Advertisement

ಕೊಣ್ಣೂರು ಸಂತ್ರಸ್ತರಿಗೆ ಭವಿಷ್ಯದ್ದೇ ಚಿಂತೆ

04:16 PM Aug 24, 2019 | Naveen |

ಗದಗ: ನೆರೆ ಬಂತು-ಹೋಯ್ತು.. ಜನರು ಕೊಟ್ಟ ಪರಿಹಾರವೂ ಖರ್ಚಾಗ್ತಿದೆ.. ಮುಂದೇನು ಅನ್ನೋದೇ ತಿಳಿವಲ್ದರೀ..

Advertisement

ಇದು ಮಲಪ್ರಭಾ ರೌದ್ರಾವತಾರ ತಾಳಿದ ಪರಿಣಾಮ ಭೀಕರ ಪ್ರವಾಹದಿಂದ ನಲುಗಿದ ನೂರಾರು ನೆರೆ ಸಂತ್ರಸ್ತರ ಮಾತಾಗಿದೆ.

ಮಲಪ್ರಭಾ ನದಿ ಪಾತ್ರದಲ್ಲಿರುವ ಕೊಣ್ಣೂರು, ವಾಸನ ಹಾಗೂ ಬೂದಿಹಾಳ ಸೇರಿದಂತೆ ಸುಮಾರು 8 ಗ್ರಾಮಗಳು ಅಕ್ಷರಶಃ ಪ್ರವಾಹಕ್ಕೆ ನಲುಗಿ ಹೋಗಿವೆ. ಈ ಪೈಕಿ ಕೊಣ್ಣೂರು ಗ್ರಾ.ಪಂ. ವ್ಯಾಪ್ತಿಯ ಕೊಣ್ಣೂರ ಹಾಗೂ ಬೂದಿಹಾಳ ಗ್ರಾಮಗಳು ಇಡೀ ಇತಿಹಾಸದಲ್ಲೇ ಕಂಡು ಕೇಳರಿಯದಂತ ಪ್ರವಾಹದ ಅಲೆಗಳಿಗೆ ಬಹುತೇಕ ಮನೆಗಳು ಕೊಚ್ಚಿ ಹೋಗಿದ್ದರೆ, ಕೃಷಿ ಭೂಮಿಯಲ್ಲಿ ಬೆಳೆಗಳು ನಾಮಾವಶೇಷ ಇಲ್ಲದಂತಾಗಿದೆ.

ಕೊಣ್ಣೂರು ಗ್ರಾಮದಲ್ಲಿ ಸುಮಾರು 9900 ಜನಸಂಖ್ಯೆಯಿದ್ದು, 3,500 ಮನೆಗಳಿವೆ. ಆ. 8ರಂದು ಮಲಪ್ರಭೆ ನದಿ ಪಾತ್ರದಲ್ಲಿ ಉಂಟಾದ ಸುನಾಮಿಯಂತ ಅಲೆಗಳಿಗೆ ಕೊಣ್ಣೂರು ಗ್ರಾಮದ 150ರಿಂದ 200 ಮನೆಗಳು ನೆಲಕಚ್ಚಿವೆ. ನೂರಾರು ಕುಟುಂಬಗಳನ್ನು ಬೀದಿಗೆ ಬಂದಿವೆ.

ಪ್ರವಾಹದಿಂದ ಪ್ರಾಣಾಪಾಯವನ್ನು ತಪ್ಪಿಸಿಕೊಂಡಿರುವ ನೆರೆ ಸಂತ್ರಸ್ತರು ಇಲ್ಲಿನ ಕೊಣ್ಣೂರು ಎಪಿಎಂಸಿ ಯಾರ್ಡ್‌ ಆವರಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಮನೆಯಿಂದ ತಂದಿರುವ ತಾಟಪಾಲ್, ಸಿಮೆಂಟ್ ಹಾಗೂ ಗೊಬ್ಬರದ ಚೀಲಗಳನ್ನು ಜೋಡಿಸಿ ಹೊಲಿದುಕೊಂಡು ಟೆಂಟ್‌ಗಳನ್ನು ನಿರ್ಮಿಸಿಕೊಂಡು ಆಶ್ರಯ ಕಂಡುಕೊಂಡಿದ್ದಾರೆ. ಎಪಿಎಂಸಿಯಲ್ಲಿರುವ ಪರಿಹಾರ ಕೇಂದ್ರದಲ್ಲಿ ತೊಟ್ಟೆತುಂಬಿಸಿಕೊಳ್ಳುತ್ತಿರುವ ಸಂತ್ರಸ್ತರಿಗೆ ದಿನವಿಡೀ ಮುಂದೇನು ಎಂಬುದೇ ದೊಡ್ಡ ಸವಾಲಾಗಿ ಕಾಡುತ್ತಿದೆ.

