ಗದಗ: ಆರು ಮಂದಿ ವಿದ್ಯಾರ್ಥಿಗಳ ಮಕ್ಕಳ ಕೂದಲು ಕಟ್ ಮಾಡಿದ್ದ ಕಂಪೂಟರ್ ಶಿಕ್ಷಕನಿಗೆ ಧರ್ಮದೇಟು ನೀಡಿದ ಘಟನೆ ನಗರದ ಬೆಟಗೇರಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಬಿನೋಯ್ ಎಂಬ ಶಿಕ್ಷಕ ಸ್ಕೂಲ್ ಮಕ್ಕಳ ಹೇರ್ ಕಟ್ ಮಾಡುವ ಮೂಲಕ ಉದ್ಧಟತನ ಮೆರೆದಿದ್ದ. ಕೂದಲು ಕಟ್ ಮಾಡುವ ವೇಳೆ 7ನೇ ತರಗತಿ ಆದಿತ್ಯ ಎಂಬ ವಿದ್ಯಾರ್ಥಿ ಹಣೆಗೆ ಕತ್ತರಿಯಿಂದ ಗಾಯವಾಗಿದೆ. ಕೂದಲು ಕಟ್ ಮಾಡಬೇಡಿ ಎಂದು ಬಾಲಕ ಗೋಗರೆದು ಒದ್ದಾಡಿದರೂ ಬಿಡದೆ ತುಂಡರಿಸಿದ್ದ. ಈ ವೇಳೆ ಹಣೆಗೆ ಗಾಯವಾಗಿದೆ. ವಿದ್ಯಾರ್ಥಿಗೆ ದೃಷ್ಟಿ ಕಡಿಮೆ ಇದೆ ನಂಜಾದರೆ ಏನು ಮಾಡುವುದು? ಏನಾದ್ರೂ ಆದರೆ ಹೇಗೆ ಎಂದು ಪಾಲಕರು ಕಿರಿಕ್ ಮಾಡಿದ್ದರು.
ನಾವು ಕಳೆದ 15 ದಿನಗಳ ಹಿಂದೆಯಷ್ಟೇ ಕಟಿಂಗ್ ಮಾಡಿಸಿದ್ದೇವೆ. ಕೂದಲು ಹೆಚ್ಚು ಬಂದಿರಲಿಲ್ಲ. ಆದರೂ ಶಿಕ್ಷಕ ಕಟ್ ಮಾಡುವ ಅವಶ್ಯಕತೆ ಏನಿತ್ತು? ಪಾಲಕರಿಗೆ ಹೇಳಬೇಕಿತ್ತು. ಏಕಾಏಕಿ ಕೂದಲು ಕಟ್ ಮಾಡಿರುವುದು ಯಾವ ಎಷ್ಟರ ಮಟ್ಟಿಗೆ ಸರಿ ಅಂತ ತಗಾದೆ ತೆಗೆದಿದ್ದರು. ಸ್ಥಳಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಸ್ಕೂಲ್ ಆವರಣದಲ್ಲಿ ಕೆಲಕಾಲ ಹೈಡ್ರಾಮಾ ನಡೆಯಿತು. ನಂತರ ಸ್ಥಳಕ್ಕೆ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್ ಬುರಡಿ ಆಗಮಿಸಿದರು.
ಮೊದಲು ಶಿಕ್ಷಕನಾದವರು ಚೆನ್ನಾಗಿರಬೇಕು. ಶಿಕ್ಷಕನಾದವನು ಹೆಬ್ಬುಲಿ ಕಟಿಂಗ್ ಮಾಡಿಸಿಕೊಂಡಿದ್ದಿ, ಮಕ್ಕಳಿಗೆ ಕಟಿಂಗ್ ಮಾಡಿಸಿಕೊಂಡು ಬಾ ಎನ್ನುವುದು ಯಾವ ನ್ಯಾಯ? ಮೊದಲು ನೀನು ಸರಿಯಾಗಿರು ಎಂದು ಕೂಡಿದ ಜನರು ಬಿಇಒ ಸಮ್ಮುಖದಲ್ಲೇ ಶಿಕ್ಷಕನಿಗೆ ಧರ್ಮದೇಟು ನೀಡಿದರು.
ಬಿನೋಯ್ ವಿರುದ್ದ ಕೇಸ್ ದಾಖಲಾಗಬೇಕು, ವೃತ್ತಿಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು. ನಂತರ ದುರ್ವರ್ತನೆ ತೋರಿದ ಶಿಕ್ಷಕನ ಬಗ್ಗೆ ಬಿಇಒ ಅವರು ವರದಿ ಪಡೆದುಕೊಂಡರು. ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಶಿಕ್ಷಕ ಬಿನೋಯ್ ನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡರು. ಈ ವೇಳೆ ಅನೇಕ ಪಾಲಕರು, ಸಂಘಟಕರು ಉಪಸ್ಥಿತರಿದ್ದರು.