Advertisement

ಬಾನಾಡಿಗಳಿಗೆ ಬಯಲು ಬಹಿರ್ದೆಸೆ ಕಂಟಕ!

03:58 PM Dec 23, 2018 | |

ಗದಗ/ಲಕ್ಷ್ಮೇಶ್ವರ: ಆಹಾರಕ್ಕಾಗಿ ಹಾರಿ ಬರುವ ಬಾನಾಡಿಗಳಿಗೆ ಜಿಲ್ಲೆಯ ಬಯಲು ಬಹಿರ್ದೆಸೆಯೇ ಕಂಟಕವಾಗಿ ಪರಿಣಮಿಸಿದೆ. ಮಾಗಡಿ ಕೆರೆಯಲ್ಲಿ ವಿದೇಶಿ ಹಕ್ಕಿಗಳ ಸಾವಿಗೆ ಕಾರಣ ತಿಳಿಯಲು ಮರಣೋತ್ತರ, ಮಣ್ಣು, ನೀರಿನ ಪರೀಕ್ಷಾ ವರದಿ ಅಧಿಕಾರಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ.

Advertisement

ಚಳಿಗಾಲದಲ್ಲಿ ಆಹಾರ ಹಾಗೂ ಬೆಚ್ಚನೆಯ ವಾತಾವರಣವನ್ನು ಅರಸಿ ದೇಶ-ವಿದೇಶಗಳ ಬಾನಾಡಿಗಳು ದಕ್ಷಿಣ ಭಾರತದತ್ತ ರೆಕ್ಕೆ ಬಿಚ್ಚುತ್ತವೆ. ಆ ಪೈಕಿ ಸುಮಾರು 16ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ಶಿಹರಟ್ಟಿ ತಾಲೂಕಿನ ಮಾಗಡಿ ಕೆರೆ ಪ್ರದೇಶದಲ್ಲಿ ತಿಂಗಳುಗಳ ಕಾಲ ಬೀಡುಬಿಡುತ್ತವೆ. ಆದರೆ, ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವಿದೇಶಿ ಹಕ್ಕಿಗಳ ಮರಣ ಮೃದಂಗ ಜೋರಾಗಿತ್ತು.

ಒಂದು ತಿಂಗಳ ಅಂತರದಲ್ಲಿ ಇಲಾಖೆಯ ಸಿಬ್ಬಂದಿಯೇ ಹೇಳುವಂತೆ ಕೆರೆ ಪ್ರದೇಶದಲ್ಲಿ ಸುಮಾರು 15ಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿವೆ. ಆದರೆ, ಆಹಾರ ಸೇವಿಸಲು ತೆರಳಿ ಜಮೀನು, ಇಲ್ಲವೇ ಮತ್ತೆಲ್ಲೋ ಸಾವನ್ನಪ್ಪಿದ ಹಕ್ಕಿಗಳ ಲೆಕ್ಕವಿಲ್ಲ. ಇನ್ನೂ ವಯೋಸಹಜ ಸಾವನ್ನೂ ಅಲ್ಲಗೆಳೆಯಲಾಗದು. ಆದರೆ, ಕೆರೆ ಪ್ರದೇಶದಲ್ಲಿ ಗ್ರಾಮಸ್ಥರು ಯಥೇಚ್ಛವಾಗಿ ಬಟ್ಟೆ ಒಗೆಯುತ್ತಾರೆ. ಪರಿಣಾಮ ಸಾಬೂನುನಿಂದ ಹೊರ ಹೊಮ್ಮುವ ರಾಸಾಯನಿಕ ಅಂಶ, ರೈತರು ಬೆಳೆಗಳಿಗೆ ಸಿಂಪರಣೆ ಮಾಡುವ ಕ್ರಿಮಿನಾಶಕ, ರಸಗೊಬ್ಬರಗಳ ಸೇವನೆಯೇ ಪಕ್ಷಿಗಳ ಸಾವಿಗೆ ಕಾರಣವಾಗಿಬರಹುದು ಎಂಬ ಮಾತುಗಳು ಪಕ್ಷಿ ಪ್ರಿಯರಿಂದ ಕೇಳಿ ಬಂದಿತ್ತು.

