Advertisement
ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ಕುರಿತು ಚರ್ಚೆಯಲ್ಲಿ ನಕಲಿ ವೈದ್ಯರ ಬಗ್ಗೆ ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ವಿಷಯ ಪ್ರಸ್ತಾಪಿಸಿದರು. ಪ್ರತಿ ಗ್ರಾಮದಲ್ಲಿ ಮೂರ್‍ನಾಲ್ಕು ಜನ ನಕಲಿ ವೈದ್ಯರಿದ್ದು, ಜನರ ಜೀವದೊಂದಿಗೆ ಚೆಲ್ಲಾಟ ವಾಡುತ್ತಿದ್ದಾರೆ. ಈ ಬಗ್ಗೆ ಕಳೆದ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವ ಕ್ರಮಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
Related Articles
Advertisement
ಕೃಷಿ ಇಲಾಖೆಗೆ ಸಂಬಂಧಿಸಿದ ಚರ್ಚೆಯಲ್ಲಿ ರೈತರ ಪಹಣಿ ಪತ್ರಿಕೆಗಳಲ್ಲಿ ನೀರಾವರಿ ಎಂದು ತಪ್ಪಾಗಿ ನಮೂದಾಗಿದ್ದು, ಅರ್ಹ ರೈತರಿಗೆ ಸರಕಾರದ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ದೂರುಗಳಿವೆ. ಈ ಕುರಿತು ಪರಿಶೀಲಿಸಿ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ. ಬಾಲರೆಡ್ಡಿ ಸಭೆಗೆ ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪಹಣಿಯಲ್ಲಿ ಆಗಿರುವ ಲೋಪದ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ಜರುಗಿಸಿ, ರೈತರಿಗೆ ಬೆಳೆ ಪರಿಹಾರ, ಬೆಳೆಹಾನಿ ಸೌಲಭ್ಯ ದೊರಕಿಸುವಂತೆ ಮಾಡಬೇಕು. ಜಿಲ್ಲೆಯ ವಿವಿಧೆಡೆ ಹದಗೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಹಾಗೂ ಅಗತ್ಯವಿರುವೆಡೆ ಸ್ಥಳಾಂತರಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 28 ಮೇವು ಬ್ಯಾಂಕುಗಳನ್ನು ತೆರೆಯಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಗಂಟಲು ಬೇನೆ, ಕಾಲುಬಾಯಿ ರೋಗ ಹರಡದಂತೆ 6 ತಿಂಗಳಿಗೊಮ್ಮೆ ಲಸಿಕೆ ಹಾಕಲಾಗುತ್ತಿದೆ ಎಂದು ಪಶು ಪಾಲನಾ ಹಾಗೂ ಪಶು ವೈದ್ಯ ಸೇವೆ ಇಲಾಖೆಯ ಉಪನಿರ್ದೇಶಕರು ಸಭೆಗೆ ತಿಳಿಸಿದರು. ಪಶು ವೈದ್ಯಾಧಿಕಾರಿಗಳು ಲಸಿಕಾ ಕಾರ್ಯಕ್ರಮ, ಜಾನುವಾರುಗಳಿಗೆ ಔಷಧಿ ವಿತರಣೆಯನ್ನು ಆಯಾ ಭಾಗದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಪದೇ-ಪದೇ ಪಿಡಿಒಗಳನ್ನು ವರ್ಗಾಹಿಸಬಾರದು ಎಂದು ಜಿಪಂ ಸದಸ್ಯೆ ಮಂಜುಳಾ ಹುಲ್ಲಣ್ಣವರ ಆಗ್ರಹಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಸೊರಟೂರ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು.
ವಿವಿಧ ಇಲಾಖೆಗಳ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಉಪ ಕಾರ್ಯದರ್ಶಿ ಡಿ.ಪ್ರಾಣೇಶ ರಾವ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಈರಪ್ಪ ಈಶ್ವರಪ್ಪ ನಾಡಗೌಡ್ರ, ಜಿ.ಪಂ. ಸದಸ್ಯರು, ಜಿಪಂ ಯೋಜನಾ ನಿರ್ದೇಶಕ ಟಿ.ದಿನೇಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.