Advertisement

ಗದಗ: ಮನೆಗೊಂದು ರೊಟ್ಟಿ-ರೂಪಾಯಿ ಭಿಕ್ಷೆಗೆ ಚಾಲನೆ

06:37 PM Mar 06, 2023 | Team Udayavani |

ಗದಗ: ಇಂದು ನೋಟಿನ ಮೂಲಕ ಚುನಾವಣೆ ನಡೆಯುತ್ತಿದ್ದು, ನೋಟಿನ ಮೂಲಕ ವೋಟು ಗಿಟ್ಟಿಸುವ ಕೆಲಸವಾಗುತ್ತಿದೆ. ಆದ್ದರಿಂದ, ಚುನಾವಣೆಗಳು ಬದಲಾವಣೆಯಾಗಬೇಕು. ಯೋಗ್ಯ ಹಾಗೂ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಸಾರ್ವಜನಿಕರು ಕೂಡ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

Advertisement

ತಾಲೂಕಿನ ಸೊರಟೂರು ಗ್ರಾಮದಲ್ಲಿ ನಿಮ್ಮದೊಂದು ರೊಟ್ಟಿ ನಾ ಎಂದಿಗೂ ಗಟ್ಟಿ, ನಿಮ್ಮದೊಂದು ಪ್ರೀತಿಯ ನಾಣ್ಯ ಪಡೆದ ನಾನೇ ಧನ್ಯ. ನಮ್ಮ ನಡೆ ನಿಮ್ಮೆಲ್ಲರ ಮನೆ-ಮನದ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾರರು 100, 500 ರೂ.ಗೆ ಮತವನ್ನು ಮಾರಿಕೊಳ್ಳಬಾರದು ಎಂಬ ದೃಷ್ಟಿಯಿಂದ ಹೊಸ ಪರಿಕಲ್ಪನೆಯೊಂದಿಗೆ ನಿಮ್ಮದೊಂದು ರೊಟ್ಟಿ ನಾ ಎಂದಿಗೂ ಗಟ್ಟಿ, ನಿಮ್ಮದೊಂದು ಪ್ರೀತಿಯ ನಾಣ್ಯ ಪಡೆದ ನಾನೇ ಧನ್ಯ. ನಮ್ಮ ನಡೆ ನಿಮ್ಮೆಲ್ಲರ ಮನೆ-ಮನದ ಕಡೆ ಕಾರ್ಯಕ್ರಮದೊಂದಿಗೆ ಜನರ ಮನೆಗೆ ಹೋಗಿ ರೊಟ್ಟಿಯ ಜೊತೆಗೆ ಒಂದು ರೂ. ನಾಣ್ಯದ ಭಿಕ್ಷೆ ಪಡೆದು ಆಶೀರ್ವಾದ ಕೇಳುತ್ತಿದ್ದೇನೆ ಎಂದು ಹೇಳಿದರು.

