Advertisement
50 ವರ್ಷಕ್ಕೂ ಮೀರಿ, ಪದಗಳೊಟ್ಟಿಗೆ ಸಂಸಾರ ನಡೆಸಿದ ಜಿ. ವೆಂಕಟಸುಬ್ಬಯ್ಯ ಅವರ ನಿಘಂಟಿನ ತಪಸ್ಸು ಈ ಪರಿಯದ್ದು. ಬಹುಶಃ ಅಷ್ಟು ಸುದೀರ್ಘ ಕಾಲದ ತ್ಯಾಗ ಒಬ್ಬ ವಿಜ್ಞಾನಿಗೆ ನೊಬೆಲ್ ಅನ್ನು; ನಟನಾಗಿದ್ದಿದ್ದರೆ, ಆಸ್ಕರನ್ನೋ; ಕಥೆಗಾರನೋ- ಕವಿಯೋ ಆಗಿದ್ದಿದ್ದರೆ ಅವಾರ್ಡುಗಳ ಮಳೆಯನ್ನೇ ಎದುರಿಡುತ್ತಿತ್ತು. ಆದರೆ ಜಿ. ವೆಂಕಟಸುಬ್ಬಯ್ಯ ಮುಂದೆ ಇದ್ದಿದ್ದು ಅಂಥ ಕೀರ್ತಿಗಳ, ರಂಜನೆಗಳ, ಕಲ್ಪನೆಗಳ ಹಾದಿಗಳಲ್ಲ; ನಿಘಂಟು ಎಂಬ ಪುಟ್ಟ ಬಡ ಕೂಸು. ಒಂದೊಂದೇ ಪದಗಳನ್ನು ಹೆಕ್ಕಿ, ಅದಕ್ಕಿರುವ ಅರ್ಥಗಳನ್ನು ವಿಸ್ತರಿಸುತ್ತಲೇ, ಅವರು ಭಾಷೆಯನ್ನು “ಸ್ಟಾರ್’ ಆಗಿಸುವ ಕೆಲಸ ಮಾಡಿದ್ದರು. ಅಪರೂಪದ ಭಾಷಾತಜ್ಞ ರಾಗಿದ್ದ ಜಿ.ವಿ., ಸಂಶೋಧನೆ, ಅನುವಾದ ರಚನೆಗಳಲ್ಲೂ ಅಸಾಮಾನ್ಯ ಕೊಡುಗೆಗಳನ್ನು ನೀಡಿದ್ದರು. ಭಾಷೆಯ ಜತೆಗೇ ಲೇಖಕರಾಗಿ ಜೀವಿಸಿದ್ದರು.
ಡಿಎಲ್‌ಎನ್‌ಗೆ ವಿಸ್ಮಯ ಹುಟ್ಟಿಸಿತ್ತು. ಪಂಪನಿಂದ ಪುಟ್ಟಪ್ಪನವರೆಗಿನ ಕವಿ, ಸಾಹಿತಿಗಳ ರಚನೆಗಳಲ್ಲಿನ ಪದಗಳನ್ನು ಶ್ರದ್ಧೆಯಿಂದ ಹೆಕ್ಕಿ ತೆಗೆದರು ಜಿ.ವಿ. ಎ.ಆರ್. ಕೃಷ್ಣಶಾಸ್ತ್ರಿಗಳು ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾದಾಗ, ಜಿ.ವಿ. ಅವರನ್ನು ಮನೆಗೆ ಆಹ್ವಾನಿಸಿ, ಸಂಸ್ಕೃತ ನಿಘಂಟನ್ನು ಕೈಗಿಟ್ಟು ಪಾಠ ಮಾಡಿ, ಪದಗಳ ರುಚಿಯನ್ನು ಇನ್ನಷ್ಟು ಹತ್ತಿಸಿದರು. ಮುಂದೊಂದು ದಿನ ಜಿ.ವಿ. ಅವರೇ ಪರಿಷತ್ತಿನ ನಿಘಂಟಿಗೆ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. “ನಡೆದಾಡುವ ನಿಘಂಟು’ ಅಂತಲೇ ಖ್ಯಾತಿ ಪಡೆದರು.
