಅವಳಿ ನಗರದಲ್ಲಿ ಸಂಶಯದ ಮಾತುಗಳು ಕೇಳಿಬರುತ್ತಿವೆ.

Advertisement

ಪತ್ರದಲ್ಲೇನಿದೆ?
ಗದಗ-ಬೆಟಗೇರಿ ನಗರಸಭೆಯ ಕಾಟನ್‌ ಮಾರ್ಕೆಟ್‌ನಲ್ಲಿ 120 ವರ್ಷಗಳಿಂದ ಇದ್ದ ಅನುಭೋಗದಾರರು, ಭೂಬಾಡಿಗೆದಾರರಿಗೆ ಇರುವ ಜಾಗವನ್ನು ಕಾಯಂ ಆಗಿ ಮಂಜೂರು ಮಾಡಲು ದಿ ಕಾಟನ್‌ ಮಾರ್ಕೆಟ್‌ ವಕಾರ ಮಾಲೀಕರ ಸಂಘ ಕೋರಿದೆ. ಈ ಕುರಿತು ಕರ್ನಾಟಕ ಪುರಸಭೆಗಳ ಅಧಿ ನಿಯಮ 1964ರ ಮನವಿಗೆ ಅನ್ವಯವಾಗುವ ಸುತ್ತೋಲೆಗಳನ್ವಯ ನಿಯಮಾನುಸಾರ
ಪರಿಶೀಲಿಸಿ ತಮ್ಮ ಹಂತದಲ್ಲಿಯೇ ಅಗತ್ಯ ಕ್ರಮವಹಿಸುವಂತೆ ಕೋರಿದ್ದಾರೆ. ಈ ಬಗ್ಗೆ ಸರಕಾರದ ಮತ್ತು ಪೌರಾಡಳಿತ ನಿರ್ದೇಶನಾಲಯದ ಹಂತದಲ್ಲಿ ತೆಗೆದುಕೊಳ್ಳಬೇಕಾದ ಕ್ರಮವೇನಾದರೂ ಇದ್ದಲ್ಲಿ, ಶಿಫಾರಸು, ಸ್ಪಷ್ಟ ಹಾಗೂ ನಿರ್ದಿಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡುವಂತೆ ಕೋರಿ ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು(ಅಭಿವೃದ್ಧಿ) ಕಳೆದ ಡಿ.7ರಂದು ಪತ್ರ ಬರೆದಿದ್ದು, ಇದೀಗ ಬೆಳಕಿಗೆ ಬಂದಿದೆ.

– ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next