Advertisement

ಕರಾವಳಿಗೆ ಜಿ20 ಸಭೆ ಆತಿಥ್ಯದ ಕನಸು!

11:51 PM Mar 28, 2023 | Team Udayavani |

ಮಂಗಳೂರು: ಮಹತ್ವದ ಜಿ20 ಕೂಟದ ಅಧ್ಯಕ್ಷ ಸ್ಥಾನ ಈ ಬಾರಿ ಭಾರತಕ್ಕೆ ದೊರೆತಿದೆ. ಇದರ ಅಂಗವಾಗಿ ವಿವಿಧ ಹಂತದ ಪ್ರತ್ಯೇಕ ಸಭೆಗಳು ದೇಶದ ನಾನಾ ಕಡೆಗಳಲ್ಲಿ ಆಯೋಜನೆಗೊಳ್ಳುತ್ತಿವೆ. ಈ ಪೈಕಿ ಒಂದಾದರೂ ಸಭೆಯ ಆತಿಥ್ಯ ವಹಿಸುವ ಅವಕಾಶ ದಕ್ಷಿಣ ಕನ್ನಡ ಹಾಗೂ ಉಡುಪಿಯನ್ನು ಒಳಗೊಂಡ ಕರಾವಳಿಗೆ ದೊರೆಯಲಿ ಎಂಬ ಒತ್ತಾಯ ಕೇಳಿಬಂದಿದೆ.

Advertisement

2022ರ ಡಿ. 1ರಿಂದ 2023ರ ನ. 30ರ ವರೆಗೆ ಒಂದು ವರ್ಷ ಕಾಲ ಜಿ20ನ ಕಾರ್ಯಕಲಾಪಗಳು ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿವೆ. ಇದರ ಅಂಗವಾಗಿ ದೇಶದ 55 ನಗರಗಳಲ್ಲಿ 200ಕ್ಕೂ ಹೆಚ್ಚು ಮಹತ್ವದ ಸಭೆಗಳು ಜರಗಲಿವೆ. ಸಭೆಯ ಆತಿಥ್ಯ ಕರಾವಳಿಗೆ ದೊರೆತರೆ ಜಾಗತಿಕವಾಗಿ ಗುರುತಿಸಿಕೊಳ್ಳುವಲ್ಲಿ ಸಹಕಾರಿಯಾಗಬಲ್ಲುದು ಎಂಬುದು ತಜ್ಞರ ಲೆಕ್ಕಾಚಾರ. ಕೆಸಿಸಿಐ ಕೂಡ ಕೇಂದ್ರ ವಿದೇಶಾಂಗ ಸಚಿವರಿಗೆ ಪತ್ರ ಬರೆದು ಅವಕಾಶ ಒದಗಿಸುವಂತೆ ಕೋರಿದೆ.

ಬೆಂಗಳೂರಿನಲ್ಲೇ 11 ಸಭೆ!
ಹೊಸದಿಲ್ಲಿಯ ಅನಂತರ ಕರ್ನಾಟಕವು ಅತೀ ಹೆಚ್ಚು, ಅಂದರೆ 14 ಸಭೆಗಳ ಆತಿಥ್ಯ ವಹಿಸಲಿದೆ. ಈ ಪೈಕಿ ಬೆಂಗಳೂರಿನಲ್ಲಿ 11, ಹಂಪಿಯಲ್ಲಿ ಎರಡು ಹಾಗೂ ಮೈಸೂರಿನಲ್ಲಿ ಒಂದು ಸಭೆ ನಡೆಯಲಿದೆ. ಬೆಂಗಳೂರಿನಲ್ಲಿಯೇ 11 ಸಭೆ ನಡೆಸುವ ಬದಲು ಕರಾವಳಿಯಲ್ಲಿ ಒಂದೆರಡು ಸಭೆ ಮಾಡಿದರೆ ಕರಾವಳಿಯ ಅಭಿವೃದ್ಧಿಗೆ ಜಾಗತಿಕವಾಗಿ ಹೆಚ್ಚು ಬಲ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ತಜ್ಞರು.

ಲಾಭವೇನು?
ಜಿ20 ಸದಸ್ಯ ದೇಶಗಳ ನೂರಾರು ಗಣ್ಯರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಆಗ ಕರಾವಳಿಯ ಸಾಂಸ್ಕೃತಿಕ ಹಾಗೂ ವಿವಿಧ ವಿಚಾರಗಳನ್ನು ಅವರಿಗೆ ಮನದಟ್ಟು ಮಾಡಬಹುದು. ಪ್ರವಾಸೋದ್ಯಮಕ್ಕೆ ಹೊಸ ಅವಕಾಶ ತೆರೆದುಕೊಳ್ಳಬಹುದು. ಕರಾವಳಿಯ ಶೈಕ್ಷಣಿಕ, ಆರ್ಥಿಕ, ಔದ್ಯಮಿಕ ಅಭಿವೃದ್ಧಿಗೆ ಇದು ಸಹಕಾರಿಯಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
ದ.ಕ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. “ಉದಯವಾಣಿ’ ಜತೆಗೆ ಮಾತನಾಡಿ, “ಜಿ20 ಸಭೆ ನಿಗದಿಯನ್ನು ಕೇಂದ್ರ ಸರಕಾರ ಮಾಡುತ್ತದೆ. ಅದರಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ, ಜಿಲ್ಲಾಡಳಿತಕ್ಕೆ ಮಾಹಿತಿ ಬರುತ್ತದೆ. ದ.ಕ. ಜಿಲ್ಲೆಯಲ್ಲಿ ಸಭೆ ನಡೆಸಬೇಕು ಎಂಬ ಬಗ್ಗೆ ಒತ್ತಾಯ ಕೇಳಿಬಂದಿದೆ. ಆದರೆ ಇದರ ತೀರ್ಮಾನ ಕೇಂದ್ರದಿಂದಲೇ ಆಗಬೇಕು’ ಎಂದಿದ್ದಾರೆ.

ಜಿ20 ಸಭೆಗಳ ಪೈಕಿ ಒಂದನ್ನಾದರೂ ಮಂಗಳೂರಿನಲ್ಲಿ ಆಯೋಜಿಸಲು ಸರಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ.
– ಎಂ. ಗಣೇಶ್‌ ಕಾಮತ್‌, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

Advertisement

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯನ್ನು ಒಳಗೊಂಡ ಕರಾವಳಿ ಭಾಗದಲ್ಲಿಯೂ ಜಿ20 ಸಭೆ ನಡೆಸಿದರೆ ಇಲ್ಲಿನ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಆದ್ಯತೆ ನೀಡಬೇಕಿದೆ.
– ಅಂಡಾರು ದೇವಿಪ್ರಸಾದ್‌ ಶೆಟ್ಟಿ , ಅಧ್ಯಕ್ಷರು, ಉಡುಪಿ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌

Advertisement

Udayavani is now on Telegram. Click here to join our channel and stay updated with the latest news.

Next