Advertisement

ವಚನ ಸಾರ ಅರಿತರೆ ಬದುಕು ಸುಂದರ

12:52 PM Jul 25, 2019 | Naveen |

ಗದಗ: ಶರಣರ ಅನುಭಾವದ ನುಡಿಗಳು ವಚನರೂಪದಲ್ಲಿವೆ. ವಚನಗಳ ಸಾರವನ್ನು ಅರ್ಥೈಸಿಕೊಂಡು ಆಚರಣೆಯಲ್ಲಿ ತೊಡಗಿದರೆ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ. ಅಚಲವಾದ ನಂಬಿಕೆ, ನಿಷ್ಠೆಯಿಂದ ಮಾತ್ರ ಭಗವಂತನನ್ನು ಕಾಣಬಹುದು. ಸಮಾಜ ಇಂದಿನ ಎಲ್ಲ ಸಮಸ್ಯೆಗಳಿಗೆ ಶರಣರ ತತ್ವಗಳಾದ ಕಾಯಕ, ದಾಸೋಹದ ಪ್ರಜ್ಞೆ ಉತ್ತರವಾಗಿದೆ ಎಂದು ಡಾ|ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದಿಂದ ನಗರದ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಜರುಗಿದ 2442ನೇ ಶಿವಾನುಭವದಲ್ಲಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಹಾಶರಣ ಕುರುಬ ಗೊಲ್ಲಾಳೇಶ್ವರರು ತಮ್ಮ ಕುರಿ ಕಾಯುವ ಕಾಯಕದಲ್ಲಿಯೇ ಪರವಸ್ತುವನ್ನು ಕಂಡವರು. ಆಧ್ಯಾತ್ಮಿಕ ಔನ್ನತ್ಯ ಕೇವಲ ಮೇಲ್ವರ್ಗದವರಿಗೆ ಅಲ್ಲ. ಅದನ್ನು ಎಲ್ಲರೂ ಸಾಧಿಸಬಹುದಾಗಿದೆ ಎಂಬುದನ್ನು ಶರಣರು ಪ್ರತಿಪಾದಿಸಿ ತೋರಿಸಿದರು ಎಂದು ನುಡಿದರು.

ಮಹಾಶರಣ ಕುರುಬ ಗೊಲ್ಲಾಳೇಶ್ವರ ವಚನಸಾರ ಎಂಬ ವಿಷಯವಾಗಿ ಬಸವತತ್ವ ಚಿಂತಕ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಉಪನ್ಯಾಸ ನೀಡಿ, ಕುರಿಯ ಹಿಕ್ಕೆಯನ್ನೇ ಲಿಂಗವನ್ನಾಗಿ ಪೂಜಿಸಿ, ಅನುಭಾವವನ್ನು ಹೊಂದಿ, ಭಕ್ತಿಯ ಪರಾಕಾಷ್ಠೆಯನ್ನು ಮೆರೆದ ಗೊಲ್ಲಾಳೇಶ್ವರರು ತಮ್ಮ ವಚನಗಳ ಮೂಲಕ ಭಕ್ತಿಯ ಮಾರ್ಗವನ್ನು ತೋರಿದ್ದಾರೆ. ತನ್ನ ಕುರಿ ಕಾಯಕದಲ್ಲಿ ಬರುವ ವಸ್ತುಗಳನ್ನೇ ರೂಪಕಗಳನ್ನಾಗಿ ಬಳಸಿ ವಚನಗಳಲ್ಲಿ ವಿಚಾರಗಳನ್ನು ಹೇಳಿದ ಪರಿ ಬೆರಗುಗೊಳಿಸುವಂತಹುದ್ದು. ವರ್ಗ, ವರ್ಣ, ಜಾತಿ ಭೇದವನ್ನು ಅಳಿಸಿ ಸರ್ವರೂ ಸಮಾನರು ಎಂದು ಸಾರಿ ಶರಣರು ಕಲ್ಯಾಣ ರಾಜ್ಯದ ಪರಿಕಲ್ಪನೆ ಹುಟ್ಟು ಹಾಕಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, ಮನುಷ್ಯರೆಲ್ಲ ಒಂದೇ ಎಂಬ ಭಾವವನ್ನು ಎಲ್ಲ ಶರಣರು, ದಾರ್ಶನಿಕರು, ದಾಸರು ಸಾರಿದ್ದಾರೆ. ಆದರೆ ಇಂದಿನ ರಾಜಕೀಯ ವ್ಯವಸ್ಥೆ ಪರಿಣಾಮವಾಗಿ ಸಮಾಜದಲ್ಲಿ ಜಾತಿಯ ಭಾವನೆಗಳು ಮತ್ತೆ ಗಟ್ಟಿಗೊಳ್ಳುತ್ತವೆ. ಇದನ್ನು ತೊಡೆದು ಹಾಕದಿದ್ದರೆ ಸಾಮಾಜಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದು ಹೇಳಿದರು.

ಹುಲ್ಲೂರಿನ ಮುತ್ತಪ್ಪ ಮಡಿವಾಳರ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು.

Advertisement

ಧರ್ಮಗ್ರಂಥ ಪಠಣವನ್ನು ಕಾಲೇಶ್ವರ ಅಶೋಕ ಹಾದಿ ಹಾಗೂ ವಚನ ಚಿಂತನೆಯನ್ನು ಕಾರ್ತಿಕ ಸಿದ್ಧಲಿಂಗೇಶ ಹಗೆದಾಳ ನೆರವೇರಿಸಿದರು.

ಸೇವಾಕರ್ತರಾದ ಗಿರಿಜಕ್ಕ ಪಾಟೀಲ, ಮಹದೇವಪ್ಪ ಚನ್ನಬಸಪ್ಪ ಹುಲ್ಲತ್ತಿ, ಪರಶುರಾಮ ಚನ್ನಪ್ಪ ನಾಯ್ಕರ, ಶಿವಾನುಭವ ಸಮಿತಿ ಚೇರಮನ್ನರಾದ ವಿವೇಕಾನಂದಗೌಡ ಪಾಟೀಲ, ಸಂಗಮೇಶ ದುಂದೂರ, ಶಶಿಧರ ಬೀರನೂರ, ಡಾ| ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ಪ್ರಕಾಶ ಅಸುಂಡಿ, ವೀರಣ್ಣ ಗೊಡಚಿ ವೇದಿಕೆಯಲ್ಲಿದ್ದರು. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು. ಬಾಹುಬಲಿ ಜೈನರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next