Advertisement

ಮಾ.14ರಿಂದ ಲಕ್ಕುಂಡಿ ಉತ್ಸವ ಆರಂಭ

03:20 PM Feb 16, 2020 | Naveen |

ಗದಗ: ಮಾ. 14 ಹಾಗೂ 15ರಂದು ಲಕ್ಕುಂಡಿ ಉತ್ಸವವನ್ನು ಅರ್ಥಪೂರ್ಣ ಹಾಗೂ ಸಂಭ್ರಮದಿಂದ ಆಚರಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಲಕ್ಕುಂಡಿಯ ಅನ್ನದಾನೀಶ್ವರ ಮಠದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹಾಗೂ ರಾಜ್ಯ ಮತ್ತು ಅಂತಾರಾಷ್ಟ್ರೀಯ ಕಲಾವಿದರಿಗೆ ಸಮಾನ ಅವಕಾಶ ಕಲ್ಪಿಸುವ ಭರವಸೆ ನೀಡಿದರು. ಲಕ್ಕುಂಡಿ ಉತ್ಸವವನ್ನು ಸ್ವಚ್ಛತೆಯ ರೂಪದಲ್ಲಿ ಫ್ಲೆಕ್ಸ್‌-ಬ್ಯಾನರ್‌ ಮುಕ್ತ ಉತ್ಸವವನ್ನು ಆಚರಿಸುವ ಆಶಯ ವ್ಯಕ್ತಪಡಿಸಿದರು. ಲಕ್ಕುಂಡಿ ಉತ್ಸವದಲ್ಲಿ ಸಿಡಿಮದ್ದಿನ ವಿಶೇಷ ಪ್ರದರ್ಶನ ಏರ್ಪಡಿಸಲಾಗುವುದು. ಉತ್ಸವದ ವೇದಿಕೆ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಹೊರತುಪಡಿಸಿ, ಉಳಿದ ಸಮಯದಲ್ಲಿ ಸಂಪೂರ್ಣವಾಗಿ ಕಲಾವಿದರ ಕಲೆ ಅನಾವರಣಗೊಳಿಸುವಂತಹ ವೇದಿಕೆ ಆಗಲು ಎಲ್ಲ ಚುನಾಯಿತ ಪ್ರತಿನಿಧಿಗಳು ಸಹಕರಿಸಬೇಕು. ಕಾರ್ಯಕ್ರಮದ ಉದ್ಘಾಟನೆ ಸಮಾರಂಭಕ್ಕೆ ಅತಿಥಿಗಳನ್ನು ಆಹ್ವಾನಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಉತ್ಸವ ಹಿನ್ನೆಲೆಯಲ್ಲಿ ಗ್ರಾಮವನ್ನು ಸ್ವಚ್ಛವಾಗಿಸಲು ಗ್ರಾಮಸ್ಥರು ಸಹಕಾರ ನೀಡಬೇಕು. ಸಕ್ರಿಯವಾಗಿ ಉತ್ಸವದ ಯಶಸ್ಸಿಗೆ ಭಾಗಿಯಾಗಲು ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.

ಸ್ಥಳೀಯ ಕಲಾವಿದರಿಗೆ ಉತ್ಸವದಲ್ಲಿ ಭಾಗಿಯಾಗಲು ಅರ್ಜಿ ಸಲ್ಲಿಕೆಗೆ ದಿನವನ್ನು ನಿಗದಿ ಮಾಡಿ, ಆಯ್ಕೆ ಸಮಿತಿಯಿಂದ ತಂಡಗಳ ಆಯ್ಕೆ ಮನರಂಜನೆ, ಸಂದೇಶ ನೀಡುವಂತಹ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಜಿ.ಪಂ. ಅಧ್ಯಕ್ಷ ಸಿದ್ದು ಪಾಟೀಲ ಮಾತನಾಡಿ, ಲಕ್ಕುಂಡಿ ಐತಿಹಾಸಿಕ ಪರಂಪರೆಯ ತಾಣವಾಗಿದ್ದು, ಈ ಬಾರಿಯ ಲಕ್ಕುಂಡಿ ಉತ್ಸವವನ್ನು ಯಶಸ್ವಿಯಾಗಿಸಲು ಅಗತ್ಯ ಸಹಕಾರ ನೀಡಲಾಗವುದು. ರಾಜ್ಯ ಸರಕಾರ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ದು, ಅದನ್ನು ಸಕ್ರಿಯವಾಗಿಸಿ ಉತ್ಸವವನ್ನು ಉತ್ತಮ ರೀತಿಯಲ್ಲಿ ಆಚರಿಸಲು ಕ್ರಮ ಜರುಗಿಸಬೇಕು ಎಂದರು.

ಲಕ್ಕುಂಡಿ ಉತ್ಸವ ಕುರಿತಂತೆ ಗ್ರಾಮದ ಪ್ರಮುಖರು ಮಾತನಾಡಿ, ಉತ್ಸವದ ಸಂಭ್ರಮದ ಆಚರಣೆಯಲ್ಲಿ ಗ್ರಾಮದ ಸರ್ವ ಸಹಕಾರ ನೀಡುವ ಕುರಿತು ವಿಚಾರಗೋಷ್ಠಿಗಳಲ್ಲಿ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮುಂತಾದವುಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಚಾರಗೋಷ್ಠಿ ಏರ್ಪಡಿಸಲು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು, ಲಕ್ಕುಂಡಿಯ ಇತಿಹಾಸ ಕುರಿತು ಹೆಚ್ಚಿನ ಮಾಹಿತಿ ಒದಗಿಸುವ ಕಾರ್ಯಕ್ರಮ, ದೇವಸ್ಥಾನಗಳಿಗೆ ದೀಪಾಲಂಕಾರ ಮಾಡುವ, ಐತಿಹಾಸಿಕ ದೇವಸ್ಥಾನಗಳಿಗೆ ಮಾಹಿತಿ ಫಲಕ ಅಳವಡಿಕೆ ಕುರಿತು ಸಲಹೆಗಳನ್ನು ನೀಡಿದರು.

Advertisement

ಲಕ್ಕುಂಡಿ ಗ್ರಾ.ಪಂ. ಅಧ್ಯಕ್ಷ ಶಿವಪುತ್ರಪ್ಪ ಬೂದಿಹಾಳ, ತಾ.ಪಂ. ಉಪಾಧ್ಯಕ್ಷೆ ಸುಜಾತಾ ಖಂಡು, ಜಿ.ಪಂ. ಸಿಇಒ ಡಾ| ಆನಂದ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಯತೀಶ್‌, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎನ್‌., ತಹಶೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾ.ಪಂ. ಇಒ ಡಾ| ಎಚ್‌.ಎಸ್‌. ಜನಗಿ ಹಾಗೂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದ ಗಣ್ಯರು, ಗುರು, ಹಿರಿಯರು ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next