ಗದಗ: ದೇಶ ಸೇವೆಯಲ್ಲಿ ಸುದೀರ್ಘ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿನಲ್ಲಿದ್ದ ಐಟಿಬಿಪಿ ಯೋಧ, ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದ ರಾಮನಗೌಡ ಚಂದ್ರಗೌಡ ಕರಬಸನಗೌಡ್ರ(43) ಇವರು ಅನಾರೋಗ್ಯದಿಂದ ರವಿವಾರ ನಿಧನರಾಗಿದ್ದಾರೆ.
ಸಿಕ್ಕಿಂನ ಐಟಿಬಿಪಿ ಅರೆಸೇನಾ ಪಡೆಯ 13ನೇ ಬೆಟಾಲಿಯನ್‌ನಲ್ಲಿ ಹವಾಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮನಗೌಡ ಕರಬಸನಗೌಡ್ರ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರ ಫೆ. 7ರಂದು ಸ್ವಗ್ರಾಮ ರಡ್ಡೇರನಾಗನೂರ ಗ್ರಾಮಕ್ಕೆ ಬರುವ ನಿರೀಕ್ಷೆಯಿದೆ ಎಂದು ತಹಶೀಲ್ದಾರ ಶ್ರೀಶೈಲ ತಳವಾರ ಅವರು ತಿಳಿಸಿದ್ದಾರೆ.
15-8-1980ರಲ್ಲಿ ಜನಿಸಿದ ಯೋಧ ರಾಮನಗೌಡ ಕರಬಸನಗೌಡ್ರ ಅವರು 2002ರ ನವೆಂಬರ್ ತಿಂಗಳಿನಲ್ಲಿ ಐಟಿಬಿಪಿ ಯೋಧರಾಗಿ ಸೇವೆಗೆ ಅಣಿಯಾಗಿದ್ದರು. ಇನ್ನು ಕೇವಲ 2 ತಿಂಗಳು ಸೇವೆಯಲ್ಲಿ ಇರುವಾಗಲೇ ಅವರು ನಿಧನರಾಗಿದ್ದಾರೆ. ಮೃತ ಯೋಧ ಪತ್ನಿ ಜಯಶ್ರೀ ಹಾಗೂ ಪುತ್ರ ನಿಂಗನಗೌಡ ಮತ್ತು ಸಹೋದರರನ್ನು ಅಗಲಿದ್ದಾರೆ.
ತಹಶೀಲ್ದಾರ್ ಭೇಟಿ
ತಹಶೀಲ್ದಾರ ಶ್ರೀಶೈಲ ತಳವಾರ ಅವರು ಸೋಮವಾರ ಸಂಜೆ ಮೃತ ಯೋಧನ ಮನೆಗೆ ಭೇಟಿ ನೀಡಿ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕೊಣ್ಣೂರ ಕಂದಾಯ ನಿರೀಕ್ಷಕ ಈರಣ್ಣ ಕಳಸನ್ನವರ, ಗ್ರಾಮ ಲೆಕ್ಕಾಧಿಕಾರಿಗಳಾದ ಪಾಂಡಪ್ಪ ತಳವಾರ, ಶಿವಯೋಗಿ ಜಲಗೇರಿ ಹಾಗೂ ಪಿಡಿಓ, ಗ್ರಾಮದ ಹಿರಿಯರು ಸ್ಥಳದಲ್ಲಿದ್ದರು.
ಶ್ರೀಗಳಿಂದ ಸಾಂತ್ವನ: ಯೋಧ ರಾಮನಗೌಡ ಕರಬಸನಗೌಡ್ರ ಅವರು ನಿಧನರಾದ ಸುದ್ದಿ ತಿಳಿದು ಶಿರೋಳ ಹಾಗೂ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು ರಡ್ಡೇರನಾಗನೂರ ಗ್ರಾಮದಲ್ಲಿರುವ ಮೃತ ಯೋಧನ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಯೋಧರ ಸೇವೆಯನ್ನು ಸ್ಮರಿಸಿದರು.