Advertisement

Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ

05:58 PM Nov 29, 2023 | Team Udayavani |

ಗದಗ: ಹುಟ್ಟು ಬಿಟ್ಟು ಸಾವಿಲ್ಲ, ಸಾವು ಬಿಟ್ಟು ಹುಟ್ಟಿಲ್ಲ. ಹುಟ್ಟು-ಸಾವಿನ ನಡುವಿನ ಹೋರಾಟವೇ ಜೀವನ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಶ್ರೀ ಹೇಳಿದರು.

Advertisement

ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಜರುಗಿದ ಆಧ್ಯಾತ್ಮಿಕ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಹ, ಮಾತು, ಮನಸ್ಸನ್ನು ಸರಿಯಾಗಿ ಬಳಸಿಕೊಳ್ಳುವುದೇ ಜೀವನ. ನಮ್ಮಲ್ಲಿರುವ ಪ್ರಜ್ಞೆಯಿಂದ ಉತ್ತಮ ಕಾರ್ಯಗಳನ್ನು ಮಾಡುವುದರಿಂದ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ನಾವು ಹುಟ್ಟಿನಿಂದ ಸಾವಿನವರೆಗೆ ನಡೆಸುವ ಪಾಪ-ಪುಣ್ಯಗಳ ಕರ್ಮದ ಫಲಗಳು ನಮ್ಮ ಜೀವನವನ್ನು ಮುನ್ನಡೆಸುತ್ತವೆ. ಆದ್ದರಿಂದ ನಮ್ಮ ಕಾರ್ಯಗಳು ಪುಣ್ಯದ ಕೆಲಸಗಳಾಗಿರಬೇಕು. ಅದರಿಂದ ಮಾತ್ರ ಜೀವನವು ಪುಣ್ಯಪ್ರಾಪ್ತವಾಗುತ್ತದೆ ಎಂದು ಹೇಳಿದರು.

ಮಾನವ ತಾನು ನನ್ನದು ಎಂದು ಕೊಂಡಿರುವ ನಗದು, ಹೊಲ, ಮನೆ, ಅಧಿಕಾರ, ಸಂಪತ್ತು ಸೇರಿ ಎಲ್ಲವನ್ನೂ ಸಾವು ಕಸಿದುಕೊಂಡು ಹೋಗುತ್ತದೆ. ಆದ್ದರಿಂದ ಸಾವು ನಮ್ಮಿಂದ ಕಸಿದುಕೊಳ್ಳಲಾರದ ಸಂಪತ್ತಾಗಿರುವ ಪುಣ್ಯವನ್ನು ನಾವು ಗಳಿಸಬೇಕಿದೆ. ಪುಣ್ಯವನ್ನು ಸಂಪಾದಿಸುವುದು ನಮ್ಮ ಜೀವನದ ಗುರಿಯಾಗಬೇಕು. ಪುಣ್ಯವನ್ನು ಮಾತ್ರ ಸಾವಿನಿಂದ ಕಸಿದುಕೊಳ್ಳಲಾಗದು ಎಂದರು. ಕೊಟ್ಟರೆ ಖಾಲಿಯಾಗಬಾರದು, ಮನೆಯಲ್ಲಿಟ್ಟರೆ ಹಾಳಾಗಿರಬಾರದು, ಕಟ್ಟಿದ ಗಂಟು ಅಂಗಳದಲ್ಲಿಟ್ಟರೂ ಮುಟ್ಟಲು ಬಂದಿರಬಾರದು. ಅದುವೇ ಪುಣ್ಯದ ಕಾರ್ಯವಾಗಿದೆ. ಮನುಷ್ಯ ಪುಣ್ಯದ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.

ನೀರು, ಧೂಪ-ದೀಪಗಳಿಂದ, ಬಿಲ್ವಪತ್ರೆ- ಹೂವುಗಳಿಂದ ಮಾಡುವುದು ಪೂಜೆಯಲ್ಲ. ಇನ್ನೊಬ್ಬರ ವಸ್ತುಗಳನ್ನು ಬಳಸದೇ, ಭಕ್ತಿ-ಭಾವದಿಂದ, ಸಮಚಿತ್ತದಿಂದ ಮಾಡುವುದೇ ಪೂಜೆ. ಶರಣರು, ಅನುಭಾವಿಗಳು ಹಾಗೂ ಸಂತರು ಶರಣು-ಶರಣಾರ್ಥಿ ಎನ್ನುತ್ತಲೇ ಕಲ್ಯಾಣ ಕಟ್ಟಿದರು. ಆದ್ದರಿಂದ ಮನುಷ್ಯರು ಮತ್ತೂಬ್ಬರ ಬಗ್ಗೆ ನಿಂದನೆ ಮಾಡಲಾರದೇ, ನಮ್ಮ ಕಾಯಕವನ್ನು ಮಾಡುತ್ತ, ಪರಸ್ಪರರಿಗೆ ಗೌರವ ಕೊಡುತ್ತ ಜೀವನ ಸಾಗಿಸಿದರೆ ಬಾಳು ಬಂಗಾರವಾಗುತ್ತದೆ ಎಂದು ಹೇಳಿದರು.

ಚಿಕೇನಕೊಪ್ಪ ಶರಣರ ಮಠದ ಶಿವಶಾಂತವೀರ ಶರಣರು, ಆಧ್ಯಾತ್ಮ ಪ್ರವಚನ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಆರ್‌. ಪಾಟೀಲ, ಚಂದ್ರು ಬಾಳಿಹಳ್ಳಿಮಠ, ಗುರಣ್ಣ ಬಳಗಾನೂರ, ಶೇಖಣ್ಣ ಗದ್ದಿಕೇರಿ, ಬಾಲಚಂದ್ರ ಭರಮಗೌಡ್ರ,  ಧೀರಜ್‌ ಜೈನ್‌, ಮುರುಘರಾಜೇಂದ್ರ ಬಡ್ನಿ, ರಾಘವೇಂದ್ರ ಕಾಲವಾಡ, ಅಶೋಕ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next