Advertisement

ಗ್ರಾಮ ಮುಳುಗಡೆಯಾಗಿ ಪ್ರವಾಹದ ನೀರಿನೊಂದಿಗೆ ಮನೆಯಲ್ಲಿದ್ದ ಕಾಳು- ಕಡಿ ಬರಿದಾಗಿದೆ. ನೆರೆ ಹೋಗುವಾಗ ನೂರಾರು ಮನೆಗಳನ್ನು ನೆಲಕ್ಕುರುಳಿಸಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.

ಸ್ಥಳಾಂತರಕ್ಕೆ ಒಮ್ಮತದ ಕೊರತೆ: ಕೊಣ್ಣೂರು ಗ್ರಾಮ ಮಲಪ್ರಭಾ ಪ್ರವಾಹಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2007, 2009ರಲ್ಲಿ ಗ್ರಾಮಸ್ಥರಿಗೆ ಪ್ರವಾಹದ ಕಹಿ ಅನುಭವವಿದೆ. ಆಗ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ. ಆದರೂ, ಗ್ರಾಮ ಸ್ಥಳಾಂತರಿಸಬೇಕು. ನವ ಗ್ರಾಮವನ್ನಾಗಿಸಲು ಸರಕಾರ ಈ ಹಿಂದೆ ನಡೆಸಿದ ಪ್ರಯತ್ನಗಳು ಫಲಿಸಿಲ್ಲ. ಹೀಗಾಗಿ ನದಿ ನೀರಿನ ಪ್ರಮಾಣ ಇಳಿಯುತ್ತಿದ್ದಂತೆ ಮತ್ತೆ ತಮ್ಮ ಗೂಡು ಸೇರಿಕೊಳ್ಳುತ್ತಿದ್ದರು. ಆದರೆ, ನವಿಲುತೀರ್ಥ ಜಲಾಶಯದಿಂದ 1.10 ಲಕ್ಷ ಕ್ಯೂಸೆಕ್‌ ನೀರು ಹರಿಸಿದ್ದರಿಂದ ಅಕ್ಷರಶಃ ಕೊಣ್ಣೂರು ಗ್ರಾಮ ಜಲ ದಿಗ್ಬಂಧನಕ್ಕೆ ಸಿಲುಕಿತ್ತು. ಆ. 8ರಂದು ಬೆಳಗ್ಗೆ ಮನೆಯ ಬಾಗಿಲಿಗೇ ನುಗ್ಗಿದ್ದ ನೀರು, ಸಂಜೆ ವೇಳೆಗೆ ಒಂದು ಆಳೆತ್ತರಕ್ಕೆ ಬಂದು ತಲುಪಿತ್ತು. ಮೂರು ದಿನಗಳು ಕಾಲ ಗ್ರಾಮ ನೀರಿನಲ್ಲೇ ಮುಳುಗಿದ್ದರಿಂದ ನೂರಾರು ಮನೆಗಳು ನೆಲಕ್ಕುರುಳಿವೆ. ಹಲವು ಮನೆಗಳು ಮುಟ್ಟಿದರೆ ಬೀಳುವ ಸ್ಥಿತಿಯಲ್ಲಿವೆ. ಇವತ್ತಲ್ಲಾ ನಾಳೆ ಮತ್ತೆ ಪ್ರವಾಹ ಬಾರದೇ ಇರದು. ಹೀಗಾಗಿ ತಮೆಗೆ ಸುರಕ್ಷಿತ ಪ್ರದೇಶದಲ್ಲಿ ಶಾಶ್ವತ ಸೂರು ಕಲ್ಪಿಸಬೇಕು ಎಂಬುದು ನೆರೆ ಸಂತ್ರಸ್ತರ ಒತ್ತಾಯ.

ಆದರೆ, ಗ್ರಾಮದ ಮಧ್ಯೆ ಭಾಗದಲ್ಲಿರುವ ಹಾಗೂ ಗಟ್ಟಿಮುಟ್ಟಾದ ಮನೆಗಳು ಪ್ರವಾಹಕ್ಕೆ ಅಲುಗಾಡಿಲ್ಲ. ಹೀಗಾಗಿ ಪುನರ್ವಸತಿ ಮಾತಿಗೆ ಸ್ಥಿತಿವಂತರ ಬೆಂಬಲ ದೊರಕುತ್ತಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಸ್ಥಳಾಂತರಕ್ಕೆ ತಲೆದೂಗಿದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ ಅವರದ್ದು. ಸ್ಥಳಾಂತರದ ಬಗ್ಗೆ ಸಾರ್ವಜನಿಕರ ಮಧ್ಯೆಯೇ ಚರ್ಚೆಗಳು ನಡೆಯುತ್ತಿವೆಯೇ ಹೊರತು ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next