Advertisement

ಜ್ವರಬಾಧೆಗೆ ಮೆತ್ತಗಾದ “ಗಬ್ಬೂರು’

02:15 PM Nov 15, 2019 | Suhan S |

ಕೊಪ್ಪಳ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ಜ್ವರ ಬಾಧೆಯಿಂದ ಬಳಲುತ್ತಿದ್ದು, ಜಿಲ್ಲಾಸ್ಪತ್ರೆ ಸೇರಿದಂತೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ತಿಂಗಳಿಂದಲೂ ಜ್ವರ ಬಾಧೆಯಿಂದ ಬಳಲುತ್ತಿರುವ ಇಲ್ಲಿಯ ಜನರು ಕೈ, ಕಾಲು, ಕೀಲು ನೋವು, ಮೈ ಕೈನೋವು, ಜ್ವರ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಗ್ರಾಮದ ಪ್ರತಿ ಮನೆಯಲ್ಲೂ ಒಬ್ಬರು ಅಥವಾ ಇಬ್ಬರು ಜ್ವರದಿಂದ ಬಳಲುತ್ತಿದ್ದಾರೆ. ಜ್ವರದಿಂದ ಬಳಲುವ ಜನರನ್ನು ಏನಾಗಿದೆ ಎಂದು ಯಾರೂ ಕೇಳುತ್ತಿಲ್ಲ. ಇಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಜನಪ್ರತಿನಿಧಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಜನರ ನರಳಾಟ ಹೇಳ ತೀರದಂತಾಗಿದೆ. ಸರ್ಕಾರಿ ವೈದ್ಯರು ಮಾತ್ರ ಇತ್ತ ಗಮನ ಹರಿಸಿಲ್ಲ ಎನ್ನುವುದು ಗ್ರಾಮಸ್ಥರ ಆಪಾದನೆ. ಕೆಲ ದಿನಗಳ ಹಿಂದೆ ತಾಲೂಕಿನ ದನಕನದೊಡ್ಡಿ ಗ್ರಾಮದಲ್ಲಿ ಶಂಕಿತ ಡೆಂಘೀ ಜ್ವರ ಬಾಧೆ ಹೆಚ್ಚಾಗಿತ್ತು. ಇಲ್ಲಿಯ ಜನರೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಈಗ ತಾಲೂಕಿನ ಗಬ್ಬೂರು ಗ್ರಾಮದಲ್ಲೂ ಅದೇ ಪರಿಸ್ಥಿತಿ ಎದುರಾಗಿದೆ. ಸಮೀಪದ ಗಿಣಗೇರಿಯಲ್ಲೂ ಜ್ವರದಿಂದ ಜನ ಭಯಗೊಂಡಿದ್ದು, ಜ್ವರಕ್ಕೆ ಇಡೀ ಊರಿನ ಜನರೆ ಬೆಚ್ಚಿ ಬಿದ್ದಿದ್ದಾರೆ. ಸರ್ಕಾರಿ ಆಸ್ಪತ್ರೆಯಿದ್ದರೂ ಗ್ರಾಮಸ್ಥರಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಜನರು ಭಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ನಾಲ್ಕಾರು ದಿನಗಳ ಕಾಲ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ಇಷ್ಟೆಲ್ಲಾ ನರಳುತ್ತಿದ್ದರೂ ಯಾವ ಅಧಿಕಾರಿಯೂ ಇತ್ತ ತಿರುಗಿ ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಿಣಗೇರಿ, ದನಕನದೊಡ್ಡಿ, ಚಾಮಲಾಪೂರ ಸೇರಿದಂತೆ ನೀರಾವರಿ ಪ್ರದೇಶದಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರಿ ಆಸ್ಪತ್ರೆಗಳು ಎಂದರೆ ಜನರೇ ಮೂಗು ಮುರಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ಗ್ರಾಮದಲ್ಲೂ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. 10 ಮನೆಗಳ ಪೈಕಿ 2 ಮನೆಯಲ್ಲಿ ಲಾರ್ವಾ ಇರುವುದು ಪತ್ತೆಯಾಗುತ್ತಿದೆ. ಆ ಲಾರ್ವಾ ನಾಶ ಮಾಡುವ ಕುರಿತು ಆಶಾಗಳು ಸೇರಿದಂತೆ ಆರೋಗ್ಯ ಇಲಾಖೆ ತಂಡವು ಜಾಗೃತಿ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ. ಆದರೆ ಜ್ವರಬಾಧೆ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ.

Advertisement

ನಮ್ಮ ಗ್ರಾಮದಲ್ಲಿ ಕಳೆದೊಂದು ತಿಂಗಳಿಂದ ಡೆಂಘೀ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದೆ. 120ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲಿ ಗಿಣಗೇರಿ, ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಹತ್ತಾರುಸಾವಿರ ವೆಚ್ಚವಾಗುತ್ತಿದೆ. ಇಲ್ಲಿವರೆಗೂ ಯಾರೂಸರ್ಕಾರಿ ವೈದ್ಯರು ನಮ್ಮೂರಿಗೆ ಬಂದಿಲ್ಲ. ಇನ್ನಾದರೂ ಕೂಡಲೇ ಇತ್ತ ಗಮನ ನೀಡಲಿ.ಶಿವರಾಮಪ್ಪ ಕುರಿ, ಗ್ರಾಪಂ ಮಾಜಿ ಅಧ್ಯಕ್ಷ, ಗಬ್ಬೂರು.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next