ದೇವದುರ್ಗ: ಗಬ್ಬೂರು ಬೂದಿಬಸವೇಶ್ವರ ಜಾತ್ರೆ ಅಂಗವಾಗಿ ಲಕ್ಷಾಂತರ ಭಕ್ತರ ನಡುವೆ ಬುಧವಾರ ಸಂಜೆ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆಯಿಂದ ರಥೋತ್ಸವಕ್ಕೆ ಭಕ್ತ ಸಮೂಹ ಹರಳೆಣ್ಣೆ ಅಭಿಷೇಕ ನೆರವೇರಿಸಿ, ಹೂವು, ಹಣ್ಣು, ಬಾಳೆದಿಂಡು, ಮಾವಿನ ಎಲೆಗಳಿಂದ ಸಿಂಗರಿಸಿದ್ದರು. ಜಾತ್ರಾ ಮಹೋತ್ಸವ ನಿಮಿತ್ತ ಬೆಳಗ್ಗೆ 7ಕ್ಕೆ ಶ್ರೀಗಳ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಅದ್ಧೂರಿಯಾಗಿ ಜರುಗಿತು. ನಂತರ 10.30ಕ್ಕೆ ಮಹಾದಾಸೋಹಕ್ಕೆ ಶ್ರೀಗಳು ಚಾಲನೆ ನೀಡಿದರು.
ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಸೇರಿ ವಿವಿಧ ಮಠದ ಶ್ರೀಗಳ ನೇತೃತ್ವದಲ್ಲಿ ಕತೃì ಗದ್ದುಗೆಯಿಂದ ಮೆರವಣಿಗೆ ಹೊರಟು, ಊರಿನ ಪ್ರಮುಖ ಬೀದಿಗಳ ಮೂಲಕ ಸಕಲ ವಾದ್ಯಮೇಳದೊಂದಿಗೆ ಶ್ರೀಮಠಕ್ಕೆ ಆಗಮಿಸಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ನಂತರ ಜರುಗಿದ ಮಹಾರಥೋತ್ಸವಕ್ಕೆ ಭಕ್ತರು ಹೂವು, ಹಣ್ಣು, ಉತ್ತತ್ತಿ, ಮಂಡಾಳು ಅರ್ಪಿಸಿ ಪುನೀತರಾದರು. ಜಾತ್ರೆ ನಿಮಿತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನಬಸವ ತಾತ ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಇಂದು ಕಾಮಿಡಿ ಎಕ್ಸ್‌ಪ್ರೆಸ್: ಜಾತ್ರಾ ಮಹೋತ್ಸವ ಅಂಗವಾಗಿ ಫೆ.25ರಂದು ಕಡೆ ಉಚ್ಛಾಯ, ಧಾರ್ಮಿಕ ಸಭೆ ಹಾಗೂ ಕಾರ್ಮಿಕ ಎಕ್ಸ್‌ಪ್ರೆಸ್ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಧಾರ್ಮಿಕ ಸಭೆ ಮತ್ತು ಹಾಸ್ಯ ಕಲಾವಿದ ಪ್ರಾಣೇಶ ಗಂಗಾವತಿ, ನರಸಿಂಹ ಜೋಶಿ ಅವರಿಂದ ನಗುವೆ ಸ್ವರ್ಗ ಕಾರ್ಯಕ್ರಮ, ನಂತರ ವಿಶ್ವತಾ ಭಟ್‌ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.