ಪಕ್ಷಿಗಳ ಮರಣೋತ್ತರ ಪರೀಕ್ಷೆ: ಆದರೂ, ಹಕ್ಕಿಗಳ ಸರಣಿ ಸಾವಿನ ಬಗ್ಗೆ ಸಂಶಯಪಟ್ಟಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಈ ಕುರಿತು ವೈಜ್ಞಾನಿಕ ಕಾರಣ ತಿಳಿಯಲು ಕೆರೆ ನೀರು, ಮಣ್ಣು ಹಾಗೂ ಮೃತ ಹಕ್ಕಿಯೊಂದರ ಅಂಗಾಂಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗಲಕೋಟೆಗೆ ಕಳುಹಿಸಲಾಗಿತ್ತು.

ಅಲ್ಲಿಂದ ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಡಿಸೀಸ್‌ ಡೈಯೋಗ್ನಾಸ್ಟಿಕ್‌ ಲ್ಯಾಬೋರೇಟರಿ ಇನ್ಸಟಿಟ್ಯೂಟ್‌ ಆಫ್‌ ಅನಿಮಲ್‌ ಹೆಲ್ತ್‌ ಆ್ಯಂಡ್‌ ವೆಟರನರಿ ಬಯೋಲಾಜಿಕಲ್ಸ್‌ ಡೈಯೋಗ್ನಾಸ್ಟಿಕ್‌ ಬ್ಯಾಕ್ಟೀರಿಯಾಲೋಜಿ ಆ್ಯಂಡ್‌ ಮೈಕ್ರಾಲೋಜಿ ವಿಭಾಗಕ್ಕೆ ರವಾನಿಸಲಾಗಿತ್ತು. ಸುಮಾರು ಒಂದು ವಾರಕ್ಕಿಂತ ಹೆಚ್ಚು ದಿನಗಳ ಕಾಲ ಕೂಲಂಕುಷವಾಗಿ ಅಧ್ಯಯನ ನಡೆಸಿದ ತಜ್ಞರು, ಕೆರೆ ಪ್ರದೇಶದಲ್ಲಿ ಮಲ ವಿಸರ್ಜನೆಯಾಗಿರುವುದೇ ಪಕ್ಷಿಗಳ ಸಾವಿಗೆ ಪ್ರಮುಖ ಕಾರಣ. ಅದರೊಂದಿಗೆ ಪೆಸ್ಟಿಸೈಡ್ಸ್‌ ಫುಡ್‌ ಸೇವನೆಯೂ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾಗಿ ಶಿರಹಟ್ಟಿ ವಲಯ ಅರಣ್ಯಾಧಿಕಾರಿ ಸತೀಶ್‌ ಪೂಜಾರಿ ಮಾಹಿತಿ ನೀಡಿದರು. ಗದಗ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ. ಆದರೆ, ವಿದೇಶಿ ಹಕ್ಕಿಗಳ ಸಾವಿಗೆ ಬಯಲು ಬರ್ಹಿದೆಸೆಯೇ ಕಾರಣ ಎಂಬುದು ವಿಪರ್ಯಾಸ.

