ಗದಗ: ಕನ್ನಡದ ಕುಲ ಗುರುಗಳು, ಕೋಮು ಸೌಹಾರ್ದತೆಯ ಹರಿಕಾರರು, ತೃತೀಯ ಅಲ್ಲಮರೆಂದು ಖ್ಯಾತರಾಗಿರುವ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಅ. 14ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ ಹೇಳಿದರು.
ನಗರದಲ್ಲಿ ಅ.9ರ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಣ್ಯಸ್ಮರಣೆ ಜೊತೆಗೆ ಮರಣವೇ ಮಹಾನವಮಿ ಆಚರಣೆ, ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮ್ಮಾನ, ಗ್ರಂಥಗಳ ಬಿಡುಗಡೆ ಸಮಾರಂಭ ಜರುಗಲಿದೆ ಎಂದರು.
ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ತಮ್ಮ ಜೀವನದಲ್ಲಿ ಖಾಸಗಿ ಕಾರ್ಯಕ್ರಮ, ಜಯಂತಿ, ಹುಟ್ಟುಹಬ್ಬ, ತುಲಾಭಾರ ಮಾಡಿಸಿಕೊಂಡಿರಲಿಲ್ಲ. ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ಆಗುವವರೆಗೂ ಪಾದಚಾರಿಗಳಾಗಿ ಜಾತ್ರೆ ಮಾಡಿದರು. ಶ್ರೀಗಳು ಭಕ್ತರ ಜೊತೆಗೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದರು. ಪಾದಯಾತ್ರೆ ಮಾಡುವಾಗ ಸಂತ-ಶರೀಫರ ಹಾಡುಗಳನ್ನು ಹಾಡುತ್ತಾ ಪಾದಯಾತ್ರೆ ಮಾಡುತ್ತಿದ್ದರು. ನಂತರ ಯಡಿಯೂರ ಶ್ರೀ ಸಿದ್ದಲಿಂಗೇಶ್ವರದವರೆಗೆ ಪಾದಯಾತ್ರೆ ಮಾಡಲು ಆರಂಭಿಸಿದರು. ಸುಮಾರು 500ಕ್ಕೂ ಹೆಚ್ಚು ಜನ ಸತತ ಒಂದು ತಿಂಗಳು ಪಾದಯಾತ್ರೆ ಮಾಡುತ್ತಿದ್ದರು. ಸಿದ್ಧಲಿಂಗ ಶ್ರೀಗಳು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜೀವಿಸಿದ್ದರು ಎಂದು ಶಿವಾನಂದ ಪಟ್ಟಣಶೆಟ್ಟರ ಹೇಳಿದರು.
ಕಾರ್ಯಕ್ರಮದಲ್ಲಿ ಜಗದ್ಗುರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುದೇನಗುಡಿ ಅಡವಿ ಸಿದ್ದೇಶ್ವರ ಮಠದ ಡಾ. ನಿರುಪಾಧೀಶ್ವರ ಸ್ವಾಮೀಜಿ ಸನ್ಮಾನ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ ಎಂದರು.
ಶರಣ ಸಾಹಿತಿಗಳು, ಜಾನಪದ ವಿದ್ವಾಂಸರಾದ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಪ್ರಶಸ್ತಿಯನ್ನು ಸ್ವಿಕರಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.
ಮುಂಡರಗಿ-ಬೈಲೂರು ತೋಂಟದಾರ್ಯ ಶಾಖಾಮಠದ ನಿಜಗುಣ ಪ್ರಭು ತೋಂಟದಾರ್ಯ ಶ್ರೀಗಳು, ಶಿರೋಳ ತೋಂಟದಾರ್ಯ ಶಾಖಾಮಠದ ಶಾಂತಲಿಂಗ ಶ್ರೀಗಳು, ಆಳಂದ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಕೋರಡೇಶ್ವರ ಶ್ರೀಗಳು, ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ, ಅರಸಿಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕೆ ಎಚ್ ಬೆಳ್ಳೂರ, ಐ ಬಿ ಬೆನಕೊಪ್ಪ, ಅಂಬರೀಶ್ ಅಂಗಡಿ, ದಾನಯ್ಯ ಗಣಾಚಾರಿ, ಪ್ರವೀಣ, ಕೊಟ್ರೇಶ್ ಸೆರಿದಂತೆ ಅನೇಕರು ಇದ್ದರು.
ಈವರೆಗಿನ ಪ್ರಶಸ್ತಿ ಪುರಸ್ಕ್ರತರು:
2020-ಶ್ರೀ ಬಸವ ಟಿ.ವ್ಹಿ
2021-ಜಸ್ಟಿಸ್ ನಾಗಮೋಹನದಾಸ್
2022-ಡಾ. ಬಸವಲಿಂಗ ಸ್ವಾಮಿಜಿಗಳು
2023-ಡಾ. ಎಸ್ ಎಂ ಜಾಮದಾರ