Advertisement

Gadag: ಗಣಿಗಾರಿಕೆಯ ಪ್ರಸ್ತಾವಗಳನ್ನು ತಿರಸ್ಕರಿಸಬೇಕು: ತೋಂಟದ ಶ್ರೀಗಳು

01:20 PM Oct 09, 2024 | Team Udayavani |

ಗದಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ವನ್ಯಜೀವಿಧಾಮ ಎಂದು ಘೋಷಿತವಾಗಿರುವ ಕಪ್ಪತಗುಡ್ಡದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗಾಗಿ ಬಂದ 28 ಪ್ರಸ್ತಾವಗಳನ್ನು ಮುಂದೂಡಿರುವುದು ಸ್ವಲ್ಪ ನೆಮ್ಮದಿಯನ್ನುಂಟು ಮಾಡುವ ವಿಷಯವಾಗಿದ್ದರೂ, ರಾಜ್ಯ ವನ್ಯಜೀವಿ ಮಂಡಳಿ ಆ ಪ್ರಸ್ತಾವಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿತ್ತು ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ತೋಂಟದ ಶ್ರೀಗಳು, ಕಪ್ಪತಗುಡ್ಡದ ಸೂಕ್ಷ್ಮ ವಲಯ ವ್ಯಾಪ್ತಿಯನ್ನು ರಾಜ್ಯ ಸರಕಾರ 10 ಕಿಮೀ ಎಂದು ಸ್ಪಷ್ಟವಾಗಿ ಘೋಷಿಸುವುದಲ್ಲದೆ ಆ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಸ್ಪಷ್ಟ ಆದೇಶ ನೀಡಬೇಕು. ಈಗ ಬಂದಿದ್ದ 28 ಪ್ರಸ್ತಾವಗಳನ್ನು ಮುಂದೂಡಲಾಗಿದೆ. ಇದರಿಂದ ಆತಂಕ ದೂರವಾಗದೇ ತೂಗುಗತ್ತಿ ಇನ್ನೂ ಮೇಲಿದೆ ಎಂಬಂತಾಗಿದೆ.

ಕಪ್ಪತಗುಡ್ಡವು ಜೀವವೈವಿಧ್ಯ ಹಾಗೂ ಸಸ್ಯವೈವಿಧ್ಯಗಳ ಪ್ರದೇಶವಾಗಿದ್ದು, ಮಧ್ಯ ಕರ್ನಾಟಕದ ಸಹ್ಯಾದ್ರಿ ಎನಿಸಿದೆ. ಸಾವಿರಾರು ವನಸ್ಪತಿ ಸಸ್ಯಗಳ ಆಗರವಾಗಿರುವ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದು ಜೀವ ಸಂಕುಲಕ್ಕೆ ಮಾರಕವಾಗುತ್ತದೆ. ಗಣಿಗಾರಿಕೆಯ ಧೂಳಿನಿಂದ ಪರಿಸರ ಹಾನಿಯ ಜೊತೆಗೆ ಮಳೆಯ ಮೂಲ ಸ್ರೋತವನ್ನೇ ನಾಶಗೊಳಿಸಿದಂತಾಗುತ್ತದೆ. ಆದ್ದರಿಂದ ಯಾವ ಕಾಲಕ್ಕೂ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಡಬಾರದು ಎಂದು ಶ್ರೀಗಳು ಆಗ್ರಹಿಸಿದ್ದಾರೆ.

ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣೆಯ ಸಮಿತಿಯನ್ನು ರಚಿಸಿದ್ದು ಸ್ವಾಗತಾರ್ಹ. ಗದಗ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಇರುವ ಸಮಿತಿಯಲ್ಲಿ ಈ ಭಾಗದ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಮತ್ತು ಪರಿಸರ ಉಳಿವಿಗಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿರುವ ಪರಿಸರ ಪ್ರೇಮಿಗಳನ್ನು ಸದಸ್ಯರನ್ನಾಗಿ ಸೇರಿಸಬೇಕು ಎಂದು ತಿಳಿಸಿರುವ ಶ್ರೀಗಳು ಕಪ್ಪತಗುಡ್ಡದ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು. ಈ ದಿಶೆಯಲ್ಲಿ ಪ್ರತಿಯೊಬ್ಬರೂ ಆಸಕ್ತಿ ವಹಿಸಬೇಕು ಎಂದು ಶ್ರೀಗಳು ಸಾರ್ವಜನಿಕರನ್ನು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next