Related Articles
Advertisement
ಇಗೋ ಕನ್ನಡ: 3 ಭಾಷೆಗಳ ಅಧ್ಯಯನ ಮಾಡಿ, ದೈನಿಕವೊಂದಕ್ಕೆ ಜಿ.ವಿ. ಬರೆಯುತ್ತಿದ್ದ “ಇಗೋ ಕನ್ನಡ’ ಅಂಕಣ, ಅತ್ಯಂತ ಜನಪ್ರಿಯವಾಗಿತ್ತು. ಸುಮಾರು 18 ವರ್ಷಗಳ ಕಾಲ, ಪ್ರತೀ ರವಿವಾರ ಮೂಡಿಬರುತ್ತಿದ್ದ ಈ ಅಂಕಣ ಬರಹಗಳು, ಭಾಷೆಯನ್ನು ಬಗೆಬಗೆಯಲ್ಲಿ ಸವಿ ಯುವಂತೆ ಪ್ರೇರೇಪಿ ಸಿದ್ದವು. ನವ ಕರ್ನಾಟಕ ಪ್ರಕಾಶ ನವು ಇದನ್ನು “ಇಗೋ ಕನ್ನಡ- ಸಾಮಾಜಿಕ ನಿಘಂಟು’ ಎಂಬ ಶೀರ್ಷಿಕೆಯಲ್ಲಿ 4 ಸಂಪುಟಗಳಲ್ಲಿ ಪ್ರಕಟಿಸಿದೆ. ಪದಗಳ ವ್ಯುತ್ಪತ್ತಿ, ಅರ್ಥ, ಶಬ್ದ ದೋಷ, ಪ್ರಶ್ನೋತ್ತರ ಇತ್ಯಾದಿ ವಿವರಣೆಗಳನ್ನು ಒಳಗೊಂಡ ಈ ಕೃತಿ, ಕನ್ನಡ ಭಾಷೆಗೆ ಸಾರ್ವಕಾಲಿಕ ದಾರಿದೀಪ. ಇತ್ತೀಚೆಗೆ ಜಿ.ವಿ. ಅವರಿಗೆ ನಡೆದಾಡಲು ಸಾಧ್ಯವಾಗದೆ, ಹಾಸಿಗೆ ಹಿಡಿದಾಗಲೂ, ಪದಕೃಷಿ ನಿಲ್ಲಿಸಿರಲಿಲ್ಲ. ಮಗ ಜಿ.ವಿ. ಅರುಣ್ ಅವರಿಗೆ, “ಆ ಪುಸ್ತಕ ಕೊಡು, ಹೀಗೆ ಮಾಡು, ಅದು ಹಾಗಾಗಬೇಕು’ ಎಂದು ಹೇಳುತ್ತಾ, ಸಣ್ಣಪುಟ್ಟ ಕೆಲಸದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. 70- 80 ವರ್ಷಗಳ ಹಿಂದೆ ಬಳಸಿದ ಪದಗಳನ್ನೂ ಗಕ್ಕನೆ ನೆನಪಿಗೆ ತಂದುಕೊಂಡು, ಅದರ ಅರ್ಥ ವಿವರಿಸುತ್ತಿದ್ದರು. ಕನ್ನಡ ನುಡಿಯ ಅರ್ಥ, ಅಂತರಾರ್ಥ, ಆಳ- ವಿಸ್ತಾರಗಳ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಕೆಲವೇ ವಿದ್ವಾಂಸರ ಪೈಕಿ, ಜಿ.ವಿ.ಯೂ ಒಬ್ಬರಾಗಿದ್ದರು. ಇಂದು ಅವರಿಲ್ಲ ಎನ್ನಲು ಯಾರೂ ಸಿದ್ಧರಿಲ್ಲ. ಜಿ.ವಿ. ಶೋಧಿಸಿದ ಪದಗಳು ನಮ್ಮೊಟ್ಟಿಗೆ ಇವೆ. ಭಾಷೆ ಇರುವ ತನಕ ಜಿ.ವಿ.ಯೂ ಇದ್ದೇ ಇರುತ್ತಾರೆ.
