ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಚೀನದ ಹಿಡಿತ ಹೆಚ್ಚುತ್ತಲೇ ಇದ್ದು, ಒಂದು ರೀತಿಯಲ್ಲಿ ಒಂದಲ್ಲ ಒಂದು ದೇಶಗಳು ಸಾಲದ ಸುಳಿಗೆ ಸಿಲುಕಿವೆ. ಅದರಲ್ಲೂ 2013ರಲ್ಲಿ ಚೀನದ ಬೆಲ್ಟ್ ಆ್ಯಂಡ್ ರೋಡ್ ಯೋಜನೆ ಜಾರಿಯಾದ ಮೇಲೆ ಸುಮಾರು 100 ದೇಶಗಳು ಚೀನದ ಬಿಗಿಮುಷ್ಟಿಗೆ ಸಿಲುಕಿವೆ. ಸದ್ಯ ಈ ರಾಷ್ಟ್ರಗಳನ್ನು ಸಾಲದ ಸುಳಿಯಿಂದ ತಪ್ಪಿಸಬೇಕು ಮತ್ತು ತೃತೀಯ ಜಗತ್ತಿನ ದೇಶಗಳಿಗೆ ಅಗತ್ಯ ನೆರವು ನೀಡಬೇಕಾದ ಅನಿವಾರ್ಯತೆಯೂ ಇಂದು ಜಾಗತಿಕ ನಾಯಕರ ಮುಂದಿದೆ.
ಇದರ ಅಂಗವಾಗಿಯೇ ಈಗ ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಅಮೆರಿಕ ನೇತೃತ್ವದಲ್ಲಿ ಜಿ7 ದೇಶಗಳು ಚೀನದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಪರ್ಯಾಯವಾಗಿ ಜಾಗತಿಕ ಮೂಲ ಸೌಕರ್ಯ ಮತ್ತು ಹೂಡಿಕೆಯ ಸಹಭಾಗಿತ್ವ (ಪಿಜಿಐಐ) ಎಂಬ ಯೋಜನೆಯನ್ನು ಘೋಷಿಸಿವೆ. ಕಳೆದ ವರ್ಷದ ಶೃಂಗಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಈ ಬಾರಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದು 600 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಯಾಗಿದ್ದು ಅಮೆರಿಕವೇ 200 ಬಿಲಿಯನ್ ಡಾಲರ್ ಹಣ ನೀಡಲಿದೆ. ಉಳಿದ ಹಣವನ್ನು ಜಿ7ನ ಇತರ ದೇಶಗಳು ಮತ್ತು ಐರೋಪ್ಯ ದೇಶಗಳು ನೀಡಲಿವೆ. ಪ್ರಮುಖವಾಗಿ ಏಷ್ಯಾ ಮತ್ತು ಆಫ್ರಿಕಾ ದೇಶಗಳಿಗೆ ಇದರಿಂದ ಪ್ರಯೋಜನವಾಗಲಿದೆ.
ಈ ಯೋಜನೆಯಲ್ಲಿ ಪ್ರಮುಖವಾಗಿ ಅಂಗೋಲಾ ದೇಶಕ್ಕೆ ಸೋಲಾರ್ ಪವರ್ ಪ್ರಾಜೆಕ್ಟ್, ಸೆನೆಗಲ್‌ಗೆ ಲಸಿಕೆಯ ತಯಾರಿಕಾ ವ್ಯವಸ್ಥೆ ರೂಪಿಸುವುದು, ರೊಮೆನಿಯಾಗೆ ಮಾಡ್ಯುಲರ್ ರಿಯಾಕ್ಟರ್, ಸಿಂಗಾಪುರ-ಫ್ರಾನ್ಸ್ ನಡುವಿನ 1,000 ಮೈಲು ದೂರದಲ್ಲಿ ಸಬ್‌ಮರೀನ್ ಟೆಲಿಕಮ್ಯೂನಿಕೇಶನ್ ಕೇಬಲ್ ಅಳವಡಿಸಿ ಈಜಿಪ್ಟ್ ಮತ್ತು ಆಫ್ರಿಕಾ ದೇಶಗಳಿಗೆ ಅನುಕೂಲ ಮಾಡಿಕೊಡುವುದು ಸೇರಿದೆ.
