ವೀರೇಂದ್ರ ನಾಗಲದಿನ್ನಿ
ಗದಗ: ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಗಳ ಚೆಲ್ಲಿ..ಈ ಜನಪ್ರಿಯ ಈ ಹಾಡಿನ ಸಾಲುಗಳನ್ನು ಎಷ್ಟು ಬಾರಿ ನೆನಪಿಸಿಕೊಂಡರೂ ನೆಮ್ಮದಿ ಕಾಣದಂತಾಗಿದೆ.
ಹೌದು. ಕಳೆದ ಐದಾರು ವರ್ಷಗಳಿಂದ ತೀವ್ರ ಬರದಿಂದ ಕಂಗೆಟ್ಟ ರೈತರು ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಕೈ ಹಿಡಿಯುವ ನಿರೀಕ್ಷೆ ಹೊಂದಿದ್ದಾರೆ. ಆದರೆ, ಮುಂಗಾರು ಹಂಗಾಮು(ಮಿರಗ) ಆರಂಭಗೊಂಡು ಬರೋಬ್ಬರಿ ಒಂದು ವಾರ ಕಳೆದರೂ ಜಿಲ್ಲೆಯಲ್ಲಿ ಒಂದೇ ಒಂದು ದೊಡ್ಡ ಮಳೆಯಾಗಿಲ್ಲ.
ಈ ನಡುವೆ ಒಂದೆರೆಡು ಬಾರಿ ಚದುರಿದ ಮಳೆ ಸುರಿದಿದ್ದರೂ, ಕೃಷಿ ಚಟುವಟಿಕೆಗಳು ಉತ್ತೇಜನಗೊಂಡಿಲ್ಲ. ಜಿಲ್ಲೆಯ ಮುಂ ಗಾರಿನ ಪ್ರಮುಖ ಬೆಳೆಯಾಗಿರುವ ಹೆಸರು, ಶೇಂಗಾ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ರೈತರು ಸಿದ್ಧ ಗೊಂಡಿದ್ದಾರೆ. ಈಗಾಗಲೇ ಭೂಮಿ ಹದಗೊಳಿಸಿ, ಕಸ ಆರಿಸಿ ಸಮತಟ್ಟುಗೊಳಿಸಿದ್ದಾರೆ. ಬಿತ್ತನೆಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿತ್ತನೆಗೆ ಪೂರಕವಾಗಿ ಒಂದೆರಡು ದೊಡ್ಡ ಮಳೆಯಾದರೆ ಸಾಕು ಬಿತ್ತನೆ ಕಾರ್ಯ ಆರಂಭಿಸಲು ರೈತರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಇನ್ನೂ ಮುಂಗಾರು ಮಳೆ ಕೈಹಿಡಿಯದ ಕಾರಣ ರೈತರು ಆಕಾಶದಲ್ಲಿ ತೇಲಾಡುವ ಕಪ್ಪು ಮೋಡಗಳನ್ನೇ ನೋಡುವಂತಾಗಿದೆ.
ಮಳೆ ಕೊರತೆ, ಬಿತ್ತನೆಗೆ ಹಿನ್ನಡೆ: ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗೆ ಸರಾಸರಿ 142.6 ಮಿ.ಮೀ. ನಷ್ಟು ಮಳೆಯಾಗಬೇಕಿತ್ತು. ಆ ಪೈಕಿ ಈವರೆಗೆ ಕೇವಲ 82.3 ಮಿ.ಮೀ. ನಷ್ಟು ಮಳೆಯಾಗಿದೆ. ಅದರಲ್ಲೂ ಜೂನ್‌ನಲ್ಲಿ ಆಗಬೇಕಿದ್ದ 31.2 ಮಿ.ಮೀ. ವಾಡಿಕೆ ಮಳೆಯಲ್ಲಿ 24.3 ಮಿ.ಮೀ. ಮಳೆಯಾಗಿದೆ. ಜೂನ್ 3ರಂದು ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದರೂ ನಂತರ ಮರೆಯಾಗಿಲ್ಲ. ಕಳೆದ ಎರಡು ದಿನಗಳವರೆಗೂ ರಣ ರಣ ಎನ್ನುತ್ತಿದ್ದ ಬೇಸಿಗೆ ಬಿಸಿಲು ಭೂಮಿಯನ್ನು ಕಾದ ಕಾವಲಿಯಾಗಿಸಿತ್ತು. ನಿರೀಕ್ಷೆಯಂತೆ ಮುಂಗಾರು ಆರಂಭದಲ್ಲಿ ಮಳೆಯಾಗಿದ್ದರೆ ಈ ವೇಳೆಗೆ ಬಿತ್ತನೆ ಕಾರ್ಯ ಆರಂಭಗೊಳ್ಳುತ್ತಿತ್ತು. ಮಳೆ ಅಭಾವದಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ರೈತಾಪಿ ಜನರು.
ಕಳೆದ ವರ್ಷ(2018)ದ ಮುಂಗಾರು ಆರಂಭಕ್ಕೂ ಮುನ್ನವೇ ಅಬ್ಬರಿಸಿದ್ದ ಮಳೆ ಜೂನ್ ತಿಂಗಳ ಮಧ್ಯೆ, ಜುಲೈ ಕೊನೆಯಿಂದ ಸಂಪೂರ್ಣ ಕೈಕೊಟ್ಟಿತ್ತು. ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ, ಬೆಳೆ ಹಾನಿಯಾಯಿತು. ಆನಂತರ ಹಿಂಗಾರು ಹಂಗಾಮು, ಅದಕ್ಕೂ ಹಿಂದಿನ ವರ್ಷಗಳ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಇನ್ನು ಕೆಲವೊಮ್ಮೆ ಬೆಳೆ ಕೈಗೆ ಬರುವ ವೇಳೆ ಮಳೆಯಾಗಿದ್ದರಿಂದ ಬೆಳೆಗಳು ಹಾನಿಗೊಳಗಾಗಿವೆ. ಹೀಗಾಗಿ ಸತತ 5 ವರ್ಷಗಳಿಂದ ಬರದಿಂದ ರೈತರು ಬೆಂದಿದ್ದಾರೆ. ಈ ಬಾರಿಯಾದರೂ ಪಾರು ಮಾಡುವಂತೆ ಪ್ರಾರ್ಥಿಸುವಂತಾಗಿದೆ.
ಮುಂಗಾರು ಪೂರ್ವದಲ್ಲೇ(ಮೇ ತಿಂಗಳಲ್ಲಿ) ರೋಹಿಣಿ ಮಳೆಯಾಗಿದ್ದರೆ, ಇಷ್ಟೊತ್ತಿಗೆ ಹೆಸರು ಬಿತ್ತನೆಯಾಗಿ ಮೊಳಕೆ ಹೊಡೆಯುತ್ತಿತ್ತು. ಆದರೆ, ಮೃಗಶಿರ ಮಳೆ ಆರಂಭವಾಗಿ ಐದು ದಿನಗಳು ಕಳೆದರೂ ಒಂದು ಹನಿಯೂ ಮಳೆಯಾಗಿಲ್ಲ. ಮುಂದಾದರೂ ದೇವರು ಮಳೆ ಕೊಡ್ತಾನೋ, ಇಲ್ಲವೋ ಗೊತ್ತಿಲ್ಲ.
•
ಬಸಪ್ಪ ರಾಮಪ್ಪ ಶಿಗ್ಲಿ,
ಸಂಭಾಪುರ ರೈತ.