ಗದಗ: ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸಿದವರಿಗೆ ಬಿಲ್ ಪಾವತಿಸಲು 1.50 ಲಕ್ಷ ರೂ. ಪಡೆದ ಆರೋಪದ ಮೇಲೆ ರೋಣ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಬಸಮ್ಮ ಹೂಲಿ ಮತ್ತು ಸಿಬ್ಬಂದಿ ಜಗದೀಶ್ ಎಂಬವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಸಿದ್ದ ಅನಿಲ್ ಕುಮಾರ್ ದಡ್ಡಿ ಎಂಬುವರಿಗೆ 42 ಲಕ್ಷ ರೂ. ಬಿಲ್ ಪಾವತಿಸಲು ಸಿಡಿಪಿಒ ಬಸಮ್ಮ ಹೂಲಿ 1.60 ಲಕ್ಷ ರೂ. (ಶೇ. 4)ರಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟು, ಸಿಬ್ಬಂದಿ ಜಗದೀಶ್ ಬಳಿ ನೀಡಲು ಸೂಚಿಸಿದ್ದರು.
ಅನಿಲ್ ಕುಮಾರ ಅವರು ಶನಿವಾರ ಗಜೇಂದ್ರಗಡದ ಬಳಿಯಿರುವ ಡಾಬಾದಲ್ಲಿ ಜಗದೀಶ್‌ಗೆ 1.50 ಲಕ್ಷ ರೂ. ನೀಡುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಗದಗ ಲೋಕಾಯುಕ್ತ ಡಿವೈಎಸ್‌ಪಿ ಶಂಕರ ರಾಗಿ ತಿಳಿಸಿದ್ದಾರೆ.
ಸಿಪಿಐ ರವಿ ಪುರುಷೋತ್ತಮ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.