Advertisement

ಅಂಗವೈಕಲ್ಯ ಮೆಟ್ಟಿ ನಿಂತು ಮುಖ್ಯವಾಹಿನಿಗೆ ಬನ್ನಿ

10:09 AM Jan 14, 2019 | Team Udayavani |

ಗದಗ: ಅಂಗವಿಕಲರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಹೇಳಿದರು. ನಗರದ ವಿವೇಕಾನಂದ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಜಿ.ಪಂ., ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಲಿಮ್ಕೋ ಇವರ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ವಿಶೇಷ ಆಡಿಪ್‌ ಮತ್ತು ಆರ್‌.ವೈ. ಯೋಜನೆಯಡಿ ವಿಕಲಚೇತನರಿಗೆ ಹಾಗೂ ಬಿಪಿಎಲ್‌ ಹೊಂದಿದ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಡಿ ವಿಕಲಚೇತನರು ಹಾಗೂ ಬಿಪಿಎಲ್‌ ಕಾರ್ಡ್‌ ಹೊಂದಿರುವ ಹಿರಿಯ ನಾಗರಿಕರಿಗೆ ಉಚಿತ ಸಾಧನೆ ಸಲಕರಣೆ ವಿತರಿಸಲಾಗುತ್ತಿದೆ ಎಂದರು. ಜಿಪಂ ಸಿಇಒ ಮಂಜುನಾಥ ಚವ್ಹಾಣ ಮಾತನಾಡಿ, ಯೋಜನೆಗಳನ್ನು ಪಾದರರ್ಶಕವಾಗಿ ಅನುಷ್ಠಾನಗೊಳಿಸಿದ್ದೇವೆ. ಆದರೂ ಒಂದಿಲ್ಲೊಂದು ರೂಪದಲ್ಲಿ ಅಲ್ಲಲ್ಲಿ ಅನರ್ಹರು ಆಯ್ಕೆಯಾಗಿರುತ್ತಾರೆ. ಸರಕಾರದ ಯೋಜನೆಗಳನ್ನು ಸಮಪರ್ಕವಾಗಿ ನೈಜ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳೂ ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಲಿಮ್ಕೋದ ಪ್ರತಿನಿಧಿ ಅಭಯ ಪ್ರತಾಪ ಸಿಂಗ್‌ ಮಾತನಾಡಿ, ಕೇಂದ್ರ ಸರ್ಕಾರದ ವಿಶೇಷ ಆಡಿಪ್‌ ಮತ್ತು ಆರ್‌.ವಿ.ವೈ. ಯೋಜನೆಯಡಿ ಜಿಲ್ಲೆಯಲ್ಲಿ ನಡೆದ ಸಮೀಕ್ಷೆಯಲ್ಲಿ 436 ವಿಕಲಚೇತನರು ಹಾಗೂ ಬಿಪಿಎಲ್‌ ಪಡಿತರ ಹೊಂದಿದ ಹಿರಿಯ ನಾಗರಿಕ ಫಲಾನುಭವಿಗಳನ್ನಾಗಿ ಗುರುತಿಸಲಾಗಿತ್ತು. ಅವರಿಗೆ 28 ಲಕ್ಷ ರೂ. ವೆಚ್ಚದಡಿ ತ್ರಿಚಕ್ರ ಸೈಕಲ್‌, ವೀಲ್‌ ಚೇರ್‌, ಕ್ರಚಸ್‌ ಆಕ್ಷಿಲರಿ, ಬ್ರೈಲ್‌ ಕಿಟ್, ಎಂಎಸ್‌ಐಇಡಿ ಕಿಟ್ಸ್‌, ಹೀಯರಿಂಗ್‌ ಏಡ್‌ ಮಶಿನ್‌, ಸಿಪಿ ಚೇರ್ಸ್‌ ಸೇರಿದಂತೆ ಮತ್ತಿತರೆ ಸಾಧನ ಸಲಕರಣೆ ವಿತರಿಸಲಾಯಿತು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಈರಪ್ಪ ನಾಡಗೌಡ್ರ, ಹನುಮಂತಪ್ಪ ಪೂಜಾರ, ತಾಪಂ ಅಧ್ಯಕ್ಷ ಮೋಹನ ದುರಗಣ್ಣವರ ಇದ್ದರು. ಶ್ರೀಧರ ಪೂಜಾರ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆಶು ನದಾಫ್‌ ವಂದಿಸಿದರು.

ಕೇಂದ್ರದ ಕಾರ್ಯಕ್ರಮಕ್ಕೆ ಸಂಸದರೇ ಗೈರು
ನಗರದ ಎಪಿಎಂಸಿ ಆವರಣದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆದ ವಿಕಲ ಚೇತನ‌ರು ಮತ್ತು ಹಿರಿಯ ನಾಗರಿಕರಿಗೆ ಸಾಧನ-ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಸಂಸದರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಸಮಾರಂಭ ಉದ್ಘಾಟಿಸಬೇಕಿದ್ದ ಬಿಜೆಪಿಯ ಹಾವೇರಿ ಸಂಸದ ಶಿವಕುಮಾರ ಉದಾಸಿ ಮತ್ತು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕ ಎಚ್.ಕೆ. ಪಾಟೀಲ ಗೈರಾಗಿದ್ದರು. ಗಣ್ಯರ ಅನುಪಸ್ಥಿತಿಯಿಂದಾಗಿ ಜಿ.ಪಂ. ಉಪಾಧ್ಯಕ್ಷೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next