Advertisement

ಮೇವಿಗಾಗಿ ರೈತರ ಪರದಾಟ

01:09 PM Aug 22, 2019 | Team Udayavani |

ವೀರೇಂದ್ರ ನಾಗಲದಿನ್ನಿ
ಗದಗ
: ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನ ಉಭಯ ತಾಲೂಕಿನಲ್ಲಿ ಉಂಟಾಗಿದ್ದ ಪ್ರವಾಹದ ರಭಸಕ್ಕೆ ಮನೆ, ಮಠ ಕೊಚ್ಚಿ ಹೋಗಿದ್ದು, ಜನರ ಬದುಕು ಬೀದಿಗೆ ತಳ್ಳಿದೆ. ಅದರೊಂದಿಗೆ ಅಪಾರ ಪ್ರಮಾಣದ ಕೃಷಿ ಬೆಳೆಗಳು ಹಾನಿಗೀಡಾಗಿದೆ. ಪರಿಣಾಮ ಜಾನುವಾರುಗಳಿಗೆ ಮೇವು ಪೂರೈಸಲಾಗದೇ ಸಂತೆಗೆ ಸಾಗಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

Advertisement

ಮಲಪ್ರಭೆ ನದಿ ಹಾಗೂ ಬೆಣ್ಣಿಹಳ್ಳ ಉಕ್ಕಿ ಹರಿದಿದ್ದರಿಂದ ನರಗುಂದ 8 ಮತ್ತು ರೋಣ ತಾಲೂಕಿನ 16 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಈ ಭಾಗದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಅಲ್ಪಸ್ವಲ್ಪ ಬೆಳೆದಿದ್ದ ಹೆಸರು 3414 ಹೆಕ್ಟೇರ್‌, ಶೇಂಗಾ 485, ಮುಸುಕಿನ ಜೋಳ 4952, ಹತ್ತಿ 1219 ಹಾಗೂ ಸೂರ್ಯಕಾಂತಿ ಸೇರಿದಂತೆ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಷ್ಟು ಬೆಳೆಗಳೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ ಎಂದು ಅಂದಾಜಿಸಲಾಗಿದೆ.

ಈ ಪೈಕಿ ಬಸರಕೊಡ, ಅಮರಗೋಳ, ಕುರುವಿನಕೊಪ್ಪ, ಹೊಳೆಹಡಗಲಿ, ಮೆಣಸಗಿ ಗ್ರಾಮಗಳಲ್ಲಿ ಮೇವಿನ ಸಮಸ್ಯೆ ಗಂಭೀರವಾಗಿದೆ. ಮೇವು ತುಂಬಿರುವ ಲಾರಿ, ಟ್ರ್ಯಾಕ್ಟರ್‌ಗಳು ಕಣ್ಣಿಗೆ ಬೀಳುತ್ತಿದ್ದಂತೆ ಜನರು ಕೈಚಾಚಿ ಕೊಂಡೇ ಓಡೋಡಿ ಬರುತ್ತಾರೆ. ದಾನಿಗಳು ಲಾರಿಯಿಂದ ಮೇವು ಇಳಿಸುವ ಮುನ್ನವೇ ಮೇವಿನ ಲಾರಿಗೆ ಮುತ್ತಿಕೊಳ್ಳುವ ಜನ, ನಾಮುಂದು ತಾಮುಂದು ಎಂಬಂತೆ ಹೊತ್ತೂಯ್ಯುತ್ತಿದ್ದಾರೆ. ಇದು ಈ ಭಾಗದಲ್ಲಿನ ಮೇವಿನ ಸಮಸ್ಯೆಗೆ ಹಿಡಿದ ಕನ್ನಡಿಯಾಗಿದೆ.

ಇನ್ನುಳಿದ ನೆರೆ ಪೀಡಿತ ಗ್ರಾಮಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸರಕಾರದಿಂದ ಕೆಲವೆಡೆ ಮೇವು ವಿತರಿಸಲಾಗುತ್ತಿದೆಯಾದರೂ ಅದು ಸಾಲುತ್ತಿಲ್ಲ ಎಂಬುದು ರೈತರ ಅಳಲು.

ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಐದೂ ತಾಲೂಕಿನಲ್ಲಿ ತಲಾವೊಂದರಂತೆ ಜಿಲ್ಲಾಡಳಿತ ಗೋಶಾಲೆಗಳನ್ನು ಆರಂಭಿಸಿದೆ. ಆದರೆ, ಗೋಶಾಲೆಗಳು ಗ್ರಾಮದಿಂದ ದೂರವಿರುವ ಕಾರಣಕ್ಕೆ ರೈತರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪ್ರವಾಹ ಪೀಡಿತ ಪ್ರತೀ ಗ್ರಾಮದಲ್ಲೂ ಮೇವು ವಿತರಣಾ ಕೇಂದ್ರ ಆರಂಭಿಸಿ, ಅನುಕೂಲ ಕಲ್ಪಿಸಬೇಕು ಎಂಬುದು ರೈತರ ಒತ್ತಾಯ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೇವಿನ ಸಮಸ್ಯೆಯಾಗದಂತೆ ಅಗತ್ಯ ಪ್ರಮಾಣದಲ್ಲಿ ಮೇವು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 24 ಜಾನುವಾರು ಶಿಬಿರ ಗಳನ್ನು ಆರಂಭಿಸಲಾಗಿದ್ದು, 4,299 ಜಾನುವಾರುಗಳಿದ್ದು, 23.426 ಟನ್‌ ಮೇವು ಒದಗಿಸಲಾಗಿದೆ. ಅಗತ್ಯವಿರುವೆಡೆ ಮೇವು ಬ್ಯಾಂಕ್‌ ಸ್ಥಾಪನೆ ಮಾಡುತ್ತೇವೆ. ಸರಕಾರದ ರಿಯಾಯಿತಿ ದರದಲ್ಲಿ 2 ರೂ. ಕೆ.ಜಿ. ದರದಲ್ಲಿ ಮೇವು ಖರೀದಿಸಬಹುದು. ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಲಸಿಕೆ ಹಾಕಲಾಗುತ್ತಿದೆ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು.
ಡಾ| ಚನ್ನಕೇಶವಪಶು
ಸಂಗೋಪನಾ ಇಲಾಖೆ ಉಪನಿರ್ದೇಶಕ
ಜಾನುವಾರುಗಳ ಅನುಕೂಲಕ್ಕಾಗಿ ಸಾಕಷ್ಟು ಮೇವು ಸಂಗ್ರಹಿಸಿದ್ದೇವು. ಆದರೆ, ನೆರೆ ಬಂದು ಎಲ್ಲವೂ ಹಾನಿಯಾಗಿದೆ. ನೆರೆಯಿಂದ ನಾವು ಚೇತರಿಸಿಕೊಳ್ಳುವುದೇ ಕಷ್ಟ. ಇಂಥ ಸಂದರ್ಭದಲ್ಲಿ ಮೇವು ಖರೀದಿ ಆಗದ ಕೆಲಸ. ಹೀಗಾಗಿ ಮೂಕ ಪ್ರಾಣಿಗಳ ಹೊಟ್ಟೆ ತುಂಬಿಸಲು ಸರಕಾರ, ದಾನಿಗಳು ನೆರವಾಗಬೇಕು.
ಶಿವಾನಂದ ಕಟ್ಟಣ್ಣವರ,
 ಮೆಣಸಗಿ ರೈತ
ನೆರೆ ಪ್ರದೇಶದಲ್ಲಿ ಮೇವಿನ ಕೊರತೆ
ಸತತ ಬರ ಹಾಗೂ ಮಳೆ ಕೊರತೆಯಿಂದ ಈಗಾಗಲೇ ಜಿಲ್ಲೆಯ ರೈತರಿಗೆ ಮೇವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ರೈತರು ಸಾಲಸೋಲ ಮಾಡಿ ರೈತರು ಮೇವು ಖರೀದಿಸಿದ್ದರು. ಅದು ಕೂಡಾ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ರೈತರನ್ನು ಚಿಂತೆಗೀಡುಮಾಡಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಜನರು ತಮ್ಮ ಹೊಟ್ಟೆ ತುಂಬಿಸಿಕೊಂಡು ಸ್ವಂತಕ್ಕೆ ಸೂರು ಕಂಡುಕೊಳ್ಳೂವುದೇ ಸವಾಲಾಗಿದೆ. ಇನ್ನು, ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟಸಾಧ್ಯ. ಹೀಗಾಗಿ ಅನಿವಾರ್ಯವಾಗಿ ಜಾನುವಾರುಗಳನ್ನು ಸಂತೆಗೆ ಸಾಗಿಸುವಂತಾಗಿದೆ ಎನ್ನುತ್ತಾರೆ ರೋಣ ತಾಲೂಕಿನ ಹೊಳೆಹಡಗಲಿ ಗ್ರಾಮದ ರೈತ ಯಲ್ಲಪ್ಪ.
ಮೇವಿಗಾಗಿ ರೈತರ ಪರದಾಟ
ನೆರೆ ಪೀಡಿತ ಪ್ರದೇಶಗಳ ಜನರ ಅನುಕೂಲಕ್ಕಾಗಿ ಈಗಾಗಲೇ ರಾಜ್ಯದ ವಿವಿಧೆಡೆಯಿಂದ ದಾನಿಗಳು ಬಟ್ಟೆ, ಆಹಾರ ಪದಾರ್ಥಗಳು ಹಾಗೂ ಅಡುಗೆ ಸಾಮಗ್ರಿ ಒದಗಿಸುತ್ತಿದ್ದಾರೆ. ಇನ್ನೂ ಕೆಲವರು ಜಾನುವಾರುಗಳ ಅನುಕೂಲಕ್ಕಾಗಿ ಮೇವು ಒದಗಿಸುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next