ಗದಗ: ಚುನಾವಣೆಗೆ ಮುನ್ನ ನರೇಂದ್ರ ಮೋದಿ ಶ್ವೇತ ಪತ್ರ ಹೊರಡಿಸಲಿ. ಎಲೆಕ್ಟ್ರೋಲ್ ಬಾಂಡ್ ಶೋಷಣೆ ಬಗ್ಗೆ ಜನ ತಿಳಿದುಕೊಳ್ಳಲು ಬಯಸಿದ್ದಾರೆ. ಇಲೆಕ್ಷನ್ ಕಮಿಷನ್ ಗೂ ಆಗ್ರಹ ಮಾಡುತ್ತೇನೆ. ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕೇಳುತ್ತೀರಿ. ಎಲೆಕ್ಟ್ರೋಲ್ ಬಾಂಡ್ ವಿಷಯವಾಗಿ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿಬೇಕು ಎಂದು ಸಚಿವ ಎಚ್ ಕೆ ಪಾಟೀಲ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲೆಕ್ಟ್ರೋಲ್ ಬಾಂಡ್ ವಿಷಯದಲ್ಲಿ ಕೇಂದ್ರ ಸರ್ಕಾರ ಡೊನೇಷನ್ ಅಲ್ಲ ಸುಲಿಗೆ ಮಾಡಿದೆ. ಅಧಿಕೃತವಾಗಿಯೇ ಇಷ್ಟು ಸುಲಿಗೆ ನಡೆದಿದೆ ಎಂದರೆ ಖಾಸಗಿಯಾಗಿ, ಕಪ್ಪು ಹಣ ಎಷ್ಟು ಪಡೆದಿರಬಹುದು.? ದೊಡ್ಡ ಕುಳಗಳು ಎಲೆಕ್ಟ್ರೋಲ್ ಬಾಂಡ್ ನಲ್ಲಿ ಹಣ ನೀಡಿವೆ. ಹಣ ಪಡೆದ ಮೇಲೆ, ಪಕ್ಷ ಸೇರಿದ ಮೇಲೆ ಇಡಿ ವಿಚಾರಣೆ ಹಿಂಪಡೆದಿದ್ದನ್ನು ನೋಡಿದ್ದೇವೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡುವುದಲ್ಲದೆ ಸುಲಿಗೆ ಮಾಡಿದೆ. ರಾಷ್ಟ್ರ ರಾಜಕಾರಣದಲ್ಲಿ ಇದೇ ಮೊದಲು ಸುಲಿಗೆ, ಶೋಷಣೆ ಮಾಡಿ ಹಣ ಪಡೆಯಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಸ್ಕ್ಯಾಮ್ ಬಿಜೆಪಿ ಮಾಡಿದೆ ಎಂದು ಆರೋಪಿಸಿದರು.
ತೆರಿಗೆ ಪಾವತಿಸುವಂತೆ ಕಾಂಗ್ರೆಸ್ ಗೆ ಐಟಿ ನೋಟಿಸ್ ವಿಷಯಕ್ಕೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದ ಅಂಗ ಸಂಸ್ಥೆಗಳ ಮೂಲಕ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ. ನೋಟಿಸ್ ಕೊಡಬೇಡಿ ಅನ್ನಲ್ಲ. ಆದರೆ ಮೂವತ್ತು ವರ್ಷದ ಹಿಂದಿನದ್ದಕ್ಕೆ ಈಗ ನೋಟಿಸ್ ಕೊಡುತ್ತೀರಿ. ಕೋಡ್ ಆಫ್ ಕಂಡೆಕ್ಟ್ ಬಂದಮೇಲೆ ನೋಟಿಸ್ ಕೊಡುತ್ತೀರಿ. ಕಾಂಗ್ರೆಸ್ ಸಂಘಟನೆಯನ್ನು ಅಂಜಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ತಕ್ಕ ಉತ್ತರವನ್ನು ಜನರು ಕೊಡುತ್ತಾರೆ. 1800 ಕೋಟಿ ರೂಪಾಯಿ ಬಾಕಿ ನೋಟಿಸ್ ನೀಡಿದೆ. 10 ವರ್ಷ ಇತ್ತು ನೋಟಿಸ್ ಕೊಡಬಹುದಿತ್ತು. ನೋಟಿಸ್ ಕೊಟ್ಟು ಅಂಜಿಸುವ ಪ್ರಯತ್ನ ಮಾಡುತ್ತಿದ್ದೀರಿ ಎಂದರು.
ಬಸವರಾಜ್ ಬೊಮ್ಮಾಯಿಗೆ ಪೈಲ್ವಾನ್ ದಾವಣಗೆರೆ ಚಾರ್ಲಿ ಎಂದಿದ್ದ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಾರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದ ಸಚಿವ ಎಚ್ ಕೆ ಪಾಟೀಲ್, ಹಿರಿಯ – ಕಿರಿಯ ಪೈಲ್ವಾನ್ ಹೋಲಿಕೆ ಮಾಡಿದ್ದೆ. ಆದರೆ ಅದನ್ನ ಕೆಲವರು ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆ. ಬೊಮ್ಮಾಯಿ ಅವರೂ ತಪ್ಪು ಅರ್ಥೈಸಿಕೊಂಡಿದ್ದಾರೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಗೌತಮ್ ಹೆಸರನ್ನು ನಿರ್ಣಯಿಸಿದೆ. 28 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದೇವೆ. ನಾಮಪತ್ರ ಸಲ್ಲಿಸಲು ಇನ್ನೇನು ತಯಾರಿ ಮಾಡಲಾಗುತ್ತದೆ. ಕೋಲಾರದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಏಜೆಂಟ್ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾಮಿಗಳ ಬಗ್ಗೆ ಲಘುವಾಗಿ ಮಾತನಾಡಿದನ್ನು ಸಮಾಜ ಸಹಿಸಲ್ಲ. ಅವರ ನಿಲುವಿನ ಬಗ್ಗೆ ಟೀಕೆ ಮಾಡುವುದಿದ್ದರೆ ಮಾಡಿ. ಆದರೆ ಪಕ್ಷದ ಏಜೆಂಟ್ ಎಂದು ಗೂಬೆ ಕೂರಿಸುವುದು ಕೆಳಮಟ್ಟದ ಕೆಲಸ. ಸ್ವಾಮಿಗಳ ನಿಲುವಿನ ಬಗ್ಗೆ ಚರ್ಚೆಯಾಗಲಿ. ಸ್ವಾಮಿಗಳು ಪಕ್ಷದ ಜೊತೆಗೆ ಯಾವುದೇ ಸಂಬಂಧ ಇಟ್ಟುಕೊಂಡಿಲ್ಲ. ಸ್ವಾಮಿಗಳು ನಮ್ಮ ಕಡೆ ಇದ್ದಾರೆ ಎನ್ನುವ ಬಿಜೆಪಿ ಸುಳ್ಳು ಬಹಿರಂಗವಾಗಿದೆ. ಯಾರು ಬಿಜೆಪಿಗೆ ಹೊಂದಿಕೊಳ್ಳುವುದಿಲ್ಲ ಅವರಿಗೆ ಕಟುವಾಗಿ ನಿಂದಿಸುತ್ತಾರೆ ಎಂದರು.