ಗದಗ: ಜಿಲ್ಲೆಯ ಮಟ್ಟಿಗೆ ಬರಗಾಲ ಹೊಸದೇನಲ್ಲ. ಕಳೆದೊಂದು ದಶಕದಲ್ಲಿ ಬಹುತೇಕ ಭಾಗ ಬರಗಾಲಕ್ಕೆ ತುತ್ತಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಬರಗಾಲ ಬೆಂಬಿಡದೇ ಕಾಡುತ್ತಿದೆ. ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಗಳು ಜನ, ಜಾನುವಾರುಗಳನ್ನು ಹಿಂಡಿ ಹಿಪ್ಪೆ ಮಾಡಿದೆ.
ಗದಗ ಜಿಲ್ಲೆಯು ಬಹುತೇಕ ಬಯಲು ಪ್ರದೇಶ. ಜಿಲ್ಲೆಯ ಮಹತ್ವಕಾಂಕ್ಷಿ ಯೋಜನೆಗಳಾದ ಸಿಂಗಟಾಲೂರು ಏತನೀರಾವರಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇನ್ನುಳಿದಂತೆ ಮಲಪ್ರಭ ಬಲದಂಡೆ ಕಾಲುವೆಗಳು ರೋಣ ಮತ್ತು ನರಗುಂದ ತಾಲೂಕಿನ ಗ್ರಾಮೀಣ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಷ್ಟೇ ಸೀಮಿತಗೊಂಡಿವೆ. ಜಿಲ್ಲೆಯ ಒಟ್ಟು 2.66 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ 32 ಸಾವಿರ ಹೆಕ್ಟೇರ್ ಪ್ರದೇಶ ಮಾತ್ರ ನೀರಾವರಿಗೊಳಪಟ್ಟಿದೆ. ಹೀಗಾಗಿ ಮಳೆ ಬಂದರೆ ಬೆಳೆ, ಇಲ್ಲವೇ ಗುಳೆ ಎಂಬುದು ಜಿಲ್ಲೆಯ ಪರಿಸ್ಥಿತಿ.
ಜಿಲ್ಲೆಗೆ 600 ಕೋಟಿ ರೂ. ನಷ್ಟ!: ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾನಿಯಿಂದ ರೈತರು ಕೈಸುಟ್ಟುಕೊಂಡಿದ್ದರು. ಮುಂಗಾರು ಕಳೆದ ಹಿಂಗಾರು ಪ್ರವೇಶಿಸುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗಿದ್ದರಿಂದ ಕೃಷಿಕರಲ್ಲಿ ಆಶಾಭಾವನೆ ಹೆಚ್ಚಿಸಿತ್ತು. ಹೀಗಾಗಿ ಹಿಂಗಾರಿನ 2,63,900 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 2,29,842 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆ ಪೈಕಿ ಜೋಳ 62,720 ಹೆಕ್ಟೇರ್, ಮೆಕ್ಕೆಜೋಳ, 2903 ಹೆಕ್ಟೇರ್, ಗೋಧಿ 8,487 ಹೆಕ್ಟೇರ್, ಕಡಲೆ 1,38,145 ಹೆಕ್ಟೇರ್, ಸೂರ್ಯಕಾಂತಿ 10,745 ಹೆಕ್ಟೇರ್, ಹತ್ತಿ 5,124 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದರು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಬೆಳೆಗಳು ಭಾಗಶಃ ಬೆಳೆದು ನಿಂತಾಗ ಸಕಾಲಕ್ಕೆ ಮಳೆ ಬಾರದೇ ಒಣಗಿ ಹೋಗಿವೆ. ಕೆಲವರು ಬೋರ್‌ವೆಲ್, ಕೃಷಿ ಹೊಂಡ ಮತ್ತಿತರೆ ಜಲ ಮೂಲಗಳಿಂದ ಬೆಳೆ ರಕ್ಷಿಸಿ ಕೊಳ್ಳಲು ಅವಿತರವಾಗಿ ಶ್ರಮಿಸಿದರೂ ಫಲಿಸಿಲ್ಲ. ಪರಿಣಾಮ 2,00,404 ಹೆಕ್ಟೇರ್ ಪ್ರದೇಶದಷ್ಟು ಬರ ಆವರಿಸಿದ್ದು, 1,94,671 ಹೆಕ್ಟೇರ್ ಪ್ರದೇಶದಷ್ಟು ಬೆಳೆಗಳೂ ಶೇ. 33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಯಾಗಿದೆ. ಮುಂಗಾರು ಕೈಕೊಟ್ಟಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು, ಕೃಷಿ ಉತ್ಪನ್ನಗಳ ಹಾನಿಯಿಂದ ಜಿಲ್ಲೆಯಲ್ಲಿ ಸುಮಾರು 600 ಕೋಟಿ ರೂ. ಗಳಷ್ಟು ನಷ್ಟವಾಗಿದೆ ಎಂಬುದು ಗಮನಾರ್ಹ.
ಇನ್ಪುಟ್ ಸಬ್ಸಿಡಿಗಾಗಿ ಪ್ರಸ್ತಾವನೆ ಸಲ್ಲಿಕೆ: ಜಿಲ್ಲೆಯ ಐದೂ ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಲಾಗಿದೆ. ಜಿಲ್ಲೆಯ ಸಣ್ಣ, ಮಧ್ಯಮ ಹಾಗೂ ಗರಿಷ್ಠ ಎರಡು ಹೆಕ್ಟೇರ್ ವರೆಗಿನ ಎಲ್ಲ ಕೃಷಿಕರಿಗೆ ತಲಾ 6,800 ರೂ. ಇನ್ಪುಟ್ ಸಬ್ಸಿಡಿ ನಿಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಗದಗ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲೂ ಬರ ಆವರಿಸಿದೆ. ಮುಂಗಾರಿನಲ್ಲಿ ಸುಮಾರು 148 ಕೋಟಿ ರೂ. ಹಾಗೂ ಹಿಂಗಾರಿಗೆ 132 ಕೋಟಿ ರೂ. ಇನ್ಪುಟ್ ಸಬ್ಸಿಡಿ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಮುಂಗಾರು ಇನ್ಪುಟ್ ಸಬ್ಸಿಡಿ ಬಿಡುಗಡೆಯಾಗಬಹುದು.
ಸಿ.ಬಿ. ಬಾಲರೆಡ್ಡಿ,
ಜಂಟಿ ಕೃಷಿ ನಿರ್ದೇಶಕ
ವೀರೇಂದ್ರ ನಾಗಲದಿನ್ನಿ