ಕನ್ನಡದ ಕಿಟ್ಟೆಲ್ ನಡೆದು ಬಂದ ಹಾದಿಜನನ: ಆಗಸ್ಟ್ 23, 1913
ಸ್ಥಳ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾ| ಗಂಜಾಂ
ಹೆತ್ತವರು: ಗಂಜಾಂ ತಿಮ್ಮಣ್ಣಯ್ಯ, ಸುಬ್ಬಮ್ಮ
ವ್ಯಾಸಂಗ: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ, ಬಿ.ಟಿ. ಪದವಿ
ಹುದ್ದೆ: ಮಂಡ್ಯದ ಮುನ್ಸಿಪಲ್ ಹೈ ಸ್ಕೂಲ್‌ನಲ್ಲಿ ಶಿಕ್ಷಕರಾಗಿ ವೃತ್ತಿಬದುಕು ಆರಂಭ. ಅನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ರಾಗಿ ಸೇರಿ, ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ. ಪುರಸ್ಕಾರಗಳು
ಪದ್ಮಶ್ರೀ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ (2015), ನಾಡೋಜ ಗೌರವ, ಭಾಷಾ ಸನ್ಮಾನ್ ಪುರಸ್ಕಾರ, ಸೇಡಿಯಾಪು ಪ್ರಶಸ್ತಿ, ಮುದ್ದಣ ಪುರಸ್ಕಾರ, ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, ಗೋಕಾಕ್ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, ವನಮಾಲಿ ಪ್ರಶಸ್ತಿ ಬಿರುದುಗಳು
ನಡೆದಾಡುವ ನಿಘಂಟು, ನಿಘಂಟು ಸಾರ್ವಭೌಮ, ಶಬ್ದಬ್ರಹ್ಮ, ಕನ್ನಡದ ಕಿಟ್ಟೆಲ…, ಶಬ್ದ ಗಾರುಡಿಗ, ಶಬ್ದಸಂಜೀವಿನಿ, ವಿದ್ಯಾಲಂಕಾರ, ಪದಗುರು, ಪದಜೀವಿ, ಶಬ್ದಸಾಗರ, ಶಬ್ದಶಿಲ್ಪಿ ಪದಗಳ ಕಣಜ, ಇತ್ಯಾದಿ. ಕೃತಿಗಳು: ಇಗೋ ಕನ್ನಡ- ಸಾಮಾಜಿಕ ನಿಘಂಟು ಸಂಪುಟ-1-4, ನಳಚಂಪು, ನಯಸೇನ, ಅನುಕಲ್ಪನೆ, ಅಕ್ರೂರ ಚರಿತ್ರೆ, ಲಿಂಡನ್ ಜಾನ್ಸನ್ ಕಥೆ, ಸಂಯುಕ್ತ ಸಂಸ್ಥಾನ ಪರಿ ಚಯ, ಶಂಕರಾಚಾರ್ಯ, ಇದು ನಮ್ಮ ಭಾರತ, ಸರಳಾದಾಸ್, ಕಬೀರ್, ರತ್ನಾಕರವರ್ಣಿ, ದಾಸ ಸಾಹಿತ್ಯ, ವಚನ ಸಾಹಿತ್ಯ, ಶಾಸನ ಸಾಹಿತ್ಯ, ಷಡಕ್ಷರ ದೇವ, ಸರ್ವಜ್ಞ, ಇಣುಕುನೋಟ, ಕನ್ನಡ ಸಾಹಿತ್ಯ ನಡೆದು ಬಂದ ದಾರಿ, ಕನ್ನಡ ಶಾಸನ ಪರಿಚಯ, ಕನ್ನಡದ ನಾಯಕಮಣಿಗಳು, ಕರ್ನಾಟಕ ವೈಭವ ಮತ್ತು ಇತರ ಶಬ್ಧ ಚಿತ್ರಗಳು, ಕನ್ನಡ- ಕನ್ನಡ- ಇಂಗ್ಲಿಷ್ ನಿಘಂಟು, ಕನ್ನಡ- ಕನ್ನಡ ಕ್ಲಿಷ್ಟ ಪದಕೋಶ, ಮುದ್ದಣ ಭಂಡಾರ ಭಾಗ 1- 2, ಮುದ್ದಣ ಪ್ರಯೋಗಕೋಶ, ಕಾವ್ಯಲ ಹರಿ, ಕಾವ್ಯ ಸಂಪುಟ, ಇಂಗ್ಲಿಷ್- ಕನ್ನಡ ನಿಘಂಟು, ಕುಮಾರವ್ಯಾಸನ ಅಂತರಂಗ, ತಮಿಳು ಕಥೆಗಳು, ನಾಗರಸನ ಭಗವದ್ಗೀತೆ, ಕರ್ಣ ಕರ್ಣಾಮೃತ, ಎರವಲು ಪದಕೋಶ.