Advertisement
*ನೀವು ಈ ಬಾರಿ ಮಾಜಿ ಪ್ರಧಾನಿಯನ್ನು ಎದುರಿಸುತ್ತಿದ್ದೀರಿ, ಈ ಚುನಾವಣೆ ನಿಮಗೆ ಏನು ಅನಿಸುತ್ತಿದೆ?ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಗೌರವವಿದೆ. ಅವರು ಜಿಲ್ಲೆಗೆ ನೀರು ಹರಿಸಲು ಮಾಡಿರುವ ಅನ್ಯಾಯ ಜನರಲ್ಲಿ ಅವರ ಕುಟುಂಬದ ಬಗ್ಗೆ ಅಸಮಾಧಾನ ಮೂಡಿಸಿದೆ. ರೇವಣ್ಣ ಮತ್ತು ಭವಾನಿ ನೀರು ಹರಿಸಬಾರದು ಎಂದು ಮಾಡಿರುವ ಧರಣಿಯ ವೀಡಿಯೋ ವೈರಲ್ ಆಗಿದೆ. ಆದರಿಂದ ಈ ಬಾರಿ ನನ್ನ ವಿರುದ್ಧ ಮಾಜಿ ಪ್ರಧಾನಿ ಸ್ಪರ್ಧಿಸಿದ್ದಾರೆ. ಅವರನ್ನು ಎದುರಿಸಲು ತುಮಕೂರು ಕ್ಷೇತ್ರದ ಮತದಾರರು ಶಕ್ತಿ ನೀಡುತ್ತಾರೆ.
ಕಳೆದ 35 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ನಾನು ನಾಲ್ಕು ಬಾರಿ ಸಂಸದನಾಗಿಮಾಡಿರುವ ಕೆಲಸಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಹೇಮಾವತಿ, ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಮೂರು ಬೃಹತ್ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಶ್ರಮವಿದೆ. ಮೂರು ರೈಲ್ವೇ ಮಾರ್ಗ, ಮೂರು ಹೆದ್ದಾರಿಗಳ ಮಂಜೂರು, ಫುಡ್‌ಪಾರ್ಕ್ ನಿರ್ಮಾಣ, ನಿಮ್j ಯೋಜನೆ, ಮನೆ ಮನೆಗೆ ಗ್ಯಾಸ್ ಯೋಜನೆ ಸೇರಿದಂತೆ ಹಲವಾರು ಯೋಜನೆ ತಂದಿದ್ದೇನೆ. * ದೇವೇಗೌಡರ ಬಗ್ಗೆ ನೀರಿನ ವಿಷಯವನ್ನೇ ಎತ್ತಿ ಮಾತನಾಡುತ್ತಿದ್ದಿರಲ್ಲ. ಬೇರೆ ವಿಷಯವಿಲ್ಲವೇ?
ಇಂದು ನೀರು ಅತಿ ಮುಖ್ಯ. ನಾವು ಹಾಸನ ಜಿಲ್ಲೆಯ ನೀರು ಕೇಳುತ್ತಿಲ್ಲ. ನಮಗೆ ಬರಬೇಕಾಗಿರುವ ನೀರಿನ ಪಾಲು ಕೇಳುತ್ತಿದ್ದೇವೆ. ಕಳೆದ ವರ್ಷ 60 ಟಿಎಂಸಿ ನೀರು ಸಮುದ್ರದ ಪಾಲಾಯಿತು. ನಮಗೆ ಬರಬೇಕಾಗಿರುವ 24 ಟಿಎಂಸಿ ನೀರು ಬರಲಿಲ್ಲ. ನಮ್ಮ ಕೆರೆಕಟ್ಟೆಗಳಿಗೆ ನೀರು ಹರಿದಿಲ್ಲ. ಲೆಕ್ಕಕ್ಕೆ ಮಾತ್ರ ನೀರು ಹರಿದಿದೆ. ನೀರು ಎಲ್ಲಿದೆ ತೋರಿಸಿ. ಜಿಲ್ಲೆಗೆ ವಂಚನೆಯಾಗಿದೆ. ಅದನ್ನು ಜನರಿಗೆ ಹೇಳುತ್ತಿದ್ದೇವೆ. ಜಿಲ್ಲೆಯ ಜನರು ಬುದ್ಧಿವಂತರಿದ್ದಾರೆ. ಯಾರನ್ನು ಗೆಲ್ಲಿಸಬೇಕು ಎನ್ನುವುದು ಅವರಿಗೆ ಗೊತ್ತಿದೆ.
