ಗದಗ: ಎಂಬಿಬಿಎಸ್ ಅಂತಿಮ ಪರೀಕ್ಷೆಯಲ್ಲಿ ಇಲ್ಲಿನ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶೇ.99.17ರಷ್ಟು ಫಲಿತಾಂಶ ಪಡೆದಿದೆ. ಹಲವು ಸಮಸ್ಯೆ, ಸವಾಲುಗಳ ಮಧ್ಯೆಯೂ ಮೊದಲ ಬ್ಯಾಚ್‌ನಲ್ಲೇ ಅತ್ಯುತ್ತಮ ಸಾಧನೆ ತೋರುವ ಮೂಲಕ ಜಿಮ್ಸ್ ಕಾಲೇಜು ಇತಿಹಾಸ ಸೃಷ್ಟಿಸಿದೆ.
2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಥಿಯೇರಿ ಹಾಗೂ ಜನವರಿ ಮೊದಲ ವಾರದಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಗಳು ನಡೆದಿವೆ. ಜಿಮ್ಸ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ 58 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 123 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜ.25ರಂದು ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 123 ವಿದ್ಯಾರ್ಥಿಗಳಲ್ಲಿ 121 ಮಂದಿ ತೇರ್ಗಡೆಯಾಗಿದ್ದಾರೆ. ಓರ್ವ ವಿದ್ಯಾರ್ಥಿನಿ ಡಿಸ್ಟಿಕ್ಷನ್, ಪ್ರಥಮ ಶ್ರೇಣಿ- 50 ಹಾಗೂ ದ್ವಿತೀಯ ಶ್ರೇಣಿಯಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಓರ್ವ ವಿದ್ಯಾರ್ಥಿನಿಯ ಫಲಿತಾಂಶ ಬಾಕಿ ಇದ್ದು, ಮತ್ತೂಬ್ಬರು ಅನುತ್ತೀರ್ಣರಾಗಿದ್ದಾರೆ.
ಮೊದಲ ಹೆಜ್ಜೆಯಲ್ಲೇ ಸೆಂಚುರಿ: 2015-16ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭಗೊಂಡಿರುವ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮೊದಲ ಬ್ಯಾಚ್‌ನಲ್ಲೇ ಸೆಂಚುರಿ ಬಾರಿಸಿದೆ. 2015-16ರ ನೀಟ್ ಪರೀಕ್ಷೆಯಲ್ಲಿ ಕಡಿಮೆ ರ್‍ಯಾಂಕ್ ಪಡೆದವರು, ಉತ್ತಮ ಕಾಲೇಜು ಸಿಗದೇ ಹಾಗೂ ಯಾವುದೋ ಅನಿವಾರ್ಯ ಎಂಬಂತೆ ಅನೇಕ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದಲೇ ಜಿಮ್ಸ್ ಆಯ್ಕೆ ಮಾಡಿಕೊಂಡಿದ್ದರು.
ಆದರೆ, ಇಲ್ಲಿನ ಪ್ರಶಾಂತವಾದ ಪರಿಸರ ಹಾಗೂ ಜಿಮ್ಸ್ ಕಾಲೇಜಿಗೆ ಹೊಂದಿಕೊಂಡಿರುವ 350 ಹಾಸಿಗೆಗಳ ಸರಕಾರಿ ಜಿಲ್ಲಾಸ್ಪತ್ರೆ ಮತ್ತಿತರೆ ಸೌಕರ್ಯಗಳು ಇಲ್ಲಿನ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಿದೆ. ಜೊತೆಗೆ ಜಿಮ್ಸ್ ಹೊಸದಾಗಿ ಆರಂಭಗೊಂಡಿದ್ದರಿಂದ ಬೋಧಕರು ಕೂಡಾ ಹೆಚ್ಚಿನ ಆಸಕ್ತಿ ವಹಿಸಿದ್ದರು. ಮೂರು ಮತ್ತು ನಾಲ್ಕನೇ ವರ್ಷದ ಎಂಬಿಬಿಎಸ್ ಪದವಿ ತರಗತಿಗಳ ಜೊತೆಗೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ಈ ಮೂಲಕ ಕಲಿಕೆಯಲ್ಲಿ ಅಲ್ಪಸ್ವಲ್ಪ ಹಿಂದುಳಿದ ವಿದ್ಯಾರ್ಥಿಗಳನ್ನೂ ಸುಧಾರಿಸಲು ಪ್ರಯತ್ನಿಸಿದರು. ಅದರ ಫಲವಾಗಿ ಈ ಬಾರಿ ಫಲಿತಾಂಶದಲ್ಲಿ ಎಲ್ಲ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಗುಣಾತ್ಮಕ ಕಲಿಕೆಗೆ ಒತ್ತು: ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ಒಂದು ವರ್ಷದಿಂದ ದಿನದ 24 ಗಂಟೆಯೂ ಡಿಜಿಟಲ್ ಗ್ರಂಥಾಲಯ ಹಾಗೂ ವಿವಿಧ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ರಾಜೀವಗಾಂಧಿ ವಿವಿಗೆ ನಿಗದಿತ ಶುಲ್ಕ ಕಟ್ಟಿ ಕಾಲೇಜಿನ ಗ್ರಂಥಾಲಯಕ್ಕೆ ಹೆಲಿಟನ್ ಸೇವೆ ಕಲ್ಪಿಸಲಾಗಿದೆ. ಇದರಿಂದ ದೇಶ-ವಿದೇಶಗಳ ಲೇಖಕರು ಬರೆದ ವೈದ್ಯಕೀಯ ಪುಸ್ತಕಗಳನ್ನು ಓದಲು ಹಾಗೂ ಡೌನ್‌ಲೋಡ್ ಮಾಡಿಕೊಳ್ಳಲು ಹಾಗೂ ಉಚಿತ ಪ್ರಿಂಟ್ ಪಡೆಯಲು ಅನುಕೂಲವಾಗಿದೆ. ಇದು ವಿದ್ಯಾರ್ಥಿಗಳ ಓದಿನಲ್ಲಿ ಗುಣಾತ್ಮಕ ಬದಲಾವಣೆಗೆ ಕಾರಣವಾಯಿತು. ಜೊತೆಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ನೇರವಾಗಿ ರೋಗಿಗಳನ್ನು ಪರೀಕ್ಷಿಸುವ, ರೋಗಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಅನುಕೂಲವಾಗಿದೆ. ಕ್ಲಿನಿಕಲ್ ಸೇವೆಯ ಅನುಭವದಿಂದಲೂ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಕಾಲೇಜಿನ ವಿದ್ಯಾರ್ಥಿಗಳಾದ ಭವ್ಯಶ್ರೀ, ಶಿಲ್ಪಾ ಈಸ್ವರನ್.
ಒಟ್ಟಾರೆ, ಜಿಮ್ಸ್ ಕಾಲೇಜಿನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಮೂಲಕ ಗದುಗಿನ ಕೀರ್ತಿ ಹೆಚ್ಚಿಸಿದ್ದಾರೆ. ಕಾಲೇಜು ಆಯ್ಕೆ ಸಂದರ್ಭದಲ್ಲಿ ಹಿಂದುಳಿದ ಜಿಲ್ಲೆ ಎಂದು ಮೂಗು ಮುರಿಯುವವರಿಗೆ ಈ ಬಾರಿಯ ಎಂಬಿಬಿಎಸ್ ಫಲಿತಾಂಶ ಉತ್ತರಿಸಿದೆ.
ರಾಜೀವಗಾಂಧಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಎಂಬಿಬಿಎಸ್ ವಾರ್ಷಿಕ ಪರೀಕ್ಷೆಯಲ್ಲಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶೇ.99.17ರಷ್ಟು ಫಲಿತಾಂಶ ಪಡೆದು, ಅತ್ಯತ್ತಮ ಸಾಧನೆ ತೋರಿದೆ. ರಾಜ್ಯದ ವೈದ್ಯಕೀಯ ಮಹಾವಿದ್ಯಾಲಯಗಳ ಎಂಬಿಬಿಎಸ್ ಪರೀಕ್ಷಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಹದ್ದಾಗಿದೆ. ಕಾಲೇಜಿನ ಈ ಸಾಧನೆಗೆ ಸರಕಾರದ ಪ್ರೋತ್ಸಾಹವೇ ಕಾರಣ.
ಡಾ| ಪಿ.ಎಸ್. ಭೂಸರೆಡ್ಡಿ
ಜಿಮ್ಸ್ ನಿರ್ದೇಶಕ
ವೀರೇಂದ್ರ ನಾಗಲದಿನ್ನಿ