ಹಿಂದಿ ಚಿತ್ರರಂಗದಲ್ಲಿ ದಾಖಲೆ ಬರೆದ “ಶೋಲೆ’ ಸಿನೆಮಾದ “ಗಬ್ಬರ್ ಸಿಂಗ್’ ಪಾತ್ರ ಎಲ್ಲರಿಗೂ ನೆನಪಿದೆ. ಆ ಹೆಸರು ಮುಂದಿನ ದಿನದಲ್ಲಿ ಬಹಳಷ್ಟು ಜನಪ್ರಿಯ ಕೂಡ ಆಗಿತ್ತು. ಜತೆಗೆ, ತೆಲುಗು ಸಿನೆಮಾ ಕೂಡ ಇದೇ ಹೆಸರಿನಲ್ಲಿ ಸುದ್ದಿ ಮಾಡಿತ್ತು. ವಿಶೇಷವೆಂದರೆ ಇದೇ ಹೆಸರು ಇದೀಗ ಕೋಸ್ಟಲ್‌ವುಡ್‌ನಲ್ಲಿ ಕೇಳಿಬರುತ್ತಿದೆ.
ವಿಶೇಷ ಟೈಟಲ್‌ಗಳ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಹೊಸ ಹೊಸ ಸಿನೆಮಾಗಳು ಬರುತ್ತಿರುವ ಈ ಕಾಲದಲ್ಲಿ ಇದೀಗ “ಗಬ್ಬರ್ ಸಿಂಗ್’ ಟೈಟಲ್ ಕೂಡ ಸದ್ದು ಮಾಡುತ್ತಿದೆ. ಅದೇ ಹೆಸರಿನಲ್ಲೇ ಸಿನೆಮಾ ಮಾಡಬೇಕು ಎಂದು ನಿರ್ಧರಿಸಿರುವ ಚಿತ್ರತಂಡ ಕೆಲವೇ ದಿನದೊಳಗೆ ಶೂಟಿಂಗ್ ಕೂಡ ಆರಂಭಿಸಲಿದೆ.
“ಅಂಬರ್ ಕ್ಯಾಟರರ್’ ಎಂಬ ತುಳು ಸಿನೆಮಾದ ಮೂಲಕ ಕೋಸ್ಟಲ್‌ವುಡ್‌ಗೆ ಭರ್ಜರಿಯಾಗಿ ಎಂಟ್ರಿ ಪಡೆದಿದ್ದ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ ಅವರ ಪುತ್ರ ಸೌರಭ ಭಂಡಾರಿ “ಗಬ್ಬರ್ ಸಿಂಗ್’ ಎಂಬ ತುಳು ಸಿನೆಮಾ ಮಾಡಲು ರೆಡಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸೌರಭ್ ಅವರೇ ಕಾಣಿಸಿಕೊಳ್ಳಲಿದ್ದಾರೆ.
ಮುತ್ತು ಗೋಪಾಲ ಫಿಲಂಸ್ ಅವರ ಕಡಂದಲೆ ಸುರೇಶ್ ಭಂಡಾರಿ ಅರ್ಪಿಸುವ ಬಾಕೂìರು ಸತೀಶ್ ಪೂಜಾರಿ ನಿರ್ಮಾಣದ “ಗಬ್ಬರ್ ಸಿಂಗ್’ ತುಳು ಸಿನೆಮಾ ಶ್ರೀ ಕ್ಷೇತ್ರ ಕಟೀಲಿನಲ್ಲಿ ನಾಡಿದ್ದು ರವಿವಾರ ಮುಹೂರ್ತ ಕಾಣಲಿದೆ. ಆ ಬಳಿಕ ಸಿನೆಮಾ ಶೂಟಿಂಗ್ ನಡೆಯಲಿದೆ. ಅಂದಹಾಗೆ, ಸಿನೆಮಾಕ್ಕೆ ಕತೆ, ಚಿತ್ರಕತೆ, ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ಬೈಕಾಡಿ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ಇದೆ. ನವ್ಯ ಪೂಜಾರಿ, ಶಿಲ್ಪಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಮಂಗಳೂರು, ಸುರತ್ಕಲ್ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಖ್ಯಾತ ಕಲಾವಿದರೊಂದಿಗೆ ಹೊಸಮುಖಗಳಿಗೂ ಅವಕಾಶ ನೀಡಲಾಗಿದೆ.
ಮುಖ್ಯ ಪಾತ್ರದಲ್ಲಿ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸತೀಶ್ ಬಂದಲೆ, ಗಿರೀಶ್ ಶೆಟ್ಟಿ ಕಟೀಲ್, ಪ್ರಜ್ವಲ್, ಶಶಿ ಬೆಳ್ಳಾಯರು, ನರೇಶ್ ಕುಮಾರ್ ಸಸಿಹಿತ್ಲು, ಉದಯ ಆಳ್ವ ಸುರತ್ಕಲ್, ಸುನಿಲ್ ಕೃಷ್ಣಾಪುರ, ಯಶವಂತ ಶೆಟ್ಟಿ ಕೃಷ್ಣಾಪುರ ಸಿನೆಮಾದಲ್ಲಿದ್ದಾರೆ. ಚಿತ್ರದ ಸಹನಿರ್ದೇಶನ: ರೀಶನ್ ಮೈಸೂರು, ಛಾಯಾಗ್ರಹಣ: ರವಿ ಸುವರ್ಣ, ಸಂಕಲನ ಹರೀಶ್ ಕೊಟ್ಪಾಡಿ, ಸಂಗೀತ: ಡೋಲ್ಫಿನ್. ನರೇಶ್ ಕುಮಾರ್ ಸಸಿಹಿತ್ಲು, ಆರ್.ಎನ್. ಶೆಟ್ಟಿ ಕಳವಾರು ಸಾಹಿತ್ಯ ಬರೆದಿದ್ದಾರೆ.
-ದಿನೇಶ್ ಇರಾ