Related Articles
ಸಂಸದರಾಗಿದ್ದ ಮುದ್ದಹನುಮೇಗೌಡರು ಸಜ್ಜನ ವ್ಯಕ್ತಿ. ನಾನು ಎಂದೂ ಅವರನ್ನು ನೇರವಾಗಿ ಟೀಕೆ ಮಾಡಿರಲಿಲ್ಲ. ಅವರಿಗೆ ಟಿಕೆಟ್ ಕೊಡಬೇಕಾಗಿತ್ತು. ಅವರಿಗೆ ಟಿಕೆಟ್ ವಂಚನೆಯಾಗಿರುವ ಬಗ್ಗೆ ನಾನು ಎಂದೂ ಅವರನ್ನು ಭೇಟಿ ಮಾಡಿಲ್ಲ. ಹಾಗೆಯೇ ರಾಜಣ್ಣ ಅವರನ್ನೂ ಭೇಟಿ ಮಾಡಿಲ್ಲ. ಹೊಂದಾಣಿಕೆ ಮಾಡಿಕೊಂಡು ಒಬ್ಬ ನಾಯಕನನ್ನು ತುಳಿದಿದ್ದಾರೆ. ಈ ಹಿಂದೆ ಹಲವು ಒಕ್ಕಲಿಗರನ್ನು ಮೂಲೆ ಗುಂಪು ಮಾಡಿದ್ದಾರೆ. ಈಗ ಜಿಲ್ಲೆಯ ಒಕ್ಕಲಿಗರನ್ನೇ ನಂಬುತ್ತಿಲ್ಲ. ಮುಂದೆ ಇಡೀ ಜಿಲ್ಲೆಗೆ ಅವರ ಕುಟುಂಬದವರನ್ನು ತರುತ್ತಾರೆ.
ಈಗ ಅವರ ಮತ್ತೂಬ್ಬ ಸೊಸೆ ಡಾ.ರಮೇಶ್ ಪತ್ನಿ ಓಡಾಡುತ್ತಿದ್ದಾರೆ. ಮುಂದೆ ಗ್ರಾಮಾಂತರಕ್ಕೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
Advertisement
* ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಅಲೆ ಹೇಗಿದೆ?ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಬಿಜೆಪಿ ಅಲೆ ಜೋರಾಗಿದೆ. ಐದು ವರ್ಷಗಳ ನರೇಂದ್ರ ಮೋದಿ ಅವರ ಆಡಳಿತ ಜನರಿಗೆ ಇಷ್ಟವಾಗಿದೆ. ಎಲ್ಲೆಲ್ಲಿಯೂ ಮೋದಿ ಹೆಸರು ಕೇಳಿಬರುತ್ತಿದೆ. ಎಲ್ಲ ವರ್ಗದ ಜನ ಮೋದಿಯನ್ನು ನೋಡಿ ಮತ ಹಾಕುತ್ತಾರೆ. ಮಧುಗಿರಿ ಕೊರಟಗೆರೆ ಸೇರಿದಂತೆ ಎಲ್ಲ ಕಡೆ ಈ ಬಾರಿ ಒಳ್ಳೆಯ ವಾತಾವರಣವಿದೆ. ಗೆಲ್ಲುವ ವಿಶ್ವಾಸವೂ ಇದೆ. * ಜಿಲ್ಲೆಯಲ್ಲಿ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಯಾವ ಯೋಜನೆ ಮಾಡಬೇಕು ಎಂದಿದ್ದೀರಿ?
ತುಮಕೂರು ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆ ತೆಂಗು. ಆದರೆ, ಇಂದು ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ತೋಟಗಳು ನೀರಿಲ್ಲದೇ ಒಣಗಿ ಹೋಗುತ್ತಿವೆ. ಅಂತರ್ಜಲ ಕುಸಿದಿದೆ. ರೈತನ ಬದುಕು ಹಸನಾಗಬೇಕಾಗಿದೆ. ಈ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ, ಅನುಕೂಲ ಮಾಡಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಾದರೂ ಸಿಗಬೇಕು. ರೈತರಿಗೆ ಅನುಕೂಲವಾಗುವ ಯೋಜನೆಗಳು ಆಗಬೇಕು. * ಹೇಮಾವತಿ ನಾಲೆ ಅಭಿವೃದ್ಧಿ ಕುರಿತು ದೇವೇಗೌಡರು ತುಟಿ ಬಿಚ್ಚುತ್ತಿಲ್ಲ. ಇದಕ್ಕೆ ಏನಂತಿರಾ?
