ಗದಗ: ಗದಗ – ಬೆಟಗೇರಿ ಅವಳಿ ನಗರದಲ್ಲಿ ಶನಿವಾರ (ಸೆ.21) ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳೆಲ್ಲಾ ಕೆರೆಗಳಂತಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.
ನಗರಸಭೆ 4ನೇ ವಾರ್ಡಿನ ಬೆಟಗೇರಿಯ ಟರ್ನಲ್ ಪೇಟೆಯಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳೆಲ್ಲಾ ಕೆರೆಯಂತೆ, ನೀರಿನಲ್ಲಿ ನಡೆದುಕೊಂಡು ಹೋಗುವ ಸ್ಥಿತಿ ಉಂಟಾಗಿದೆ.
ಭಾರಿ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ಹರಿದಿದ್ದು, ಟರ್ನಲ್ ಪೇಟೆಯ ಕೆಲವು ಕುಟುಂಬಸ್ಥರ ಜೀವನ ಅಸ್ತವ್ಯಸ್ತವಾಗಿದೆ.
ಪ್ರತಿ ಬಾರಿ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತದೆ ಎಂದು ಗದಗ ಬೆಟಗೇರಿ ನಗರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಬಾರದ ನಗರಸಭೆ ಸದಸ್ಯರು, ಅಧಿಕಾರಿಗಳು ವಿರುದ್ದ ಜನ ಕಿಡಿಕಾರಿದರು. ಸದಸ್ಯೆ ಶಕುಂತಲಾ ಅಕ್ಕಿ, ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ. ಗದಗ-ರೋಣ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.