ಗದಗ: ಸರಣಿಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಗರದ ಬೆಟಗೇರಿಯ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿ ನಡೆದಿದ್ದ ಸರಣಿಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜಾಡು ಹಿಡಿದು ನಗರಕ್ಕೆ ಆಗಮಿಸಿದ್ದ ಗಂಗಾವತಿ ಶಹರ ಪೊಲೀಸ್ ಠಾಣೆಯ ಪೊಲೀಸರು ಸ್ಥಳೀಯ ಎಸ್.ಎಂ. ಕೃಷ್ಣ ನಗರದಲ್ಲಿ ವಾಸವಿದ್ದ ಅಮ್ಜದ್ ಅಲಿ ಇರಾನಿ ಅವನನ್ನು ವಶಕ್ಕೆ ಪಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಸರಣಿಗಳ್ಳತನ ಪ್ರಕರಣದ ಆರೋಪಿ ಅಮ್ಜದ್ ಅಲಿ ಇರಾನಿಯನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಐದಾರು ಜನರು ತಗಾದೆ ತೆಗೆದಿದ್ದಾರೆ. ನಂತರ ಪೊಲೀಸರು ತಾವು ತಂದಿದ್ದ ಇನ್ನೋವಾ ಕಾರಿನಲ್ಲಿ ಆರೋಪಿಯನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೇಟಗೇರಿಯ ರೈಲ್ವೆ ಅಂಡರ್ ಬ್ರಿಡ್ಜ್ ನಲ್ಲಿ ಅಡ್ಡಗಟ್ಟಿ ಕಾರಿನ ಗಾಜು ಒಡೆದು ಮಾರಕಾಸ್ತ್ರಗಳಿಂದ ಮನಬಂದಂತೆ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿದ್ದ ಆರೋಪಿಯನ್ನು ಕರೆದುಕೊಂಡು ಪರಾರಿಯಾಗಿದ್ದಾರೆ.
ಗಾಯಗೊಂಡ ಪೊಲೀಸರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರ ಆರೋಗ್ಯ ವಿಚಾರಿಸಿದರು.
ಗಂಗಾವತಿ ಶಹರ ಪೊಲೀಸರ ಠಾಣೆಯ ASI ಶಿವಶರಣಗೌಡ. ಪೊಲೀಸ್ ಪೇದೆ ಮೈಲಾರಪ್ಪ ಸೊಂಪೂರ, ಹವಾಲ್ದಾರ್ ಮರಿಗೌಡ ಹೊಸಮನಿ, ಕಾರ್ ಡ್ರೈವರ್ ಶರಣಪ್ಪ ತಿಮ್ಮನಗೌಡ್ರ ಎಂಬುವರಿಗೆ ಗಾಯಗಳಾಗಿವೆ.
ಸರಣಿಗಳ್ಳತನದ ಆರೋಪಿ ಅಮ್ಜದ್ ಅಲಿ ಇರಾನಿಯನ್ನು ಕರೆದೊಯ್ಯುಲು ಗಂಗಾವತಿ ಪೊಲೀಸರು ಖಾಸಗಿ ಇನೋವಾ ಕಾರ್ ಕೆಎ 22, ಝಡ್ 1632 ವಾಹನದಲ್ಲಿ ಗದಗ ನಗರಕ್ಕೆ ಬಂದಿದ್ದರು. ಆರೋಪಿ ಪತ್ತೆ ಹಚ್ಚಿ ಕರೆದೊಯ್ಯುವ ವೇಳೆ ಘಟನೆ ನಡೆದಿದ್ದು, ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.