ಬೆಂಗಳೂರು: ಹೈಕೋರ್ಟ್‌ಗೆ ಕೊಟ್ಟ ಭರವಸೆಯಂತೆ ಜಿ.ಪಂ.-ತಾ.ಪಂ. ಚುನಾವಣೆ ಸಂಬಂಧ ಚಟುವಟಿಕೆಗಳನ್ನು ಚುರುಕುಗೊಳಿಸಿ ರುವ ರಾಜ್ಯ ಸರಕಾರ, ಕ್ಷೇತ್ರ ಪುನರ್‌ವಿಂಗಡನೆ ಹಾಗೂ ಪ್ರವರ್ಗವಾರು ಮೀಸಲು ಸ್ಥಾನಗಳನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಜಿ.ಪಂ. ಹಾಗೂ ತಾ.ಪಂ.ಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು ಸದಸ್ಯ ಸ್ಥಾನಗಳಿಗೆ ಸಾಮಾನ್ಯ ಮತ್ತು ಮೀಸಲು ಪ್ರವರ್ಗಗಳನ್ನು ನಿಗದಿಪಡಿಸಲಾಗಿದೆ. ಇದಾದ ಬಳಿಕ ಕ್ಷೇತ್ರವಾರು ಮೀಸಲಾತಿಗೆ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಆಹ್ವಾನಿಸಿದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು.
ರಾಜ್ಯದ 31 ಜಿಲ್ಲಾ ಪಂಚಾಯತ್‌ಗಳಿಗೆ ಚುನಾಯಿತರಾಗಬೇಕಾದ 1,126 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಅದನ್ನು ಸರಕಾರ ಒಪ್ಪಿಕೊಂಡಿದೆ. ತಾಂತ್ರಿಕ ಕಾರಣಗಳಿಂದಾಗಿ ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ 30 ಜಿ.ಪಂ.ಗಳಿಗೆ ಚುನಾಯಿತರಾಗಬೇಕಾದ 1,101 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಆದೇಶಿಸಲಾಗಿದೆ. ರಾಜ್ಯದ 239 ತಾ. ಪಂ.ಗಳಿಗೆ ಚುನಾಯಿತರಾಗಬೇಕಾದ 3,671 ಸದಸ್ಯರ ಸಂಖ್ಯೆಯಲ್ಲಿ ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳ 234 ತಾ. ಪಂ.ಗಳಿಗೆ ಚುನಾಯಿತರಾಗಬೇಕಾದ 3,621 ಸದಸ್ಯರ ನಿರ್ಧರಿಸಿ ಆದೇಶಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಒಟ್ಟು ಸ್ಥಾನಗಳ ಸಾಮಾನ್ಯ ಮತ್ತು ಮೀಸಲು ಪ್ರವರ್ಗಗಳಲ್ಲಿ ಮಹಿಳೆಯ ರಿಗೆ ಶೇ.50ರಷ್ಟು ಸ್ಥಾನಗಳನ್ನು, ಎಸ್ಸಿ-ಎಸ್ಟಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಲಾಗಿದೆ. ಮೀಸಲಾತಿ ಪ್ರಮಾಣ ಶೇ.50 ದಾಟಬಾರದು ಎಂಬ ಸುಪ್ರೀಂಕೋರ್ಟ್ ಆದೇಶದನ್ವಯ ಮತ್ತು ನ್ಯಾ| ಭಕ್ತವತ್ಸಲ ಸಮಿತಿ ಶಿಫಾರಸಿನಂತೆ ಶೇ.50ರ ಮೀಸಲಾತಿ ಮೀತಿಯಲ್ಲೇ ಒಬಿಸಿಗಳಿಗೆ ಶೇ.33ರಷ್ಟು ಸ್ಥಾನಗಳನ್ನು ನಿಗದಿಪಡಿಸಬೇಕಾಗುತ್ತದೆ. ಇದು ಆಯಾ ಜಿಲ್ಲೆ ಮತ್ತು ತಾಲೂಕಿನ ಎಸ್ಸಿ-ಎಸ್ಟಿ ಜನಸಂಖ್ಯೆ ಮೇಲೆ ಅವಲಂಬಿತ ವಾಗಿದ್ದು, ಜಿಲ್ಲೆಯಿಂದ ಜಿಲ್ಲೆ ಮತ್ತು ತಾಲೂಕಿನಿಂದ ತಾಲೂಕಿಗೆ ಒಬಿಸಿ ಸ್ಥಾನಗಳ ಮೀಸಲು ನಿಗದಿಯಲ್ಲಿ ವ್ಯತ್ಯಾಸ ಇರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.