ಗದಗ: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವಿಗೀಡಾಗಿ, ಓರ್ವ ಗಾಯಗೊಂಡ ದುರ್ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ರೋಣದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಶನಿವಾರ ಸಂಜೆ ಮಹಾರಥೋತ್ಸವ ನಡೆಯಿತು. ಈ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯವಾಗಿವೆ. ಮೃತ ಭಕ್ತರು ರೋಣ ಮೂಲದ ನಿವಾಸಿಗಳು ಎನ್ನಲಾಗುತ್ತಿದೆ.
ಮಲ್ಲಪ್ಪ ಲಿಂಗನ ಗೌಡ್ರ(55) ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ. ಮುಖದ ಮೇಲೆ ರಥದ ಗಾಲಿ ಹರಿದಿರುವುದರಿಂದ ಮುಖ ನುಜ್ಜುಗುಜ್ಜಾಗಿ ವ್ಯಕ್ತಿಯ ಗುರುತು ಪತ್ತೆ ಸಿಗದಂತಾಗಿದೆ.
ಘಟನೆಗೆ ಕಾರಣ, ರಥ ಎಳೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿದೆ. ರಥಕ್ಕೆ ಎಸೆಯುವ ಬಾಳೆ ಹಣ್ಣು ಹಾಗೂ ಉತ್ತತ್ತಿ ಆಯ್ದುಕೊಳ್ಳುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ರಥದ ಗಾಲಿಗೆ ಸಿಲುಕಿದ್ದಾರೆ. ಓರ್ವನ ಮುಖ ಹಾಗೂ ಮತ್ತೋರ್ವನ ಮರ್ಮಾಂಗದ ಮೇಲೆ ಹರಿದು ಇಬ್ಬರು ಭಕ್ತರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಈ ವೀರಭದ್ರೇಶ್ವರನ ಜಾತ್ರೆಗೆ ರೋಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಲಕ್ಷಾಂತರ ಭಕ್ತ ಸಾಗರವೇ ಸೇರಿರುತ್ತೆ. ಈ ದುರ್ಘಟನೆ ನಂತರ ಜನರನ್ನು ಚದುರಿಸಲು ಪೊಲೀಸರು ಕೆಲಕಾಲ ಹರಸಾಹಸ ಪಡಬೇಕಾಯಿತು. ಇನ್ನೋರ್ವನ ಗುರುತು ಪತ್ತೆಗೆಗಾಗಿ ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.