ಹಾಗೆಯೇ ಅಭಿವೃದ್ಧಿಶೀಲ ದೇಶಗಳಲ್ಲಿ ಕಲ್ಲಿದ್ದಲು ಬಳಕೆ ಕಡಿಮೆ ಮಾಡುವುದು, ದಕ್ಷಿಣ ಆಫ್ರಿಕಾ, ಭಾರತ, ಇಂಡೋನೇಷ್ಯಾ, ವಿಯೆಟ್ನಾಂ, ಸೆನೆಗಲ್‌ನಲ್ಲಿ ಎನರ್ಜಿ ಟ್ರಾನ್ಸಿಷನ್ ಪಾಟ್ನìರ್‌ಶಿಪ್ ಅನ್ನು ಜಾರಿ ಮಾಡುವುದು ಸೇರಿದೆ. ಇವೆಲ್ಲವುಗಳನ್ನು ಜಾರಿ ಮಾಡಿದರೆ ಜಾಗತಿಕವಾಗಿ ತಾಪಮಾನ ಏರಿಕೆ ಸಮಸ್ಯೆಯೂ ನಿವಾರಣೆಯಾಗುತ್ತದೆ ಎಂಬುದು ಜಿ7 ದೇಶಗಳ ಆಶಯವೂ ಆಗಿದೆ.
ಏನೇ ಆಗಲಿ, ತೃತೀಯ ಜಗತ್ತಿನ ದೇಶಗಳಿಗೆ ಸಹಕಾರ ನೀಡಲು ಹೊರಟಿರುವ ಈ ಯೋಜನೆ ಉತ್ತಮವೇ. ಆದರೆ ಇದು ಚೀನದ ಪ್ರತಿಸ್ಪರ್ಧಿಯಾಗಿ ಅಥವಾ ಚೀನವನ್ನು ಹಣಿಯಲಷ್ಟೇ ಸೀಮಿತವಾಗ ಬಾರದು. ಇದಕ್ಕೆ ಬದಲಾಗಿ ಚೀನದಿಂದ ಸಾಲ ಪಡೆದು ನರಳುತ್ತಿರುವ ಆಫ್ರಿಕಾ ದೇಶಗಳಿಗೆ ಸಹಾಯವಾಗುವಂತಾಗಬೇಕು.
ಸದ್ಯ ಜಗತ್ತಿನ ಬಹುತೇಕ ದೇಶಗಳು, ಚೀನದ ಸಾಲದ ಹಿಡಿತದಲ್ಲಿವೆ ಎಂದರೆ ತಪ್ಪಾಗಲಾರದು. ಇದಕ್ಕೆ ಉದಾಹರಣೆ ಎಂದರೆ ನಮ್ಮ ನೆರೆಯ ಪಾಕಿಸ್ಥಾನ, ಶ್ರೀಲಂಕಾ, ನೇಪಾಲ, ಮಾಲ್ಡೀವ್ಸ್ ದೇಶಗಳು. ಈಗಾಗಲೇ ಈ ದೇಶಗಳ ಹಣಕಾಸು ಸ್ಥಿತಿ ಹಳಿತಪ್ಪಿದೆ. ಸದ್ಯಕ್ಕಂತೂ ಇವು ಚೇತರಿಸಿ ಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ. ಮೊದಲಿಗೆ ಚೀನದ ಹಿಡಿತಕ್ಕೆ ಒಳಗಾಗಿರುವ ಇಂಥ ದೇಶಗಳ ನೆರವಿಗೆ ನಿಲ್ಲಬೇಕಾದ ಆವಶ್ಯಕತೆ ಜಿ7 ದೇಶಗಳ ಮುಂದಿದೆ. ಆಗಷ್ಟೇ ಬೇರೆ ದೇಶಗಳು ಜಿ7ನ ಈ ಉದ್ದೇಶದ ಮೇಲೆ ನಂಬಿಕೆ ಇರಿಸಲಿವೆ.