ಗದಗ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 59 ಸಾವಿರ ಮನೆಗಳಿದ್ದು, ಪ್ರತಿ ಮನೆಗೆ ಭೇಟಿ ನೀಡಿ, ಅದರಿಂದ ಕೂಡಿದ ಹಣದಲ್ಲಿ ಬಿಜೆಪಿ ಪಕ್ಷದ ನಾಮಪತ್ರ ಸಲ್ಲಿಸಲು ಬಳಸಲಾಗುತ್ತದೆ. ಜನರ ಶಾಸಕನಾಗಬೇಕು. ಜನರ ಹಿಡಿತದಲ್ಲಿರುವ ಹಾಗೂ ಜನರ ನೋವು, ಕಷ್ಟ ಅರ್ಥ ಮಾಡಿಕೊಳ್ಳುವ ಶಾಸಕನಾಗಬೇಕು. ಅಂದಾಗ ಮಾತ್ರ ಜನರು ಕೊಟ್ಟ ರೊಟ್ಟಿಗೂ, ನಾಣ್ಯಕ್ಕೂ, ಮಾಡಿದ ಮತದಾನಕ್ಕೂ ಬೆಲೆ ಬರುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಕಾಂಗ್ರೆಸ್‌ ನಾಯಕರು ಅನಿಲ ಮೆಣಸಿನಕಾಯಿ ಚಿಲ್ಲರೆ ರಾಜಕಾರಣ ಮಾಡುತ್ತಾನೆಂದು ಹೇಳಿದ್ದಾರೆ. ಅವರಿಗೆ ನೋಟಿನ ಬಗ್ಗೆ ಮಾತ್ರ ಗೊತ್ತಿದೆ. ಚಿಲ್ಲರೆ ಮಹತ್ವ ಅರಿತುಕೊಂಡಿಲ್ಲ. ಯಾವುದೇ ಮನೆಯಲ್ಲಿ ಶುಭ ಕಾರ್ಯ ನಡೆಯಬೇಕಾದರೆ ಒಂದು ಸಾವಿರ ನೋಟಿದ್ದರೂ ಅದರ ಮೇಲಿನ 1ರೂ. ಚಿಲ್ಲರೆಗೆ ಬಹಳ ಬೆಲೆ, ಮಹತ್ವ ಬರುತ್ತದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಸ್ವಾಭಿಮಾನದ ಜನತೆ ಚಿಲ್ಲರೆಯ ಮಹತ್ವ ತಿಳಿಸಿಕೊಡುತ್ತಾರೆ ಎಂದು ಹೇಳಿದರು.

Advertisement

ನಿಮ್ಮದೊಂದು ರೊಟ್ಟಿ ನಾ ಎಂದಿಗೂ ಗಟ್ಟಿ, ನಿಮ್ಮದೊಂದು ಪ್ರೀತಿಯ ನಾಣ್ಯ ಪಡೆದ ನಾನೇ ಧನ್ಯ ಅಭಿಯಾನದ ಅಂಗವಾಗಿ ಸೊರಟೂರ ಗ್ರಾಮದ ಹಾಲುಮತ ಸಮುದಾಯದ ನೀಲಪ್ಪ ಸೀತಾರಹಳ್ಳಿ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಸಂಗಟಿ, ಮಜ್ಜಿಗೆ, ರೊಟ್ಟಿ, ಕಡಲೆಕಾಳು, ಹೆಸರಕಾಳು, ಬದನೆಕಾಯಿ ಪಲ್ಯೆ ಹಾಗೂ ಮೊಸರು, ಚಿತ್ರಣ್ಣ ಊಟ ಸವಿದರು. ನಂತರ ಗ್ರಾಮದ ಪ್ರತಿ ಮನೆ-ಮನೆಗೆ ಭೇಟಿ ನೀಡಿ ರೊಟ್ಟಿ, ನಾಣ್ಯದ ಭಿಕ್ಷೆ ಪಡೆದರು.

ಅನಿಲಗೆ ಮೆಣಸಿನಕಾಯಿ ಹಾರ: ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಸೊರಟೂರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ಮುಖಂಡರು ಕಿತ್ತಳೆ ಹಣ್ಣು, ದೊಣ್ಣೆ ಮೆಣಸಿನಕಾಯಿ, ಚೆಂಡು ಹೂವು, ಮೆಣಸಿನಕಾಯಿ ಬಳಸಿ ತಯಾರಿಸಿದ 15 ಅಡಿ ಎತ್ತರದ ಹಾರವನ್ನು ಜೆಸಿಬಿ ಮೂಲಕ ಹಾಕಲಾಯಿತು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಗದಗ-ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಮುಖಂಡರಾದ ಭದ್ರೇಶ ಕುಸಲಾಪೂರ, ಎಂ.ಎಂ. ಹಿರೇಮಠ, ಪರಮೇಶ ನಾಯ್ಕ, ಕೆ.ಪಿ. ಕೋಟಿಗೌಡರ, ವಿಜಯಲಕ್ಷ್ಮೀ ಮಾನ್ವಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next