ಹಾಸನಕ್ಕೆ 17 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ, ಅವರು 40ಟಿಎಂಸಿ ನೀರು ಬಳಸುತ್ತಿದ್ದಾರೆ. ನಮಗೆ ಆಗ 30 ಟಿಎಂಸಿ ನೀರು ಹಂಚಿಕೆಯಾಗಿತ್ತು. ನಮಗೆ 24.4 ಟಿಎಂಸಿಗೆ ಇಳಿಸಿದರು. ಈ ನೀರನ್ನೂ ಬಿಡುತ್ತಿಲ್ಲ. ಇದರ ವಿರುದ್ಧ ಹೋರಾಟ ಮಾಡಿದ್ದೇವೆ. ಈಗ ನಮಗೆ ಹಂಚಿಕೆ ಮಾಡಿರುವ ನೀರಿನಲ್ಲಿ ಸುಮಾರು 1ಟಿಎಂಸಿ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಗುಬ್ಬಿ ತಾಲೂಕು ಕಡಬಾದಿಂದ ಕುಣಿಗಲ್ ತಾಲೂಕು ಕೊತ್ತಗೆರೆವರೆಗೆ ಪೈಪ್
ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲು 614ಕೋಟಿ ರೂ. ಹಣ ಖರ್ಚು ಮಾಡುತ್ತಿದ್ದಾರೆ. ಇಲ್ಲಿಂದಲೇ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲು ಬಿಳಿ ಎತ್ತು ಮತ್ತು ಕರಿ ಎತ್ತು ಮುಂದಾಗಿರುವುದು ಜಿಲ್ಲೆಯ ಜನರಿಗೆ ಮರಣಶಾಸನವಾಗಿದೆ. ಹೇಮಾವತಿ ನಾಲೆ ಅಗಲೀಕರಣ ಮಾಡಿ ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ದೇವೇಗೌಡರು ಮಾತನಾಡುತ್ತಿಲ್ಲ ಎಂದರೆ ಇದರ ಅರ್ಥವೇನು ಎನ್ನುವುದು ಜನರಿಗೆ ತಿಳಿಯುತ್ತದೆ. ಇದು ಗೆಲುವಿನ ತಂತ್ರ ಅಷ್ಟೆ
ತುಮಕೂರು ಜಿಲ್ಲೆ ಬಹುತೇಕ ಬಯಲು ಸೀಮೆ ಪ್ರದೇಶವಾಗಿದೆ. ನೀರಾವರಿ ಯೋಜನೆಗಳ ಅನುಷ್ಠಾನ ಮಂದಗತಿಯಲ್ಲಿದೆ. ಸದಾ ಬರಗಾಲ ಎದುರಿಸುವ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಇಲ್ಲಿಯ ಜನರಿಗೆ ಜೀವನಾಡಿ ಹೇಮಾವತಿ ಸುಪ್ರೀಂ ಕೋರ್ಟ್ ಆದೇಶದಂತೆ 24.5 ಟಿಎಂಸಿ ನೀರು ಜಿಲ್ಲೆಗೆ ಹರಿದು ಬರಬೇಕು. ಆದರೆ, ಹಾಸನದ ರಾಜಕಾರಣ ಜಿಲ್ಲೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ತುಮಕೂರು ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಮಾಡುವ ದೇವೇಗೌಡರು ಈಗ ಜಿಲ್ಲೆಗೆ ನೀರು ಹರಿಸುತ್ತೇನೆ ಎನ್ನುತ್ತಿದ್ದಾರೆ. ಇದು ಗೆಲುವಿನ ತಂತ್ರ. ಜಿಲ್ಲೆಯ ಜನರು ಇವರ ಮಾತುಗಳಿಗೆ ಮಾರು ಹೋಗುವುದಿಲ್ಲ.