Advertisement

ನಡೆದಿದೆ ಮರಣೋತ್ತರ ಪರೀಕ್ಷೆ
ವಿದೇಶಿ ಪಕ್ಷಿಗಳ ಅನುಮಾನಾಸ್ಪದ ಸಾವಿನ ನಿಖರ ಕಾರಣ ತಿಳಿಯಲು ಶಿರಹಟ್ಟಿ ವಲಯದ ಅರಣ್ಯಾಧಿಕಾರಿಗಳು ಮತ್ತು ಪಶು ವೈದ್ಯಕೀಯ ಇಲಾಖೆಯವರು ಸತ್ತ ಪಕ್ಷಿಯ ದೇಹದ ಒಂದಷ್ಟು ಭಾಗ ಮತ್ತು ಕೆರೆಯ ನೀರನ್ನು ಬೆಂಗಳೂರು( ಹೆಬ್ಟಾಳ) ಪ್ರಾಣಿ ಆರೋಗ್ಯ ಮತ್ತು ಪಶುರೋಗ ಪತ್ತೆ ಪ್ರಯೋಗಾಲಯಕ್ಕೆ ಡಿ. 7ರಂದು ಕಳುಹಿಸಿದ್ದರು. ಅದರನ್ವಯ ಡಿ. 12ರಂದು ಪ್ರಯೋಗಾಲಯದಿಂದ ಪಕ್ಷಿಯ ಸಾವಿಗೆ ‘ಇ-ಕೂಲಿ’ ಎಂಬ ಬ್ಯಾಕ್ಟೀರಿಯಾ ನೀರಿನಲ್ಲಿ ಸೇರ್ಪಡೆ ಆಗುತ್ತಿರುವುದರಿಂದ ಈ ನೀರನ್ನು ಕುಡಿದ ಪಕ್ಷಿಗಳು ಸಾವನ್ನಪ್ಪುತ್ತಿವೆ ಎಂದು ವರದಿಯಲ್ಲಿ ಬಹಿರಂಗವಾಗಿದೆ. ಕೆರೆಯ ಸುತ್ತಲು ಬಯಲು ಬಹಿರ್ದೆಸೆ ಮಾಡುವುದು ಮತ್ತು ಕೆರೆಯಲ್ಲಿಯೇ ಮಲ ಸ್ವಚ್ಛಗೊಳಿಸುವ ಕಾರ್ಯದಿಂದ ಇ-ಕೂಲಿ ಎಂಬ ಬ್ಯಾಕ್ಟೀರಿಯ ಉತ್ಪತ್ತಿಯಾಗುತ್ತಿದೆ. ನಿತ್ಯ ನಡೆಯುವ ಈ ಪ್ರಕ್ರಿಯೆಯಿಂದ ಬ್ಯಾಕ್ಟಿರಿಯಾಗಳು ಉಲ್ಬಣಗೊಳ್ಳುತ್ತಿದ್ದು, ಇದು ಪಕ್ಷಿಯ ಸಾವಿಗೆ ನಿಖರ ಕಾರಣ ಎಂದು ವರದಿ ಹೇಳುತ್ತಿದೆ ಎಂಬುದು ತಜ್ಞರ ವಿಶ್ಲೇಷಣೆ.

ಹಕ್ಕಿಗಳ ಸಾವಿಗೆ ಸಾಬೂನು ನೊರೆ, ಕ್ರಿಮಿನಾಶಕ ಇಲ್ಲವೇ ನಿಮೆಟೋಡ್ಸ್‌(ಮಾರಣಾಂತಿಕ ಕೀಟಾಣು)ಗಳ ಬಗ್ಗೆ ತಿಳಿಯಲು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದು ಪತ್ತೆಯಾಗಿಲ್ಲ. ಬಯಲು ಬಹಿರ್ದೆಸೆ ಕಾರಣವಾಗಿದ್ದು, ಕೆರೆ ಪ್ರದೇಶ ಹಾಗೂ ಕೆರೆ ಹರಿದು ಬರುವ ಜಲ ಮಾರ್ಗಗಳಲ್ಲಿ ಮಲ ವಿಸರ್ಜನೆ ಮಾಡದಂತ ಈಗಾಗಲೇ ಗ್ರಾಮ ಸಭೆ ಮೂಲಕ ಜನರಿಗೆ ತಿಳಿವಳಿಕೆ ನೀಡಲಾಗಿದೆ. ಕೆರೆ ಸುತ್ತಲೂ ಜನರು ಬಹಿರ್ದೆಸೆಗೆ ತೆರಳದಂತೆ ಬೆಳಗ್ಗೆ, ಸಂಜೆ ಅರಣ್ಯ ಸಿಬ್ಬಂದಿ ನಿಗಾವಹಿಸುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಕೆರೆ ಭಾಗದಲ್ಲಿ ಹಕ್ಕಿಗಳ ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಸತೀಶ್‌ ಪೂಜಾರಿ,
ಶಿರಹಟ್ಟಿ ಆರ್‌ಎಪ್‌ಒ

Advertisement

Udayavani is now on Telegram. Click here to join our channel and stay updated with the latest news.

Next